ನಿಂದಕರು ನಮ್ಮ ಹಿತೈಷಿಗಳು. ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ..
ನಿಂದಕರಿರಬೇಕು ಜಗದೊಳು ಇರಬೇಕು ಜಗವ ಚಂದಗೊಳ್ಳಿಸಲು

ನಿಂದಕರೂ ನಮ್ಮ ಹಿತಚಿಂತಕರೇ
ಜೀವನ ಸುಖಮಯವಾಗಿರಬೇಕಾದರೆ ನಿಂದಕರ ಓಣಿಯೊಳಗಿರಬೇಕು, ನಮ್ಮ ಬದುಕು ಕ್ರಮಬದ್ದವಾಗಿ, ಕ್ರಿಯಾಶೀಲ, ಪ್ರಾಮಾಣಿಕವಾಗಿರಬೇಕಾದರೆ, ನಮ್ಮ ಸುತ್ತ ಮುತ್ತ ನಿಂದಕರಿರಬೇಕು. ಆದರೆ ನಿಂದನೆ ಘಾಸಿಗೊಳಿಸಬಾರದು. ಹಂದಿ ಇದ್ದರೆ ಊರು ಚಂದ, ಜನ ಇದ್ದರೆ ಜಾತ್ರೆ ಚಂದ, ನಿಂದಕರಿದ್ದರೆ ಮನ ಚಂದ.ಸಮಾಜದಲ್ಲಿ ನಿಂದಕರಿರಬೇಕು, ಅವರ ಸಮೀಪ ಬುದುಕಿದರೆ ನೀರು, ಸಾಬೂನು ಇಲ್ಲದೆ ನಾವು ಸ್ವಚ್ಛವಾಗುತ್ತೇವೆ.
ಚೆನ್ನಾಗಿ ಮಾತನಾಡಿದರೆ ‘ಇವನೊಬ್ಬ ವಾಚಾಳಿ’, ‘ಇವನದ್ದು ಬರೇ ಮಾತು’ ಎಂದೂ, ಮಾತನಾಡದಿದ್ದರೆ ‘ಇವನೊಬ್ಬ ಬೆಪ್ಪ’, ‘ಬಾಯಿ ಬಿಡೋಕೇ ಬರೋದಿಲ್ಲ’ ಎಂಬ ಟೀಕೆ. ಕಷ್ಟ ಪಟ್ಟು ದುಡಿದು ಶ್ರೀಮಂತನಾಗಿಬಿಟ್ಟರೆ ‘ಕಳ್ಳ, ಹೇಗೋ ದುಡ್ಡು ಮಾಡಿಬಿಟ್ಟ’ ಎಂಬುದಾಗಿ ಟೀಕಿಸಿದರೆ, ಏನೂ ದುಡ್ಡು ಮಾಡದೇ ಉಳಿದರೆ, ‘ಬಡಪಾಯಿ, ಬಡವನಾಗಿಯೇ ಉಳಿದುಬಿಟ್ಟ. ನಾಲ್ಕು ಕಾಸು ಮಾಡೋಕಾಗಲಿಲ್ಲ’ ಎಂಬ ಮಾತು. ದಾನ ಮಾಡಿದರೆ ‘ಇವನದ್ದು ಬರೇ ಷೋ ಆಫ್’ ಎಂದೂ, ದಾನ ಮಾಡದಿದ್ದರೆ ‘ಕಂಜೂಸು ಶಿಖಾಮಣಿ’ ಎಂಬ ಬಿರುದು! ಸತ್ತು ಹೋದರೆ ‘ಪಾಪ ಇವರು ಸಾಯಬಾರದಿತ್ತು. ಒಳ್ಳೆಯ ಮನುಷ್ಯ’ ಎಂದೂ ಸಾಯದೇ ಉಳಿದರೆ ‘ಲೋಫರ್ ನನ್ ಮಗ, ಇನ್ನೂ ಸಾಯಲೇ ಇಲ್ಲ ನೋಡಿ; ಎಷ್ಟೆಂದರೂ ಪಾಪಿ ಚಿರಾಯುವಲ್ಲವೇ’ ಎಂಬ ಟೀಕೆ.
ಟೀಕೆಗಳು ಕೆಲವೊಮ್ಮೆ ನಮ್ಮೆದುರೇ ಇಲ್ಲವೇ ಪರೋಕ್ಷದಲ್ಲಿ ಬರಬಹುದು. ಯಾವುದಕ್ಕೂ ನಾವು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಕಾರಣ, ಟೀಕಿಸೋದು ಕೆಲವರ ಹುಟ್ಟು ಗುಣ. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಉತ್ತರ ಕೊಟ್ಟರೂ ಜನ ಸಮಾಧಾನಗೊಳ್ಳಲಾರರು. ನಮ್ಮ ಕೆಲಸ ಸಾಧನೆಗಳೇ ಅವರ ಟೀಕೆಗಳಿಗೆ ಉತ್ತರವಾಗಬೇಕು. ಆದರೆ, ನಮ್ಮ ಸಮಕ್ಷಮದಲ್ಲಿ ಆಡಿದ ಮಾತುಗಳಲ್ಲಿ ಏನಾದರೂ ಸತ್ಯಾಂಶವಿದ್ದರೆ, ಅದನ್ನು ಅಲ್ಲಗಳೆಯಬಾರದು. ಅವು ನಿಜವಾಗಿದ್ದಲ್ಲಿ ಅದನ್ನು ವಿಶಾಲ ಮನಸ್ಸಿನಿಂದ ಸ್ವೀಕರಿಸಿ, ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು.
ಹೊಗಳಿಕೆಗಳಿಗೆ ಕುಂಬಳಕಾಯಿಯಂತೆ ಹಿಗ್ಗದೆ, ತೆಗಳಿಕೆಗಳಿಗೆ ಹಾಗಲಕಾಯಿಯಂತೆ ಕುಗ್ಗದೆ, ಸತ್ಯಕ್ಕೆ ದೂರವಾದ ಟೀಕೆಗಳಿಗೆ ಜಗ್ಗದೆ, ಸಮಚಿತ್ತದ ಸಂಯಮದಿಂದ ಬಾಳೋದೇ, ಬದುಕುವ ಕಲೆ. ಈ ಕಲೆ ನಮ್ಮದಾಗಲಿ.
ಸ್ಪೂರ್ತಿದಾಯಕ ನೀತಿ ಕಥೆ.
ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ..
ಆಗ ಹಾಲು ಹೇಳಿತಂತೆ..’ ದೇವರೇ.. ನಾನು ಹಾಲು ಆಕಳು.. ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ… ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ‘ ಎಂದು ಬೇಡಿಕೊಂಡಿತಂತೆ..
ಆಗ ದೇವರು ನಕ್ಕು. ‘ ಎಲೈ .. ಹಾಲೇ ಇಲ್ಲಿ ಕೇಳು.. ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು..
ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ.. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ.. ಮೊಸರಾಗಿ ಕಡೆದರೆ.. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ.. ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ… ಬೆಣ್ಣೆಯನ್ನು ಹದವಾಗಿ ಕಾಯಿಸಿ.. ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ.. ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ.
ಈಗ ಹೇಳು ಒಂದು ದಿನ ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ..
ಅಥವಾ ಕ್ಷಣ ಕ್ಷಣವೂ.. ಅನುದಿನವೂ .. ದಿನ ದಿನವೂ.. ಬೆಳೆದು.. ರೂಪಾಂತರ ಪಡೆದು .. ಭಗವಂತನಿಗೆ ಬೆಳಕಾಗುವೆಯಾ ‘ ಎಂದು ದೇವರು ಪ್ರಶ್ನಿಸಿದನಂತೆ…
ದೇವರ ಮಾತಿಗೆ.. ಹಾಲು ಮೂಕವಾಯಿತು.. ಶರಣಾಯಿತು..
ತನ್ನ ಮನದ ಅಂಧಕಾರ.. ಮದದಿಂದ ಹೊರಬಂತು..
ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು..
ನಾವು ಹಾಗೇ ಅಲ್ವಾ.. ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ.. ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ..
ನಿಂದಕರಿರಬೇಕು ಜಗದೊಳು ನಿಂದಕರಿರಬೇಕು;
ನಿಂದಕರಿರಬೇಕು ಜಗದೊಳು ನಿಂದಕರಿರಬೇಕು, ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ ನಿಂದಕರಿರಬೇಕು
ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರು, ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ ಪೊಂದಿದ ಪುಣ್ಯವನೊಯ್ಯುವರಯ್ಯ.
ದುಷ್ಟಜನರು ಈ ಸೃಷ್ಟಿಯೊಳಿದ್ದರೆ, ಶಿಷ್ಟ ಜನರಿಗೆಲ್ಲ ಕೀರ್ತಿಗಳು. ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು ಇಷ್ಟೇ ವರವನು ಬೇಡುವೆನಯ್ಯ.
ದುರುಳ ಜನಂಗಳು ಚಿರಕಾಲವಿರುವಂತೆ, ಕರವ ಮುಗಿದು ವರವ ಬೇಡುವೆನು, ಪರಿಪರಿ ತಮಸಿಗೆ ಗುರಿಯಹರಲ್ಲದೆ, ಪರಮ ದಯಾನಿಧೆ ಪುರಂದರವಿಠಲ.
ಕೃಷ್ಣಾರ್ಪಣಮಸ್ತು
OM SRI GURU RAGHVENDRAYA NAMAHA.

Related Posts