ಕರುನಾಡ ಸಿರಿ ಸೇವಾ ಪ್ರಶಸ್ತಿ ಪ್ರಧಾನ | ಡಾ. ಎಚ್.ಎಲ್.ಪುಷ್ಪ ಹೇಳಿಕೆ
ಅಶಕ್ತರಿಗೆ ಆಸರೆಯಾಗಿ ಸಂಘಟನೆ ಬೆಳೆಸಿ *ಬೆಂಗಳೂರು :* ಸಮಾಜದಲ್ಲಿ ನೈಜತೆಯ ಆಧಾರದ ಮೇಲೆ ಮೌಲ್ಯಗಳನ್ನು ಇಟ್ಟುಕೊಂಡು ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸ ನಿರ್ವಹಿಸಬೇಕಾಗಿದೆ. ನೊಂದವರಿಗೆ, ಅಬಲರಿಗೆ, ನಿರಾಶ್ರಿತರಿಗೆ, ಅಶಕ್ತರಿಗೆ ಆಸರೆಯಾಗಿ ಸಂಘ ಸಂಸ್ಥೆಗಳು ನಿಲ್ಲಬೇಕು ಎಂದು ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ ಕರೆ ನೀಡಿದರು. ಮಹಾನಗರದ ನಯನ ಸಭಾಂಗಣದಲ್ಲಿ ಡಿ.13 ರಂದು ಜ್ಞಾನಸ್ಪಂದನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜರುಗಿದ 68ನೇ ಕನ್ನಡ ರಾಜ್ಯೋತ್ಸವ ಮತ್ತು ಸುವರ್ಣ ಕರ್ನಾಟಕ ಸಂಭ್ರಮೋತ್ಸವದ ನಿಮಿತ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ *ಕರುನಾಡ ಸಿರಿ ಸೇವಾ ಪ್ರಶಸ್ತಿ* ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಂತ್ವನ ಎನ್ನುವುದು ನೊಂದವರಿಗೆ ಪ್ರೀತಿಯಿಂದ ಕೊಡುವ ಸ್ಪಂದನೆ, ಕಣ್ಣೀರು ಹಾಕುವುದಲ್ಲ. ಕಣ್ಣು ಇರುವುದು ಕನಸುಗಳನ್ನು ಕಾಣಲು ಆ ಕನಸುಗಳನ್ನು ನನಸು ಮಾಡಲು ನಿರಂತರ ಶ್ರಮ ಅವಶ್ಯಕ ಎಂದರು. ಮುಖ್ಯ ಅತಿಥಿಯಾಗಿದ್ದ ಹೃದಯ ರೋಗ ತಜ್ಞೆ ಡಾ, ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಸಂಘ-ಸಂಸ್ಥೆಗಳು ಬೆಳೆಯಬೇಕಾದರೆ ಸೇವಾ ಮನೋಭಾವ ಇರುವಂತಹ ದಾನಿಗಳು ಜೊತೆಯಾಗಿ ನಿಲ್ಲಬೇಕು ಎಂದರು. ರಾಜ್ಯ ನೇಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಡಿ ಲಕ್ಷ್ಮಿ ನಾರಾಯಣ್ ಅವರು,
ಈ ದೇಶದಲ್ಲಿ ಮೊಟ್ಟ ಮೊದಲು ಬುದ್ಧ ಮಹಿಳೆಯರಿಗೆ ತನ್ನ ಸಂಘದಲ್ಲಿ ಸ್ಥಾನಮಾನ ಕೊಟ್ಟರು. ನಂತರ ಶರಣರು ಮಹಿಳೆಯರಿಗೆ ವಿವಿಧ ಆಯಾಮಗಳಲ್ಲಿ ಸ್ವಾತಂತ್ರ ಕೊಟ್ಟರು. ಕಾನೂನಿನಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಆಗಬೇಕು. ಪ್ರಕೃತಿಯ ದೃಷ್ಟಿಯಲ್ಲಿ ಗಂಡು-ಹೆಣ್ಣು ಎರಡು ಕಣ್ಣುಗಳಿದ್ದಂತೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸಂಗಮೇಶ್ ತಿಳಿಸಿದರು.
ಇಂತಹ ಸಂಘ ಸಂಸ್ಥೆಗಳು ಉತ್ತಮ ಕಾರ್ಯವನ್ನು ನಿರ್ವಹಿಸಲು ಎಲ್ಲರೂ ನೆರವಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ವಕೀಲರಾದ ಮಂಜುನಾಥ್ ತಿಳಿಸಿದರು.
ಇತಿಹಾಸ ಸಾಕ್ಷ ಚಿತ್ರ ನಿರ್ಮಾಪಕ ಆಗುಂಬೆ ನಟರಾಜ್ ರವರು ಕೃಷ್ಣಮೂರ್ತಿರವರು ದಿಲ್ಸೇ ದಿಲೀಪ್ ರವರು ತಮ್ಮ ವಿಚಾರಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷೆ ಸಾವಿತ್ರಮ್ಮನವರು ಟ್ರಸ್ಟ್ ಉದ್ಘಾಟನೆಯಾಗಲು ಮತ್ತು ಈ ಸಮಾರಂಭಕ್ಕೆ ಸಹಾಯ ಸಹಕಾರ ನೀಡಿದವರಿಗೆ ಧನ್ಯತೆಯನ್ನು ಅರ್ಪಿಸಿ ನಿಮ್ಮೆಲ್ಲರ ಸಹಕಾರದಿಂದ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮಣ್ಣ ಹಂಪರಗುಂದಿ, ಎ,ಪಿ ನಾಗರಾಜ್, ಆಗುಂಬೆ ನಟರಾಜ್, ಲಕ್ಷ್ಮಿಕಾಂತ್ ಜೋಳದ, ರವಿಕುಮಾರ್, ವೆಂಕಟೇಶ್, ಮನೀಶ್, ಮಂಜುಳಾಕ್ಷಿ, ಪರಮ್ಮ ಕುಮಾರಿ ಸಾತ್ವಿಕ್ ರಾಜೇಶ್ ಮತ್ತು ನಾಗತಿಹಳ್ಳಿ ಮಂಜುನಾಥ್ ರವರುಗಳಿಗೆ ಕರುನಾಡ ಸಿರಿ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ರಾಮಾಚಾರ್, ವಸ್ತ್ರದಾತ ಮಾಸಪತ್ರಿಕೆ ಸಂಪಾದಕ ರಾಮಸ್ವಾಮಿ, ಸಾಹಿತಿ ಮತ್ತು ಕಿರುತೆರೆ ಕಲಾವಿದ ರವಿ ಶಿಕಾರಿಪುರ, ಡಾ, ಶೈನಿ ಗ್ರೇಸಿ, ಮೈಕೋ ಶಿವು ನಿರ್ದೇಶಕ ಪಿಳ್ಳೆಗೌಡ್ರು, ಮುರುಳಿಕೃಷ್ಣರವರು ಕಾಂಗ್ರೆಸ್ ಮುಖಂಡರಾದ ಬಸವರಾಜ ಕೋಕಟನೂರ, ಶ್ರೀಧರ್, ಲಲಿತಮ್ಮ, ದಾನಮ್ಮ, ತಾರಾಮತಿ ವಾಸಣ್ಣವರ, ಹೊಸದುರ್ಗದ ಡಿ,ಟಿ ಚಂದ್ರಶೇಖರ್, ಪತ್ರಕರ್ತ ವಿನಯ್ ಕುಮಾರ್ ರವರುಗಳು ಆಗಮಿಸಿ ಶೋಭೆ ತಂದರು.
ಸಂಗೀತ ನಿರ್ದೇಶಕ, ಗಾಯಕ ಸುರೇಶ್ ನಾಡಗೀತೆ ಹಾಡಿದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಶಂಕರ್ ಹೂಗಾರ ಪ್ರಸ್ತಾವಿತವಾಗಿ ಮಾತನಾಡಿದರು. ಟ್ರಸ್ಟಿ ಶೋಭಾ ಮುರುಳಿಕೃಷ್ಣ ನಿರೂಪಿಸಿದರು. ಕಾರ್ಯದರ್ಶಿ ಕಾಚಾಪುರ ರಂಗಪ್ಪ ಸ್ವಾಗತಿಸಿದರು.
ನಂತರ ನೀಲಿ ಚಲನಚಿತ್ರ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಎಲ್ಲರಿಗೂ ಸಂತಸ ನೀಡಿತು.
ವರದಿ – ಶ್ರೀಮತಿ ಶೋಭಾ ಮುರುಳಿ ಕೃಷ್ಣ ಬೆಂಗಳೂರು