ಬ್ರಹ್ಮತೇಜೋ ಬಲಂ_ಬಲಂ

ಗಾಯತ್ರಿ ಮಂತ್ರವೆ ಮಹಾಬಲ

🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ.

“””””””””””ಧಾರ್ಮಿಕ ಆಚರಣೇ ಏಕೇ”””””””””””””
💠 ನಾವು ಸಂದ್ಯಾವಂದನೆ ಮಾಡುವುದೇಕೆ?
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”. ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಟಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ಧವಾಗಿ ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ದೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ “ಡಿ” ಅನ್ನಾಂಗಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

💠 ನಾವು ಧ್ಯಾನವನ್ನೇಕೆ ಮಾಡ ಬೇಕು?
ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ “ಧ್ಯಾನ”. ದೃಢವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳ ಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದು ಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.

💠 ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?
ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶ್ರೇಷ್ಟ ಎಂದಿದ್ದಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.

💠 ನಾವು ಧೂಪವನ್ನು ಹಚ್ಚುವುದೇಕೆ?
ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು “ದಶಾಂಗ ಧೂಪ” ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.

💠 ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?
ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.

💠 ನಾವು ಆಚಮನ ಮಾಡುವುದೇಕೆ?
ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ “ಆಚಮನ” ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.

💠 ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?
ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಭೀತಾಗುತ್ತದೆ.

💠 ನಾವು ಪವಿತ್ರವನ್ನು ಯಾಕೆ ಧರಿಸ ಬೇಕು?
“ಪವಿತ್ರ”ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿ ಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಟೋ ಬ್ಯಾಕ್ಟೀರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿ ಕೊಳ್ಳುತ್ತದೆ. ಈ ಪವಿತ್ರವನ್ನು ಹಾಕಿ ಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ.

💠 ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕ ಬೇಕು?
ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

💠 ನಾವು ತಾಮ್ರದ ಕಲಶವನ್ನೇ ಏಕೆ ಉಪಯೋಗಿಸುತ್ತೇವೆ?
ತಾಮ್ರವು ಲೋಹಗಳಲ್ಲೆಲ್ಲಾ ಅತುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಭೀತಾಗಿದೆ.

💠ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನೇಕೆ ಹಾಕುತ್ತೇವೆ?
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ಧರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

💠 ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ ?
ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.

💠ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ – ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.

💠 ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?
ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯ ಎನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ವಿಶೇಷವಾಗಿ ಗೋಮಯದಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ. ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡ ಬಹುದಾಗಿದೆ. ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಷಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣುಗಳೂ ಸಹ ಜೀವ ನಿರೋಧಕ ಎಂಬುದನ್ನು ಮರೆಯ ಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯದ ಮತ್ತು ಸ್ಥಳದ ಅಭಾವದಿಂದ ಮನೆಯ ಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ಧೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.

💠 ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?
ತುಳಸಿಯ ಎಲೆಗಳಲ್ಲಿ ವಿಶೇಷ ಗುಣಗಳಿವೆ. ತುಳಸಿಯು ಔಷಧೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸ ಬಹುದು. ಆಯುರ್ವೇದದಲ್ಲಿ ತುಳಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಳಸಿಗಿದೆ. ಅಂತಹ ತುಳಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆ ಇದ್ದರೆ ಮುಂದಿನ ಪೀಳಿಗೆಯವರಿಗೆ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವಿಲ್ಲ.
🕉️ 🙏🙏🙏🙏

🌷 ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ 🌷

🌺 ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||

🌺 ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ‘ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.

🌺 ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ. ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.

ಕೇಶವ
ನಾರಾಯಣ
ಮಾಧವ
ಗೋವಿಂದ
ವಿಷ್ಣು
ಮಧುಸೂದನ
ತ್ರಿವಿಕ್ರಮ
ವಾಮನ
ಶ್ರೀಧರ
ಹೃಷೀಕೇಶ
ಪದ್ಮನಾಭ
ದಾಮೋದರ
ಸಂಕರ್ಷಣ
ವಾಸುದೇವ
ಪ್ರದ್ಯುಮ್ನ
ಅನಿರುದ್ಧ
ಪುರುಷೋತ್ತಮ
ಅಧೋಕ್ಷಜ,
ನರಸಿಂಹ,
ಅಚ್ಯುತ,
ಜನಾರ್ದನ,
ಉಪೇಂದ್ರ,
ಹರಿ,
ಕೃಷ್ಣ.

🌺 ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ. ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ದಶಾವತಾರ.

ತತ್ – ಅಂದರೆ ಮತ್ಸ್ಯಾವತಾರ ‘ತತ್’ ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.

ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ ‘ಕೂರ್ಮಾವತಾರ’.

ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು. ‘ಕಪಿರ್ವರಾಹ ಶ್ರೇಷ್ಠಶ್ಚ’ ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ.

ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ ‘ಭ’ ರತಿ ಜ್ಞಾನರೂಪ ಇದಾಗಿದೆ.

ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ.

ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ ‘ಪರುಷರಾಮಾವತಾರ’.

ಧಿಯಃ – ಅಂದರೆ ರಾಮಾವತಾರ ‘ಯಂ’ ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ ‘ದಿನೋತಿ’ ಆನಂದವನ್ನು ಕೊಟ್ಟ ರೂಪ ‘ಧಿಯಃ’ ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ.

ಯಃ – ಅಂದರೆ ಕೃಷ್ಣಾವತಾರ ‘ಯ’ಕಾರ ವಾಚ್ಯನಾಗಿ , ಯಃ – ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ ‘ಕೃಷ್ಣಾವತಾರ’.

ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ.

ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.
Consumer News 6361528300📱🙏🙏🙏

ಶುಭಕೃತ್ ಸಂವತ್ಸರ ಶುಭತರಲಿದೆ. ಶುಭ ಎಂದರೆ ಸುಖವಾಗಿರುವುದು ಮಾತ್ರವಲ್ಲ. ಕೆಲವೊಮ್ಮೆ ಕಷ್ಟಗಳೂ ಶುಭವಾಗಿರುತ್ತದೆ. ಕಷ್ಣಪಟ್ಟು ಓದುವುದು ಫಲಿತಾಂಶಕ್ಕೆ ಶುಭ, ಓದದೆ ಸುಖವಾಗಿರುವುದು ಫಲಿತಾಂಶಕ್ಕೆ ಬಾಧಕ. ಹಾಗಾಗಿಯೇ ಕಷ್ಟ ಸುಖ ಎಂಬ ಯುಗಗಳು ಕೂಡಿಕೊಂಡು ಯುಗಾದಿಕೃತ್ ನಾಮಕ ಹರಿಯ ಸೇವೆ ಮಾಡುವುದೇ ಜೀವನಿಗೆ ಶುಭಕೃತ್.

●●●●●●●●●●●●●●●●●●●●
ಒಂದು ಗಂಭೀರವಾದ ವಿಷಯದ ಬಗ್ಗೆ ಹೇಳಬೇಕು

ನೂರಾರು ಜನರನ್ನು ಕರೆಸಿ ಸಾವಿರಾರು ರೂಪಾಯಿ ವ್ಯಯಿಸಿ ಮುಂಜಿ ಮಾಡುತ್ತಾರೆ. ಮಗ ಮೂರುದಿನವೂ ಮೂರು ಹೊತ್ತು ಸಂಧ್ಯಾವಂದನೆ ಮಾಡೋಲ್ಲ. ಟೈಂ ಇರಲ್ಲ ಸ್ಕೂಲು, ಕಾಲೇಜೀ, ಟ್ಯೂಷನ್ , ಕೋಚಿಂಗ್ ಅಂತ ಬ್ಯುಸಿ ಆಗಿಬಿಡುತ್ತಾರೆ. ಮಕ್ಕಳಲ್ಲಿ ಧರ್ಮಕರ್ಮ ಅನ್ನೋದು ಲವ ಲೇಶವೂ ಉಳಿದಿರೋಲ್ಲ.
ನಾಳೆ ಇದೇ ಮಕ್ಕಳೇ ತಂದೆ ತಾಯಿಯರನ್ನು ಬಿಟ್ಟು
ಕಾಣದ ದೂರದೂರಿಗೆ ಹಾರಿ ಹೋಗಿ ಮರಳಿ ಬಾರದೆ ಹೋಗುವರು. ತಂದೆತಾಯಿ ಸತ್ತಾಗ ಶ್ರಾದ್ಧ ಮಾಡುವಷ್ಟು ವ್ಯವಧಾನ ಕೂಡ ಅವರಲ್ಲಿ ಉಳಿದಿರೋಲ್ಲ.
ವೇಗದ ಜೀವನದಲ್ಲಿ ತಮ್ಮತನವನ್ನೇ ಕಳೆದುಕೊಂಡ ಜನರಿಗೆ

ದಾಸರು ಸಾರ್ವಕಾಲಿಕ ಸತ್ಯವನ್ನು

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ
ಆರ್ಥಿಯಿಂದ ಹರಿಯ ನಾಮ
ನಿತ್ಯ ಸ್ಮರಿಸದವನ ಜನ್ಮ

ನೆನಪಿಡಿ ಈ ವಿಹಿತ ಕರ್ಮಗಳು ಆ ಮಕ್ಕಳಿಗೆ ಸ್ಕೂಲು ಕಾಲೇಜು ಟ್ಯೂಷನ್ಗಳಿಗಿಂತ ಬಹಳ ಮುಖ್ಯ.ನೀವು ಅದರ ಮಹತ್ವ ತಿಳಿಸಿ ಹೇಳಿ ಖಂಡಿತ ಮಾಡ್ತಾರೆ.
ತಿಳಿಹೇಳಿ ಮಾಡಿಸುವ ಹಲವಾರು ತಯಿತಂದೆಯರು ಸಮಾಜದಲ್ಲಿ ಇದ್ದಾರೆ. ಅವರಿಂದಲೇ ಇಂದು ಧರ್ಮ ಉಳಿದಿದೆ.

●●●●●●●●●●●●●●
ಏನು ಮಾಡಬೇಕು?
ವಿಪ್ರನಿಗೆ ವಿಹಿತವಾದ ವಿಶೇಷ ಸೇವೆ ಎಂದರೆ ಯಜ್ಞ, ದಾನ, ತಪಸ್ಸುಗಳ ಮೂಲಕ ಹರಿಸೇವೆ ಮಾಡುವುದು.

ಅದರಲ್ಲೂ ತ್ರೈಕಾಲಿಕ ಸಂಧ್ಯಾಂಗ ಗಾಯತ್ರಿ ಮಂತ್ರ ಜಪಯಜ್ಞ ವಿಪ್ರನ ಆದ್ಯ ಕರ್ತವ್ಯ.

ನಾವು ಗಾಯತ್ರಿ ಜಪ ಸಂಧ್ಯಾಕಾಲದಲ್ಲೇ ಮಾಡಬೇಕು ಮತ್ತು ಅನಿವಾರ್ಯ ಕಾರಣ ಹೊರತುಪಡಿಸಿ ಯಾವ ಕಾರಣಕ್ಕೂ ಸಂಧ್ಯಾವಂದನೆ ಮತ್ತು ಗಾಯತ್ರಿ ಜಪ ತಪ್ಪಿಸಬಾರದು.ಇದು ನಮಗೆ ಆದ್ಯ ಕರ್ತವ್ಯ ಆಗಬೇಕು‌.
ಹಾಗಂತ ಸಂಕ್ಷಿಪ್ತವಾಗಿ ಹತ್ತು ಗಾಯತ್ರಿ ಜಪ ಮಾಡಿ ಎದ್ದು ಹೋಗುವುದು ಸರಿಯಲ್ಲ.

●●●●●●●●●●●●●●●●●
ಎಷ್ಟು ಮಾಡಬೇಕು?

ಸದಾಚಾರ ಸ್ಮೃತಿಯಲ್ಲಿ ಆಚಾರ್ಯರು ಹೇಳುವಂತೆ
ಹತ್ತು ಕನಿಷ್ಠ, ನೂರು ಮಧ್ಯ ಸಾವಿರ ಪರಮ .
ಈ ಕಲಘಟ್ಟದಲ್ಲಿ ಸಾವಿರ ಜನರ ಸ್ಟೇಟಸ್ ನೋಡಿ ಮುಗಿಸಬಲ್ಲೆವು ಆದರೆ ಸಾವಿರ ಗಾಯತ್ರಿ ಜಪ ಕಷ್ಟವಾಗುವುದು.
ಇನ್ನು ಹತ್ತು ನಮ್ಮ ಸಾಧನೆಯನ್ನು ಪರಿಪಕ್ವ ಮಾಡುವಲ್ಲಿ ಸಾಕಾಗದು ಎನ್ನಬಹುದು.
ಅನುದಿನ ನಾವು ಲೌಕಿಕ ಜಗತ್ತಿನ ಮಾಯೆಯ ಅಲೆಗಳ ಅಪ್ಪಳಿಸುವಿಕೆಯನ್ನು ತಡೆದು ಗಟ್ಟಿಯಾಗಿ ನಿಲ್ಲಲು ಜಪತಪಾನುಷ್ಠಾನಗಳೇ ನಮಗೆ ಬಲ. ಇಲ್ಲದೇ ಹೋದರೇ ನೂರು ವರ್ಷ ಕಳೆದರೂ ನಿಂತಲ್ಲೇ ನಿಲ್ಲುವ ಸ್ಥಿತಿ.
●●●●●●●●●●●●●●
ಹೇಗೆ ಮಾಡಬೇಕು?

ಗಾಯತ್ರಿ ಮಂತ್ರದ ಅರ್ಥ ತಿಳಿದು, ಅನುಸಂಧಾನ ಮಾಡಿಕೊಳ್ಳುತ್ತಾ, ಸ್ವರಶುದ್ಧವಾಗಿ, ಅಂಗನ್ಯಾಸ ಕರನ್ಯಾಸಾದಿಗಳೊಂದಿಗೆ, ಪ್ರಾಣಾಯಮ ಪುರಸ್ಸರವಾಗಿ, ಸವಿತೃನಾಮಕ ಸೂರ್ಯನಾರಾಯಣನನ್ನು ನಿರಂತರ ಧ್ಯಾನಿಸುತ್ತಾ ಮಾಡುವ ಮಂತ್ರಾನುನುಷ್ಠಾನ ಪರಮ ಮಂಗಳಕರವಾದುದು. ಇದುವೇ ನಮಗೆ ಸಕಲ ಸೌಭಾಗ್ಯಪ್ರದವು.

ಇದನ್ನು ಅವಜ್ಞೆ ಮಾಡಿ ನಾವು ಯಾವುದೇ ಪೂಜೆ, ಜಪ,ಯಜ್ಞ, ದಾನ ,ಧರ್ಮ,ಮಾಡುವುದೂ ಕೂಡ ಅರ್ಥಹೀನವಾಗಿಬಿಡುತ್ತದೆ.

ಗಾಯತ್ರ್ಯಾಃ ನ ಪರಂಜಪ್ಯಂ
ಗಾಯತ್ರ್ಯಾಃ ನ ಪರಂ ತಪಃ l

ಗಾಯತ್ರ್ಯಾಃ ನ ಪರಂ ದ್ಯೇಯಂ
ಗಾಯತ್ರ್ಯಾಃ ನ ಪರಂ ಹುತಃ ll

ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಮಂತ್ರಯಜ್ಞಕ್ಕಿಂತ ಹಿರಿದಾದ ಬೇರೆ ಯಜ್ಞ ಇಲ್ಲ ..

●●●●●●●●●●●●●●●●●
ಯಾಕೆ ಮಾಡಬೇಕು?

ಗಾಯತ್ರಿ ಜಪ ಮಾಡದೆ ನಮಗೆ ಅನ್ಯ ದಾರಿಯಿಲ್ಲ.
ಗಾಯತ್ರಿಯಿಂದಲೇ ಬ್ರಹ್ಮ ತೇಜೋಬಲ.
ವಸಿಷ್ಠರಿಗೆ ಆ ಬ್ರಹ್ಮ ತೇಜಸ್ಸಿನ ಬಲ ಇದ್ದುದರಿಂದಲೇ ಕೌಶಿಕನ ಮಹಾಸೇನೆ ಮಹಾಅಸ್ತ್ರಗಳೂ ಕೂಡ ಅವರ ಕೂದಲನ್ನೂಲು ಸಾಧ್ಯವಾಗಲಿಲ್ಲ.
ಆಗ ಆ ರಾಜನು ಧಿಕ್ ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋ ಬಲಂ ಬಲಂ ಎಂದು ತಪಸ್ಸಿಗೆ ಹೋದ. ಬ್ರಹ್ಮ ತೇಜೋಬಲವನ್ನೇ ಗಳಿಸಿದ.
ನಂತರ ವಿಶ್ವಾಮಿತ್ರನಾದ , ಬ್ರಹ್ಮರ್ಷಿಯಾದ.
ಗಾಯತ್ರಿಯ ಬಲ ಇದ್ದರೆ ಸಕಲ ಗ್ರಹಬಲ,ತಾರಾಬಲ,ಚಂದ್ರಬಲ,ವಿದ್ಯಾಬಲ ,ದೈವಬಲ ಎಲ್ಲವೂ‌ ಇದೆ.

●●●●●●●●●●●●●

ಅಷ್ಟಾಕ್ಷರ ಮಹಾಮಂತ್ರ

ಓಂಕಾರದಲ್ಲಿ ಇರುವ ಎಂಟು ಅಕ್ಷರಗಳಿಂದ ಹುಟ್ಟಿದ ಮಂತ್ರವೇ ನಾರಾಯಣ ಅಷ್ಟಾಕ್ಷರ ಮಂತ್ರ.
‘ಗಾಯತ್ರ್ಯಾಃ ತ್ರಿಗುಣಂ’ ಎಂದು
ಸದಾಚಾರ ಸ್ಮೃತಿಯಲ್ಲಿ ಆಚಾರ್ಯರು ಗಾಯತ್ರಿ ಮಂತ್ರಜಪಸಂಖ್ಯೆಯ ಮೂರರಷ್ಟು ಅಷ್ಟಾಕ್ಷರ ಮಂತ್ರ ಜಪ ಅನುಷ್ಠಾನ ಮಾಡಬೇಕು ಎಂದು ಆಚಾರ್ಯರ ಮಾತು ಇದೆ.
ಗುರುಗಳಿಂದ ಉಪದೇಶ ಪಡೆದು ಅವಶ್ಯವಾಗಿ
ನಾರಾಯಣ ಅಷ್ಟಾಕ್ಷರ ಮಂತ್ರವನ್ನು ಉಪನೀತನಾದ ಪ್ರತಿಯೋರ್ವನೂ ಜಪ ಮಾಡಬೇಕು.
ಇದು ಮಾಡದೆ ಯಾವ ಧರ್ಮಾಚರಣೆಯೂ ಪ್ರಯೋಜಕ ಆಗುವುದಿಲ್ಲ.
●●●●●●●●●●●●●●●


●●●●●●●●●●●●●●●●

ಈ ಸಂವತ್ಸರದಲ್ಲಿ ನಾವೆಲ್ಲರೂ ಒಂದು ಸಂಕಲ್ಪ ಮಾಡೋಣ.

◆ಈ ಪರ್ಯಂತ ಸಂವತ್ಸರತ್ರಿಕಾಲದಲ್ಲಿ ಸಂಧ್ಯಾವಂದನೆಯನ್ನು ಸಕಾಲದಲ್ಲಿ ಮಾಡುತ್ತೇವೆ. (ಮಾಧ್ಯಾಹ್ನಿಕ ಮಾಡಲು ಕಷ್ಟವಾದರೆ ಬೆಳಗ್ಗೆಯೇ ಮಾಡಬೇಕು ಮಾಡದೆ ಸರ್ವಥಾ ಇರಬಾರದು)
◆ಅನಿವಾರ್ಯ ಕಾರಣ ಹೊರತುಪಡಿಸಿ ನಿತ್ಯ ಕನಿಷ್ಠ ನೂರು ಗಾಯತ್ರಿ ಮುನ್ನೂರು ಅಷ್ಟಾಕ್ಷರ ಮಂತ್ರ ಜಪವನ್ನು ಮಾಡಿಯೇ ತೀರುತ್ತೇವೆ. (ಇದರೊಂದಿಗೆ ಕೃಷ್ಣ ಷಡಕ್ಷರ, ಪಂಚಾಕ್ಷರ ಮುಂತಾದ ಉಪದೇಶ ಪಡೆದ ಮಂತ್ರಗಳನ್ನೂ ಅನುಷ್ಠಾನ ಮಾಡುವ ಸಂಕಲ್ಪ ಕೂಡ ಮಾಡಬಹುದು)

ಬ್ರಹ್ಮತೇಜೋಬಲಂ_ಬಲಂ

Related Posts