ನಾಗರ ಪಂಚಮಿ ನಾಡಿಗೆ ದೊಡ್ಡದು ! ಶ್ರಾವಣಮಾಸದ ಶುಕ್ಲ ಪಕ್ಷ ದ ಪಂಚಮಿ ತಿಥಿಯಂದು ನಾಗರಪಂಚಮಿ ಹಬ್ಬದ ಆಚರಣೆ. ಬೆನ್ನಿಗೆ ಹಬ್ಬಗಳ ಸಾಲನ್ನು ಕಟ್ಟಿಕೊಂಡು ಬರುವ ನಾಗರಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಮಳೆಗಾಲದಲ್ಲಿ ಹುತ್ತಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಹಾವುಗಳು ಅನಿವಾರ್ಯವಾಗಿ ಹೊರಬರುತ್ತವೆ. ಹಾಗೂ ಅವುಗಳಿಗೆ ಇದು ವಂಶಾಭಿವೃದ್ಧಿಯ ಕಾಲವೂ ಆಗಿರುವುದರಿಂದ ಈ ಸಮಯದಲ್ಲೇ ನಾಗಪೂಜೆ ಮಾಡುವ ನಮ್ಮ ಹಿರಿಯರ ವಿಚಾರ ನಿಜಕ್ಕೂ ಅರ್ಥಪೂರ್ಣ. ಹಬ್ಬಕ್ಕೆ ಮುನ್ನವೇ ತವರಿಗೆ ಬಂದ ಹೆಣ್ಣು ಮಕ್ಕಳು ತಾಯಿ, ಅತ್ತಿಗೆ, ನಾದಿನಿಯರ ಜೊತೆ ಸೇರಿ ಹಬ್ಬದ ತಯಾರಿಯಲ್ಲಿ ತೊಡಗುತ್ತಾರೆ. ತಂಬಿಟ್ಟು, ಶೇಂಗಾ ಉಂಡಿ ತಯಾರಿ ಸಂಭ್ರಮ ಆರಂಭವಾಗುತ್ತದೆ. ಅರಳಿನ ಜೋಳ ಹುರಿದು ಅರಳು ಮಾಡುವುದು, ಅವುಗಳನ್ನು ಬೀಸಿ ಅರಳಿಟ್ಟು ಮಾಡುವುದು, ಅರಳಿನ ಉಂಡಿ, ನವಣೆ ಉಂಡಿ , ದಾಣಿ ಉಂಡಿ ಹೀಗೆ ತರಹೇವಾರಿ ಸಿಹಿಗಳೂ, ಜೊತೆಗೆ ಚಕ್ಕುಲಿ, ಅವಲಕ್ಕಿ ಚೂಡಾಗಳೂ ತಯಾರಾಗುತ್ತವೆ. ನಾಗರಪಂಚಮಿಗೆ ಅಳಿಯನೇನಾದರೂ ಅತ್ತೆಯ ಮನೆಗೆ ಬಂದರೆ ‘ನಾಗರಪಂಚಮಿಗೆ ನಾಚಿಗ್ಗೆಟ್ಟ ಅಳಿಯಾ.’ ಎಂಬ ಉಪಾಧಿ ಪಕ್ಕಾ. ಆದ್ದರಿಂದ ಹೆಣ್ಣು ಮಕ್ಕಳು ಕೆಲದಿನಗಳ ಮಟ್ಟಿಗೆ ತವರಿನಲ್ಲಿ ಸ್ವತಂತ್ರರು! ಅಧ್ಯಾತ್ಮದ ಹಿನ್ನೆಲೆ :- ಅಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದಾದರೆ ಅಧ್ಯಾತ್ಮ ಸಾಧಕರಿಗೆ ಇದು ಸ್ಫೂರ್ತಿಯ ಪುಷ್ಟಿ ತುಂಬುವ ಮಾಸ. ಕುಂಡಲಿನಿಯ ಶಕ್ತಿ ಜಾಗೃತ ಮಾಡಿಕೊಳ್ಳಲು ಅತ್ಯಂತ ಸೂಕ್ತ ಕಾಲ. ಮೂಲಾಧಾರ ಚಕ್ರದಲ್ಲಿ ಮಲಗಿರುವ ಆ ಶಕ್ತಿ, ಸಾಧನೆಯಿಂದ ಎಲ್ಲ ಚಕ್ರಗಳನ್ನು ದಾಟಿ ಎದ್ದು ನಿಂತು ನಾಗರ ಹೆಡೆ ಕಂಡಂತೆ ಕಾಣುತ್ತದೆ ಎಂಬ ಪ್ರತೀತಿ. ಪೌರಾಣಿಕ ಹಿನ್ನೆಲೆ :- ಪೌರಾಣಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಪರೀಕ್ಷಿತನ ಮಗ ಜನಮೇಜಯ, ತನ್ನ ತಂದೆಯನ್ನು ಕೊಂದ ತಕ್ಷ ಕನ ಸಂತತಿ ನಾಶವಾಗಬೇಕೆಂದು ಸರ್ಪಯಾಗ ಮಾಡಿಸುತ್ತಾನೆ. ಆ ಯಾಗಕ್ಕೆ ಅನೇಕ ಸರ್ಪಗಳು ಆಹುತಿಯಾಗುತ್ತವೆ. ಆಗ ಸರ್ಪರಾಜ ವಾಸುಕಿ ಬ್ರಹ್ಮನ ಮೊರೆಹೋಗುತ್ತಾನೆ. ತಮ್ಮ ತಾಯಿಯ ಶಾಪವೇ ಇದಕ್ಕೆಲ್ಲಾ ಕಾರಣ ಎಂದು ವಾಸುಕಿಗೆ ತಿಳಿಯುತ್ತದೆ. ‘ಜರಾತ್ಕಾರು ಮುನಿಗೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮಾಡು. ಅವಳಿಂದ ಜನಿಸುವ ಆಸ್ತಿಕನು ನಿಮ್ಮ ಶಾಪ ವಿಮೋಚನೆ ಮಾಡುತ್ತಾನೆ.’ ಎಂದು ಬ್ರಹ್ಮ ಹೇಳುತ್ತಾನೆ. ಬ್ರಹ್ಮನ ಮಾತಿನಂತೆ ಆಸ್ತಿಕನ ಜನನವಾಗುತ್ತದೆ. ಅಲ್ಲಿಯವರೆಗೂ ಸರ್ಪಯಾಗದಲ್ಲಿ ಸರ್ಪಗಳ ಆಹುತಿ ನಡೆದೇ ಇರುತ್ತದೆ. ಕೊನೆಗೊಂದು ದಿನ ಜನಮೇಜಯನ ಯಾಗಶಾಲೆಗೆ ಆಸ್ತಿಕಮುನಿ ಬರುತ್ತಾನೆ. ಅವನ ಮನಃಪರಿವರ್ತನೆ ಮಾಡಿ ಯಜ್ಞ ನಿಲ್ಲಿಸುತ್ತಾನೆ. ಆಗ ಸರ್ಪಗಳ ಸಂತತಿ ಉಳಿಯುವಂತಾಗುತ್ತದೆ. ಇದೆಲ್ಲ ನಡೆದದ್ದು ಶ್ರಾವಣಮಾಸದ ಪಂಚಮಿ ದಿನದಂದು ಎನ್ನುವ ನಂಬಿಕೆ ಇದೆ. ಹಾಗಾಗಿ ನಾಗಗಳಿಗೆ ಆಸ್ತಿಕನ ವರದಾನವಾದ ಶ್ರಾವಣ ಶುದ್ಧ ಪಂಚಮಿಯನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ ಎಂಬುದು ಪ್ರತೀತಿ. ಕೃಷ್ಣಾರ್ಪಣಮಸ್ತು (ಸತ್ಸಂಗ ಸಂಗ್ರಹ)