ಈವತ್ತು #ಅಕ್ಷಯ_ತದಿಗೆ
ತನ್ನಿಮಿತ್ತ ಈ ಬರೆಹ.

ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ.
ಅಕ್ಷಯ ಎಂದರೆ ಕ್ಷಯಿಸದೆ,
ವೃದ್ಧಿಯಾಗುವುದು ಎಂದು ಅರ್ಥ.
ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಚೈತ್ರ ಶುದ್ಧ ಪಾಡ್ಯ,(ಯುಗಾದಿ,)
ವೈಶಾಖ ಶುದ್ಧ ತದಿಗೆ (ಅಕ್ಷಯ ತದಿಗೆ). ಆಶ್ವಯುಜ ಶುದ್ಧ ದಶಮಿ, (ವಿಜಯ ದಶಮಿ)
ಇವು ಮೂರು ಪೂರ್ಣ ಪಂಚಾಂಗ ಶುದ್ಧ ಇರುವ ಮುಹೂರ್ತದ ದಿನಗಳು.
ಕಾರ್ತೀಕ ಶುದ್ಧ ಪಾಡ್ಯ ಅರ್ಧ ಶುದ್ಧಿ ಇರುವ ಮುಹೂರ್ತದ ದಿನ.ಇವು #ಸಾಢೆ #ತೀನ್_ಮುಹೂರ್ತಗಳು ಎಂದು ಪ್ರಸಿದ್ಧವಾಗಿವೆ.
ಈ ದಿನಗಳಲ್ಲಿ ಎಲ್ಲ ಶುಭ ಕಾರ್ಯಕ್ಕೂ ದಿನ ಶುದ್ಧಿ ನೋಡಬೇಕಾಗಿಲ್ಲ.
ಮದುವೆ,ಉಪನಯನ,ಗೃಹಪ್ರವೇಶ, ಹೊಸ ವ್ಯವಹಾರ ಆರಂಭ,ಎಲ್ಲದಕ್ಕೂ ಸುಮುಹೂರ್ತದ,ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.

ಇದರಲ್ಲಿ ಅಕ್ಷಯ ತದಿಗೆ ಶ್ರೇಷ್ಠವಾದುದು.
ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.

ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.

ಶ್ರೀ ಮಹಾವಿಷ್ಣುವು ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.

ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯತದಿಗೆಯಂದು.

ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ ಅಕ್ಷಯ ತದಿಗೆ.

ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.

ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.

ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ ನಂಬಿಕೆ ಜನಮಾನಸದಲ್ಲಿದೆ.

ಸುದಾಮ ಕೃಷ್ಣಾನುಗ್ರಹ. ಪಡೆದ ದಿನ.

ದ್ರೌಪದಿಗೆ ಕೃಷ್ಣನು ಅಕ್ಷಯ ವಸ್ತ್ರಪ್ರದಾನ ಮಾಡಿದ್ದು ಅಕ್ಷಯ ತದಿಗೆಯಂದು.

ಕ್ಷೀರಸಾಗರ ಮಥನದಲ್ಲಿ ಲಕ್ಷ್ಮಿಯು ಆವಿರ್ಭವಿಸಿದ ದಿನ ಇದಾಗಿದೆ.

ಅಕ್ಷಯಪಾತ್ರೆಗಾಗಿ ದ್ರೌಪದಿಯು ಸೂರ್ಯನನ್ನು ಪ್ರಾರ್ಥಿಸಿದ್ದೂ ಅಕ್ಷತದಿಗೆಯಂದು.

೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.

ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜವತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ

ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ, ಎಂದು.
ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,ರಾವಣನ ಅಣ್ಣ.
ರಾವಣ ಅಣ್ಣನಿಂದ, ಲಂಕಾನಗರವನ್ನು ವಶಪಡಿಸಿಕೊಂಡು,ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ. ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು ಸುವರ್ಣ ವಿಶ್ವಕರ್ಮರಿಂದ ಭೂಮಿಪೂಜೆಯನ್ನು ಮಾಡಿಸಿದ್ದನು.
ಇದರಿಂದ ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.

ಅಕ್ಷಯತೃತಿಯ ದಿನ
ಆಚರಿಸುವ ವ್ರತ,ಯಜ್ಞ,ಯಾಗಾದಿಗಳ ಫಲ,ಜಪ,ತಪ,ಪೂಜೆಗಳ ಫಲ ಅಕ್ಷಯವಾಗುತ್ತದೆಂದು ಶಾಸ್ತ್ರಗಳು ಸಾರಿವೆ.

ಈಗ ಚಿನ್ನವನ್ನು ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.
ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.

ಆದರೆ ಅವಶ್ಯಕತೆಗಿಂತ ಹೆಚ್ಚು ಚಿನ್ನವನ್ನು ಸಂಗ್ರಹಿಸಿಟ್ಟರೆ ಅಲ್ಲಿ ಕಲಿಪುರುಷನು ನೆಲೆಸಿ ಕೆಡುಕಾಗುತ್ತದೆ ಎಂಬುದನ್ನು ಜನ ಮರೆತಿದ್ದಾರೆ.
ಸ್ವರ್ಣ ಲಂಕೆಯು ನಿರ್ನಾಮವಾದುದು ಇದರಿಂದಲೇ.

ಭಾಗವತದಲ್ಲಿ,ಪರೀಕ್ಷಿತನು ಕಲಿಯನ್ನು ನಿಗ್ರಹಿಸಿ ನನ್ನ ರಾಜ್ಯದಲ್ಲಿರಬೇಡ ಎಂದಾಗ,ಹಾಗಾದರೆ ನಾನೆಲ್ಲಿರಲಿ ಎಂದು ಕೇಳಿದ್ದಕ್ಕೆ,”ಹೆಚ್ಚು ಬಂಗಾರ ಸಂಗ್ರಹವಿದ್ದಲ್ಲಿ,
ಹಾದರ,ಅತ್ಯಾಚಾರನಡೆಯುವಲ್ಲಿ,
ಜೂಜು ಮದ್ಯಪಾನ ನಡೆಯುವಲ್ಲಿ,
ಧರ್ಮಭ್ರಷ್ಟರ ಮನ,ಮನೆಗಳಲ್ಲಿ ವಾಸಿಸು”
ಎಂದು ಹೇಳಿದ್ದನು.

ಹಾಗಾಗಿ ಸಜ್ಜನರು ಈ ನಾಲ್ಕು ಸ್ಥಳಗಳಿಗೆ ಹೋಗಬಾರದು ಎಂಬ ಮಾತಿದೆ.

ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ-ಶಾಂತಿ-ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು ಅಕ್ಷಯವಾಗಿಸಲಿ.

ಸರ್ವೇಜನಾಃಸುಖಿನೋ_ಭವಂತು.

🙏🙏🙏🙏🙏🙏🙏🙏

Related Posts