“ಇಲ್ಲಿವೆ ಗಂಟೆಯ ಮೇಲಿನ ಎಂಟು ಹನಿಗಳು.  ಹನಿ ಹನಿಯಾಗಿ ಮೊಳಗಿದ ಗಂಟೆಯ ಒಳಗಿನ ಮಾರ್ಮಿಕ ದನಿಗಳು. ಈ ಹನಿ-ದನಿಗಳಲ್ಲಿ ಪ್ರಸಕ್ತ ವರ್ತಮಾನದ, ಪ್ರಸ್ತುತ ವಿದ್ಯಮಾನಗಳ ಕುರಿತಾದ ವ್ಯಂಗ್ಯವಿದೆ, ವಿನೋದವಿದೆ, ವಿಡಂಬನೆಯಿದೆ, ಕೀಟಲೆ, ತರಲೆ, ತುಂಟತನಗಳ ಪಿಸುದನಿಯಿದೆ. ಹಾಗೆಯೇ ಕಟುವಾಸ್ತವದ, ಕಹಿಸತ್ಯಗಳ ಖನಿಯೂ ಇದೆ. ಈ ಹನಿದನಿಗಳು ಕಚಗುಳಿಯಿಡುತ ಮನವರಳಿಸುವುದರೊಂದಿಗೆ, ಚಿಂತನೆಯ ನೆರಳನ್ನೂ ಚೆಲ್ಲುತ್ತದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಹನಿಗಳಲ್ಲ.. ಗಂಟೆ ದನಿಗಳು..

1. ಗಂ(ಡಾ)ಟಾಂತರ.!

ಈಗೀಗ ಮಂಗಳಾರತಿ ವೇಳೆಯಲ್ಲು
ಜನ ಬಾರಿಸುತ್ತಿಲ್ಲ ಗುಡಿಯ ಗಂಟೆ
ಕಾರಣ ಕರಗಳೊಳಗಿನ ಜಂಗಮಗಂಟೆ.!

******************

2. ಗಂಟೆ ಸತ್ಯ.!

ಊರಿನ ಗುಡಿಯ ಗಂಟೆಯ
ಯಾರಾದರೂ ಬಡಿಯಬಹುದು.!
ನಮ್ಮನೆ ದೇವರಕೋಣೆ ಗಂಟೆಯ
ನಾವು ಮಾತ್ರವೇ ಬಡಿಯಬೇಕು.!

********************

3. ಗಂಟೆ ತುಡುಗು.!

ಗುಡಿಯ ದೇವರ ಒಡವೆ ವಸ್ತ್ರ
ಕದ್ದು ಹೊದ್ದು ಅಡಗಿಸಿಡಬಹುದು
ಮಾರಿ ಮೆದ್ದು ಅರಗಿಸಿಕೊಳ್ಳಬಹುದು
ಗುಡಿಯ ಗಂಟೆಯ ಕದ್ದು ಮೆದ್ದು
ಅಡಗಿಸಿಡಲಾದೀತೆ? ಅರಗಿಸಿಕೊಳ್ಳಲಾದೀತೆ?

*******************

4. ಗಂಟೆ ಗಲಾಟೆ.!

ಗಂಟೆ ಕಟ್ಕೊಂಡು ಹೋರಾಡಿದ್ರೆ
ಸದ್ದು.!
ಗಂಟೆ ಬಿಟ್ಕೊಂಡು ಹೊಡೆದಾಡಿದ್ರೆ
ಸುದ್ದಿ.!

********************

5. ಗಂಟಾನಾದ.!

ಮನೆಬಾಗಿಲ ಕರೆಗಂಟೆ ಒತ್ತಿದರೆ
ಮನೆಯ ಬಾಗಿಲಷ್ಟೇ ತೆರೆದಾರು.!
ನಿತ್ಯವು ಗುಡಿಗಂಟೆ ಬಾರಿಸಿದರೆ
ಬಾಳಿನ ಸಕಲ ಭಾಗ್ಯ ತೆರೆದೀತು.!

*******************

6. ಗಂಟಾವಳಿ.!

ಮಂದಿರದ ತುಂಬೆಲ್ಲ ಮಂದಿಯ
ಜಂಗಮಗಂಟೆ ಸದ್ದುಗದ್ದಲ ಶಬ್ಧ.!
ಹಾಗಾಗಿ ಗುಡಿಗಂಟೆ ನಾದ ಕೇಳಿಸದೆ..
ಗರ್ಭಗುಡಿಯ ಆ ದೇವರೂ ಸ್ತಬ್ಧ.!

***********************

7. ಗಂಟೋದ್ದೇಶ.!

ಗುಡಿಯ ಗಂಟೆ ಬಡಿಯುವುದು
ನಮ್ಮ ಆಗಮನ ತಿಳಿಸುತ
ದೇವರ ಎಚ್ಚರಿಸಿ ಎಬ್ಬಿಸಲಿಕ್ಕಲ್ಲ
ನಮ್ಮ ಜಡಗೊಂಡ ಮೈಮನದಿ
ಭಕ್ತಿ ತರಂಗಗಳ ಹಬ್ಬಿಸಲಿಕ್ಕೆ.!

******************

8. ಗಂಟೆ ಪ್ರಶ್ನೆಗಳು.!

ಹಿಂದಿನ ಪ್ರಶ್ನೆ..
‘ಬೆಕ್ಕಿಗೆ ಗಂಟೆ ಕಟ್ಟುವರಾರು?”
ಇಂದಿನ ಪ್ರಶ್ನೆ..
“ಗುಡಿ ಗಂಟೆ ಬಡಿವರಾರು.?”
ಮುಂದಿನ ಪ್ರಶ್ನೆ..
“ಜಂಗಮ ಗಂಟೆ ತಡೆವರಾರು?”

ಎ.ಎನ್.ರಮೇಶ್.ಗುಬ್ಬಿ.

Related Posts

Leave a Reply

Your email address will not be published. Required fields are marked *