60 ವರ್ಷದನಂತರದ ಜೀವನ ಅಥವಾ ನಿವೃತ್ತಜೀವನಕ್ಕೆ ಮುನ್ನೆಚ್ಚರಿಕೆಗಳು.
1. ನಿಮ್ಮ ವಿವಾಹಿತ ಮಕ್ಕಳೊಂದಿಗೆ ಬಾಳಬೇಡಿ. ಅವರ ಪಕ್ಕದ ಮನೆಯಲ್ಲೋ, ಮೇಲಿನ ಮನೆಯಲ್ಲೋ, ಪಕ್ಕದ ಫ್ಲ್ಯಾಟ್‌ನಲ್ಲೋ ಇರಿ. ಅವರಿಗೆ ಅವರ ಸ್ವೇಚ್ಛೆ ಇರುತ್ತದೆ ಮತ್ತು ನಿಮಗೆ ನಿಮ್ಮ ಸ್ವೇಚ್ಛೆ ಉಳಿದುಕೊಳ್ಳುತ್ತದೆ. ಅಂದ ಹಾಗೆ ಅವರಾಗಿ ಕೇಳುವವರೆಗೂ ಸಲಹೆಗಳನ್ನು ಕೊಡಲು ಹೋಗಬೇಡಿ.
2. ನಿಮ್ಮ ಜೀವನ ಸಂಗಾತಿಯನ್ನು ಮೊದಲಿಗಿಂತ ಹೆಚ್ಚು ಪ್ರೀತಿಸಿ. ನಗುನಗುತ್ತಾ ಮಾತನಾಡಿ. ಎಷ್ಟು ಸಾಧ್ಯವೋ ಅಷ್ಟು ಪ್ರವಾಸ ಮಾಡಿ, ಇಬ್ಬರೂ ಒಟ್ಟಿಗೇ!
3. ಹಣ ಖರ್ಚಾಗುವುದೆಂಬ ನೆಪ ಮಾಡದೇ ಕ್ರಮಬದ್ಧವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಹಿಂದೆಗೆಯಬೇಡಿ.
4. ನಿಮ್ಮ ಸಂಪತ್ತನ್ನು ಚೆನ್ನಾಗಿ ನೋಡಿಕೊಳ್ಳಿ. ಬೇರೆಯವರ ಕೈಗೆ ಸೇರದಂತೆ ಎಚ್ಚರ ವಹಿಸಿ. ನಯವಂಚಕರ ಬಗ್ಗೆ ಜಾಗ್ರತೆ ಇರಲಿ. ಹತ್ತಿರದವರು, ನಾವು ನಂಬಿರುವ ಜನರು ಮಾತ್ರವೇ ನಮಗೆ ಮೋಸ ಮಾಡಲು ಸಾಧ್ಯ. ಹೊಸ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ಸಿಗುವುದೆಂಬ ಆಮಿಷಕ್ಕೆ ಬಲಿಯಾಗದಿರಿ.
5. ಚಿಕ್ಕದಾದರೂ ಸರಿಯೇ… ಮಕ್ಕಳು, ಮೊಮ್ಮಕ್ಕಳು, ಸಮೀಪ ಬಂಧುಗಳಿಗೆ ಪ್ರತಿ ಸಮಾರಂಭದಲ್ಲೂ ಕಾಣಿಕೆ ನೀಡುತ್ತಿರಿ.
6. ನಿಮ್ಮ ಹಿತೈಷಿಗಳೊಂದಿಗೆಲ್ಲ ಫೋನ್ ಮೂಲಕ ಸಂಪರ್ಕದಲ್ಲಿರಿ.
7. ಹೆಸರುಗಳು ಮತ್ತು ಸಮಾರಂಭಗಳ ಬಗ್ಗೆ ನಿಮಗೆ ನೆನಪು ಉಳಿಯದಿರಬಹುದು. ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ.
8. ಹೊರಗೆ ಹೋಗುವಾಗ ದಿನವೂ ಶೇವ್ ಮಾಡಿಕೊಂಡು ಒಳ್ಳೆಯ ಉಡುಪು ಧರಿಸಿ ಪುರುಷರೇ. ಇಲ್ಲದಿದ್ದರೆ ರೋಗ ಬಂದವರಂತೆ ನೀವು ಕಾಣಿಸಬಹುದು.
9. ನಿಮ್ಮ ಕುಟುಂಬದ ವೈದ್ಯರಿಗೆ ಪ್ರತಿ ಸನ್ನಿವೇಶದಲ್ಲಿ ಹಲೋ ಹೇಳುತ್ತಿರಿ.
10. ಹೊರಗೆ ಹೆಚ್ಚು ತಿನ್ನುವುದು, ಕುಡಿಯುವುದು ಮಾಡಬೇಡಿ. ಹೊಟೇಲ್‌ಗಳಲ್ಲಿ ತಿನ್ನುವುದನ್ನು ತಪ್ಪಿಸಲು ನೋಡಿ.
11. ಮನೆಯಲ್ಲಿ ರಕ್ಷಣಾ ವ್ಯವಸ್ಥೆಯಾಗಿ ಅಲಾರಂ ಇರಲಿ. ವಾಕಿಂಗ್ ಸ್ಟಿಕ್, ಟಾರ್ಚ್, ವ್ಹಿಜಲ್ ಮತ್ತು ಶಬ್ದ ಮಾಡಲು ಪಟಾಕಿ ಇಟ್ಟುಕೊಳ್ಳಿ. ಇವೆಲ್ಲವೂ ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗುತ್ತವೆ.
12. ಎಷ್ಟೇ ನಂಬಿಕೆಯ ಮನೆಗೆಲಸದವರಿದ್ದರೂ ಅವರೆದುರಿಗೆ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಇಡದಿರಿ.
13. ನಿಮ್ಮ ಎಲ್ಲ ಹಣದ ಅಕೌಂಟುಗಳಿಗೆ ಈಗಲೇ ನಾಮಿನೇಶನ್ ಮಾಡಿ.
14. ಬಡವರೋ, ಶ್ರೀಮಂತರೋ ಉಯಿಲು ಮಾಡಿಡುವುದು ಮುಖ್ಯ.
15. ಅರವತ್ತು ವರ್ಷಗಳ ನಂತರ ಜೀವನದ ಅನಿಶ್ಚಿತತೆ ನಿಶ್ಚಿತವಾಗುತ್ತದೆ. ಕರೆ ಬಂದಾಗ ನಡೆ ಮಂಕುತಿಮ್ಮ ತತ್ವದಂತೆ ಹೊರಡುತ್ತಿರಿ.
16. 60ರ ನಂತರ ಇತರರಿಗಿಂತ ನಮ್ಮ ಯೋಗಕ್ಷೇಮ ನಮಗೆ ಮುಖ್ಯ. ಇದು ಸಾಮಾನ್ಯವಾದ ಸಂಗತಿ. ನೀವು 80ರ ನಂತರವೂ ಬದುಕಿದ್ದರೆ ಬಂಧುಗಳು ಹೇಗೆ ಮತ್ತು ಏಕೆ ಎಂದು ಅಚ್ಚರಿ ಪಡುತ್ತಾರೆ. ಇದೂ ಕೂಡ ಸಾಮಾನ್ಯ.
-ಮುರಳಿಧರ ಕುಲಕರ್ಣಿ