*ವಾಹನ ತಪಾಸಣೆ ಪೊಲೀಸ್ ಸಿಬ್ಬಂದಿಗೆ ರವಿಕಾಂತೇಗೌಡ ಖಡಕ್ ಎಚ್ಚರಿಕೆ. ಆದೇಶ ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ.*
ಬೆಂಗಳೂರು “ದಾಖಲೆ ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ವಾಹನ ಸವಾರರನ್ನು ತಡೆದು ತೊಂದರೆ ಕೊಡುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಡಿಜಿ, ಐಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಪೊಲೀಸರು ವಾಹನ ಸವಾರರಿಗೆ ರಸ್ತೆಯಲ್ಲಿ ತಡೆ ಹಾಕುವಂತಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ಸವಾರರಿಗೆ ತೊಂದರೆ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು. ಆದರೂ ಕೂಡ ಕೆಲವು ಪೊಲೀಸರು ರಸ್ತೆಯಲ್ಲಿ ವಾಹನ ತಡೆದು ತೊಂದರೆ ನೀಡುತ್ತಿದ್ದಾರೆ ಎನ್ನುವುದು ಆರೋಪ.
ಎಚ್ಚೆತ್ತ ಇಲಾಖೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶದಂತೆ ಸಂಚಾರ ಉಲ್ಲಂಘನೆ ಕಂಡು ಬಂದರೆ ಮಾತ್ರ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬೇಕು ಎಂದು ಹೇಳಿದ್ದಾರೆ. ಕೆಲವು ಕಡೆ ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗದೇ ನಿರ್ಲಕ್ಷ್ಯ ವಹಿಸಲಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಆದ್ದರಿಂದ ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದರೆ ಮುನ್ನೆಚ್ಚರಿಕೆ ನೀಡಲ್ಲ. ಬದಲಾಗಿ ಆದೇಶ ಮೀರಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಹಾಗೂ ಡಿಜಿಐಜಿಪಿ ಅವರ ಆದೇಶದ ಕುರಿತು ವಿಭಾಗದ ಡಿಸಿಪಿಗಳು ಆಯಾ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗೆ ತಿಳುವಳಿಕೆ ನೀಡಬೇಕು ಎಂದು ರವಿಕಾಂತೇಗೌಡ ಸೂಚನೆ ನೀಡಿದ್ದಾರೆ.
ಸಂಚಾರ ಪೊಲೀಸರು ದಾಖಲೆಗಳ ಪರಿಶೀಲನೆ ನೆಪದಲ್ಲಿ ವಾಹನ ಸವಾರರನ್ನು ತಡೆದು ಸುಮ್ಮನೆ ಕಿರುಕುಳ ನೀಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. *ಈ ಸಂಬಂಧ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದರೆ ಮಾತ್ರ ವಾಹನಗಳನ್ನು ತಡೆಯಬೇಕು. ಅನಗತ್ಯವಾಗಿ ವಾಹನಗಳನ್ನು ತಡೆಯಬಾರದು ಎಂದು ಎಚ್ಚರಿಕೆ ನೀಡಿದ್ದರು.*
ಈ ನಿಯಮ ಸರಿಯಾಗಿ ಪಾಲನೆಯಾಗದೇ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಆದ್ದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಜುಲೈ 16ರಂದು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
*ಈ ಸುತ್ತೋಲೆಯಂತೆ ನಡೆದುಕೊಳ್ಳದಿದ್ದರೆ ಅಂತಹವರ ವಿರುದ್ಧ ಕ್ರಮ* ಜರುಗಿಸಲಾಗುವುದೆಂದು ಮತ್ತೊಮ್ಮೆ ರವಿಕಾಂತೇಗೌಡ ಎಚ್ಚರಿಸಿದ್ದಾರೆ.* ಸಾರ್ವಜನಿಕರಿಂದ ಪ್ರತಿನಿತ್ಯ ಸಾಂಚಾರ ಪೊಲೀಸರ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದಂತೆ ಇಲಾಖೆ ನಿರ್ದಕ್ಷಿಣ್ಯ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.