ಹಾಲು, ಮೊಸರು, ಬೆಣ್ಣೆ ವ್ಯಾಪಾರ

ಹರಿ ಇಚ್ಛೆ – ಹರಿ ಮಾಯೆ :-

ಮಧುಸೂದನ ಎಂಬವನು ತನ್ನ ತಾಯಿ ಮತ್ತು ತಂಗಿಯೊಂದಿಗೆ ಒಂದು ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದನು. ಜೀವನಕ್ಕಾಗಿ ಸಣ್ಣದಾಗಿ ಅಂಗಡಿ ಹಾಕಿಕೊಂಡು, ಹಾಲಿಗೆ ಸಂಬಂಧಪಟ್ಟ ಹಾಲು, ಮೊಸರು, ಬೆಣ್ಣೆ ,ತುಪ್ಪ , ಇವುಗಳನ್ನು ವ್ಯಾಪಾರ ಮಾಡುತ್ತಿದ್ದನು. ಯಾರೇ ಗಿರಾಕಿಗಳಿಗೆ ಹಾಲು ಮೊಸರು, ಯಾವುದನ್ನೇ ಆಗಲಿ ಅವನು ಕೊಡುವಾಗ ‘ಹರಿಇಚ್ಚೆ’ ಎಂದೂ, ಅವರು ಕೊಡುವ ಹಣವನ್ನು ತೆಗೆದುಕೊಳ್ಳುವಾಗಲೂ ‘ಹರಿಇಚ್ಚೆ’ ಎಂದು ಹೇಳಿ ತೆಗೆದುಕೊಳ್ಳುತ್ತಿದ್ದ. ಅಲ್ಲಿ ಬರುವ ಗಿರಾಕಿಗಳಿಗೆಲ್ಲ ಅಭ್ಯಾಸವಾಗಿತ್ತು. ಅವನು ಪ್ರತಿನಿತ್ಯ ವ್ಯಾಪಾರಕ್ಕೆ ಮನೆಯಿಂದ ತನ್ನ ಸೈಕಲ್ನಲ್ಲಿ ಹೊರಟು ಬರುವಾಗ ‘ವೆಂಕಟೇಶ್ವರನ’ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ನಮಸ್ಕರಿಸಿ ನಂತರ ಅಂಗಡಿಗೆ ಬಂದು ತನ್ನ ವ್ಯಾಪಾರ ಶುರು ಮಾಡುತ್ತಿದ್ದ. ಹರಿ-ಇಚ್ಚೆ, ಹರಿ-ಇಚ್ಚೆ, ಎಂದು ಅವನು ಹೇಳು ಹೇಳುತ್ತಲೇ ಶ್ರೀಹರಿಯ ದಯೆಯಿಂದ ಅವನ ವ್ಯಾಪಾರ-ವ್ಯವಹಾರ ಚೆನ್ನಾಗಿ ನಡೆಯ ತೊಡಗಿತು. ಈಗೀಗ ಅವನ ಪುಟ್ಟ ಪೆಟ್ಟಿಗೆಯಲ್ಲಿ ಹಣವು ತುಂಬಲು ಶುರುವಾಯಿತು.

ಒಂದು ದಿನ ಅವನ ತಾಯಿ ಮಗನನ್ನು ಕರೆದು ಮಧು ನೀನಿನ್ನು ಮದುವೆಯಾಗು ನನಗೆ ವಯಸ್ಸಾಗಿದೆ. ಮುಂದೆ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ಹೋಗಲು ಒಬ್ಬಳು ಸೊಸೆ ಬೇಕು. ನಿನಗೆ ಒಳ್ಳೆಯ ಹುಡುಗಿಯನ್ನು ಹುಡುಕಿ ತಂದು ಮದುವೆ ಮಾಡುತ್ತೇನೆ ಎಂದಳು. ತಾಯಿ ಹೇಳಿದ ಮಾತಿಗೆ ಮಧುಸೂದನ ಹರಿ-ಇಚ್ಚೆ ಇದ್ದಂತಾಗಲಿ. ಆಯಿತು ಅಮ್ಮ ಎಂದನು. ಇದರಿಂದ ತಾಯಿಗೆ ಸಂತೋಷವಾಗಿ ಪಕ್ಕದ ಗ್ರಾಮದಿಂದ ಒಳ್ಳೆಯ ಹುಡುಗಿಯನ್ನು ತಂದು ಮದುವೆ ಮಾಡಿ ಮನೆಗೆ ಸೊಸೆ ತಂದಳು. ಮನೆಯಲ್ಲಿ ಸುಖ- ಸಂತೋಷ ತುಂಬಿತು.

ಈಗೀಗ ಅಂಗಡಿಯಲ್ಲಿ ಬರುವ ಗಿರಾಕಿಗಳ ಜಾಸ್ತಿಯಾಗಿದ್ದಾರೆ. ಅವನಿಗೆ ಸ್ವಲ್ಪವೂ ಸಮಯವಿಲ್ಲ ಅವನು ಎಷ್ಟೇ ಬೇಗ ಬಂದರೂ, ಆ ವೇಳೆಗಾಗಲೇ ಗಿರಾಕಿಗಳು ಬಂದು ಕಾಯುತ್ತಿದ್ದರು. ಒಮ್ಮೊಮ್ಮೆ ಬೆಳಗಿನ ಉಪಹಾರವನ್ನು ಮಾಡದೆ ಮನೆಯಿಂದ ಹೊರಟು ಬಂದು ನಿತ್ಯದಂತೆ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋಗಿ ಬಂದು ವ್ಯಾಪಾರ ಮಾಡಲು ಶುರುಮಾಡಿತ್ತಿದ್ದನು. ದಿನದಿಂದ ದಿನಕ್ಕೆ ಬರುವ ಗಿರಾಕಿಗಳು ಜಾಸ್ತಿಯಾಗಿ ಅವನು ಊಟ-ತಿಂಡಿ ಕಡೆ ಗಮನ ಕೊಡುತ್ತಿರಲಿಲ್ಲ. ಅವನ ತಾಯಿಯು ಮಗ ಅನ್ನ-ನೀರು ಬಿಟ್ಟು ಉಪವಾಸ ಹೋಗುವುದನ್ನು ನೋಡಲಾಗದೆ, ಮಧ್ಯಾಹ್ನದ ಊಟವನ್ನು ಅಂಗಡಿಗೆ ತೆಗೆದುಕೊಂಡು ಹೋಗುವಂತೆ ಸೊಸೆಗೆ ಹೇಳಿದಳು. ಈಗ ಅವನು ಬೆಳಗ್ಗೆ ತಿಂಡಿ ತಿಂದು ಬಂದರೆ ಮಧ್ಯಾಹ್ನದ ಊಟವನ್ನು ಅವನ ಹೆಂಡತಿ ತರಲು ಶುರುಮಾಡಿದಳು. ಅಂಗಡಿಗೆ ಬಂದಮೇಲೆ ಅವಳು ಒಂದು ಬದಿಯಲ್ಲಿ ಕುಳಿತು ಅವನು ವ್ಯಾಪಾರ ಮಾಡುವುದನ್ನು ನೋಡುತ್ತಾ ಬಂದಳು. ಅವಳಿಗೆ ಅನ್ನಿಸಿತು ತನ್ನ ಗಂಡ ಜಾಸ್ತಿ ಹಾಲು, ಮೊಸರು, ಕೊಟ್ಟು ಹರಿಇಚ್ಚೆ, ಹರಿಇಚ್ಚೆ, ಎನ್ನುತ್ತಾ ಕಡಿಮೆ ದುಡ್ಡು ಕೊಟ್ಟರೆ ಗಮನಿಸದೆ ತೆಗೆದುಕೊಳ್ಳುತ್ತಾನೆ. ಹೀಗೆ ಯೋಚಿಸಿದ ಅವಳು, ತನ್ನ ಗಂಡ ಬಹಳ ಮುಗ್ಧ ಸ್ವಭಾವದವನು ಎಲ್ಲರೂ ಅವನಿಗೆ ಮೋಸ ಮಾಡುತ್ತಾರೆ. ಹೀಗಾಗಲು ನಾನು ಬಿಡಬಾರದು ಇನ್ನು ಮುಂದೆ ನಾನೇ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಬೇಕೆಂದು ಯೋಚಿಸಿದಳು.

ಹೀಗೆ ಯೋಚಿಸಿ, ಗಂಡನ ಹತ್ತಿರ ಬಂದು, ನೀವು ಬಹಳ ಮುಗ್ಧರು, ನಿಮಗೆ ವ್ಯಾಪಾರ ಮಾಡಲು ಬರುವುದಿಲ್ಲ. ಇನ್ನುಮುಂದೆ ಅಂಗಡಿಯಲ್ಲಿ ನಾನೇ ವ್ಯಾಪಾರ ಮಾಡಿ ತುಂಬಾ ಲಾಭ ಗಳಿಸುತ್ತೇನೆ ಎಂದಾಗ, ಮಧುಸೂಧನ, ಎಲ್ಲಾ ‘ಹರಿಇಚ್ಚೆ’ ಆಯಿತು ನೀನೇ ಅಂಗಡಿಗೆ ಬಂದು ವ್ಯಾಪಾರ ಮಾಡು ನಾನು ಮನೆಯಲ್ಲಿ ನೋಡಿಕೊಳ್ಳುತ್ತೇನೆ ಎಂದನು. ಅದರಂತೆ ಸೊಸೆ ಅಂಗಡಿಗೆ ಬಂದು ವ್ಯಾಪಾರ ಮಾಡತೊಡಗಿದಳು. ಅಂಗಡಿಯಲ್ಲಿರುವ ಹೆಚ್ಚಿನ ಕೆಲಸಗಾರರನ್ನು ಬಿಡಿಸಿದಳು. ಹಾಲು, ಮೊಸರು, ಬೆಣ್ಣೆ ಗಳನ್ನು ಬಹಳ ನಾಜೂಕಾಗಿ ಕಣ್ಣಲ್ಲಿ ಕಣ್ಣಿಟ್ಟು ಕೊಡುವುದು, ಹಣವನ್ನು ಸರಿಯಾಗಿ ಎಣಿಕೆ ಮಾಡಿ, ಹರಿದ ಹಳೆಯ ನೋಟುಗಳು ಬಂದರೆ ಅದನ್ನು ಹಿಂತಿರುಗಿಸಿ ಬೇರೆ ತೆಗೆದುಕೊಳ್ಳಲು ಶುರುಮಾಡಿದಳು. ಮೊದಲಿದ್ದಂತೆ ಈಗ ಅಂಗಡಿಯಲ್ಲಿ ಹರಿ ಇಚ್ಛೆ ,ಹರಿ ಇಚ್ಛೆ, ಹರಿ ಇಚ್ಚೆ, ಎಂಬ ಹರಿನಾಮ ಕೇಳಿ ಬರುತ್ತಿರಲಿಲ್ಲ. ದಿನ ಕಳೆದಂತೆ ಜನ ಬರುವುದು ಕಮ್ಮಿಯಾಯಿತು. ಅಂಗಡಿಗೆ ತರಿಸಿದ್ದ ಹಾಲು, ಮೊಸರು ಬೆಣ್ಣೆ, ತುಪ್ಪ ಗಳು ಸಂಜೆಯಾದರೂ ಖಾಲಿಯಾಗದೆ ಕೆಟ್ಟು ಹೋಗುತ್ತಿತ್ತು. ಯಾವಾಗಲೂ ತುಂಬಿ ತುಳುಕುತ್ತಿದ್ದ ಹಣದ ಪೆಟ್ಟಿಗೆಯಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಹಣ ಕಣ್ಣಿಗೆ ಕಾಣತೊಡಗಿತು. ಇದ್ದ ಒಂದಿಬ್ಬರು ಕೆಲಸಗಾರರು ಬಿಟ್ಟು ಹೋದರು.

ಆಕೆಯು ತನ್ನ ಗಂಡನ ಹತ್ತಿರ ಬಂದು ನಾಚಿಕೆಯಿಂದ ನನ್ನನ್ನು ಕ್ಷಮಿಸಿರಿ. ನಾನು ನಿಮ್ಮ ವ್ಯಾಪಾರವನ್ನು ದುರಹಂಕಾರದಿಂದ ದೂಷಣೆ ಮಾಡಿದೆ. ನೀವು ವ್ಯಾಪಾರ ಮಾಡುತ್ತಿದ್ದಾಗ ಅಂಗಡಿಯಲ್ಲಿ ಸದಾ ಜನರು ತುಂಬಿ ಗಿಜಿಗಿಜಿ ಎಂದು ಗಿಜಿಗುಡುತ್ತಿತ್ತು. ಹಾಲು, ಮೊಸರು, ಬೆಣ್ಣೆ, ತುಪ್ಪ ಅಂಗಡಿ ತುಂಬಾ ತುಂಬಿತ್ತು. ಹಣ ಬೇಕಾದಷ್ಟು ಇತ್ತು. ನಾನು ವ್ಯಾಪಾರಕ್ಕೆ ನಿಂತ ಮೇಲೆ ಅಂಗಡಿಯೇ ಖಾಲಿಯಾಗ ತೊಡಗಿತು. ಇನ್ನು ಮುಂದೆ ನನಗೆ ಅಂಗಡಿಯ ಸಹವಾಸ ಬೇಡ ನನಗೆ ಮನೆಯೇ ಲೇಸು ಎಂದಳು. ಇದನ್ನೆಲ್ಲಾ ಕೇಳಿದ ಅವನು ‘ಹರಿಇಚ್ಚೆ ‘ ಇದ್ದಂತಾಗಲಿ ಇನ್ನು ಮುಂದೆ ಅಂಗಡಿಗೆ ನಾನೇ ಹೋಗುತ್ತೇನೆ ಎಂದನು.

ಮತ್ತೆ ಮಧುಸೂದನನೇ ಅಂಗಡಿಗೆ ಬಂದು, ವ್ಯಾಪಾರ ಶುರು ಮಾಡಿದನು.ಹರಿ ಇಚ್ಛೆ, ಹರಿ ಇಚ್ಛೆ ,ಹರಿ ಇಚ್ಛೆ, ಅಂಗಡಿ ತುಂಬಾ ಹರಿನಾಮ ಘೋಷಿಸಿತು.ಮತ್ತೆ ಜನ ಬರಲು ಶುರು ಮಾಡಿದರು ಹಿಂದಿನಂತೆಯೇ ಅಂಗಡಿಯಲ್ಲಿ
ಜನ ತುಂಬಿದರು. ಹಾಲು-ಮೊಸರು, ಹಾಗೂ ಹಣದ ಪೆಟ್ಟಿಗೆ ತುಂಬಿದವು. ಹೆಂಡತಿಗೆ ಆಶ್ಚರ್ಯವಾಗಿ ಅಂಗಡಿಗೆ ಬಂದು ಒಂದು ಕಡೆ ಕುಳಿತು ಅವನು ವ್ಯಾಪಾರ ಮಾಡುವುದನ್ನೇ ನೋಡುತ್ತಿದ್ದಳು. ಮತ್ತೆ ಮತ್ತೆ ಕಣ್ರೆಪ್ಪೆ ಮುಚ್ಚದೆ ನೋಡಿದಳು. ಅವಳಿಗೆ ಗಾಬರಿ, ಆಶ್ಚರ್ಯ ಒಟ್ಟಿಗೆ ಆಯಿತು. ಮಧುಸೂದನ ಹಾಲು ಮೊಸರು ಗಳನ್ನು ಗಿರಾಕಿಗಳ ಕೈಗೆ ಕೊಡುವಾಗ ಅವನ ಹಿಂದೆಯೇ ಮತ್ತೆರಡು ಕೈಗಳು ಬಂದು ಹಾಲು ಮೊಸರು ಕೊಡುತ್ತಿದ್ದವು. ಹಾಗೆ ಹಣ ತೆಗೆದುಕೊಳ್ಳುವಾಗಲೂ, ಹಿಂದಿನಿಂದ ಮತ್ತೆರಡು ಕೈ ಗಳು ಸೇರಿ ಹಣ ತೆಗೆದುಕೊಳ್ಳುತ್ತಿದ್ದವು.

ಅವಳು ಭಯದಿಂದ ನೀವು ಏನು ‘ಮಾಯೆ’ ಮಾಡುತ್ತಿರುವಿರಿ. ನಿಮ್ಮ ಕೈಗಳ ಜೊತೆ ಇನ್ನೆರಡು ಕೈಗಳು ಎಲ್ಲಿಂದ ಬರುತ್ತಿವೆ ಎಂದು ಪ್ರಶ್ನಿಸಿದಾಗ ಮಧುಸೂದನ ಹೇಳಿದ ನನ್ನ ಮಾಯೆ ಏನೂ ಇಲ್ಲ .ಎಲ್ಲ ಶ್ರೀಹರಿಯ ಮಾಯೆ. ನಾನು ಕೇವಲ ಅವನ ಭಕ್ತ ಮಾತ್ರ. ನನ್ನ ಕೆಲಸ ಕಾರ್ಯಗಳನ್ನು ಹರಿಯೇ ಮಾಡುತ್ತಿರುವನು ನನಗೆ ತಿಳಿದಿರುವುದು ‘ಹರಿ-ಇಚ್ಛೆ’ ವಿನಹ ಬೇರೇನು ಗೊತ್ತಿಲ್ಲ. ಹಾಲು, ಬೆಣ್ಣೆ, ಮೊಸರಿನ ವ್ಯಾಪಾರ ಶ್ರೀಹರಿಯೇ ಮಾಡುತ್ತಿದ್ದಾನೆ. ನಾನು ನೆಪ ಮಾತ್ರ ಎಂದನು. ಅವನ ಅಚಲ ವಿಶ್ವಾಸದ ಭಕ್ತಿಗೆ ಮೆಚ್ಚಿದ ಆತನ ಪತ್ನಿ ನನ್ನದು ತಪ್ಪಾಯಿತು ಎಂದು ಪತಿಯ ಪಾದಗಳಿಗೆ ನಮಸ್ಕರಿಸಿದಳು.

ನಾಚಿಕೆ ಗೊಳಬೇಡ ಮನದಲ್ಲಿ ಯೋಚಿಸಿ ಕೆಡಬೇಡ !
ನೀಚವೇನೊ ನಮ್ಮಚ್ಯುತನೋಲಗ
ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು!

ಹರಿ ಹರಿಯೆಂದೊದರೋ- ಹತ್ತಿದ
ದುರಿತ ಗಳಿಗೆ ಬೆದರೋ
ನೀರಜಾಕ್ಷ ನಿರ್ಜರ ಪತಿ ಹರಿಯೆಂದು
ಚೀರಿ ಹಾರಿ ಭೋರಿಡುತಲಿ ಕುಣಿಯೋ!

ಯಾರ ಗೊಡವೆಯೇನೋ ದಾರಿ ತಪ್ಪಿಪರೇನೊ
ಸಾರಿ ಸಾರಿಗೆ ಸರ್ವೇಶನ ನಾಮವ, ಬೀರಿ ಬೀರಿ
ಕೈ ಮುಗಿದು ಕೊಂಡಾಡೋ

ಭಕ್ತಜನರ ಕೂಡೋ- ಭವ ಭಯ,
ಬತ್ತಿ ಪೋಪುದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿಠಲನ
ಭಕ್ತಿಯಿಂದ ನೀ ಪಾಡುತ ಕುಣಿಯೋ !!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Related Posts