ಪಿತೃಶ್ರಾದ್ಧದ ಮುಖ್ಯ ಉದ್ದೇಶ

11-09-2022 ಭಾನುವಾರ ದಿಂದ 25-09-2022 ಭಾನುವಾರದ ತನಕ ಪಿತೃಪಕ್ಷ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌ ‌ ‌ ‌ ‌
ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ?

ಚಾಂದ್ರಮಾನ ಕಾಲ ಗಣನೆ ಪದ್ಧತಿಯಲ್ಲಿ ಒಂದು ತಿಂಗಳ ಎರಡು 15 ದಿನಗಳ ಅವಧಿಗಳನ್ನು ಪಕ್ಷ ಎಂದು ಕರೆಯುತ್ತಾರೆ. ಪೂರ್ಣಿಮೆಯಲ್ಲಿ ಕೊನೆಗೊಳ್ಳುವ ಅವಧಿಯು ಶುಕ್ಲ ಪಕ್ಷ ಎಂದೂ ಅಮಾವಾಸ್ಯೆಯಲ್ಲಿ ಕೊನೆಗೊಳ್ಳುವ ಅವಧಿಯು ಕೃಷ್ಣ ಪಕ್ಷ ಎಂದೂ ಕರೆಯಲ್ಪಡುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ ಪಿತೃ ಪಕ್ಷ ಎಂದು ಹೆಸರು ಮತ್ತು ಈ ಪಕ್ಷದ ಅಮಾವಾಸ್ಯೆಯು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಉಳಿದ ಅಮಾವಾಸ್ಯೆಗಳಿಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ.

ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ಮತ್ತು ಈ ಪಿತೃ ಪಕ್ಷಕ್ಕೆ ಏಕೆ ಇಷ್ಟು ಮಹತ್ವ ?

ಇದಕ್ಕೆ ಎರಡು ಕಾರಣಗಳಿವೆ: ಈ ಪಕ್ಷದಲ್ಲಿಆಚರಿಸುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು.

ಪಂಚ ಮಹಾಯಜ್ಞ ಎಂದರೇನು ?
ಮಹರ್ಷಿ ಸಂಸ್ಕೃತಿಯಲ್ಲಿ ಭಗವಂತನನ್ನು ಆರಾಧಿಸುವ ವಿಧಾನಗಳಲ್ಲಿ ನೇರವಾಗಿ ಭಗವಂತನನ್ನೇ ಆರಾಧಿಸುವುದು ಒಂದು ಬಗೆಯಾದರೆ, ಅವನ ಅನುಗ್ರಹ ನಮ್ಮವರೆವಿಗೆ ಹರಿದು ಬರುವ ದ್ವಾರಗಳನ್ನು ಆರಾಧಿಸಿ ತನ್ಮೂಲಕ ನಮ್ಮ ಆರಾಧನೆ ಭಗವಂತನಿಗೆ ತಲಪುವ ಹಾಗೆ ಮಾಡುವುದು ಮತ್ತೊಂದು ವಿಧಾನ. ಈ ಎರಡನೆಯ ವಿಧಾನದಲ್ಲಿ, ಮನುಷ್ಯನ ಪೋಷಣೆ, ರಕ್ಷಣೆಗಾಗಿ ಭಗವಂತನ ಅನುಗ್ರಹ ಹರಿದು ಬರುವ 5 ದ್ವಾರಗಳನ್ನು ಗೌರವಿಸುವುದು ಅಥವಾ ಪೂಜಿಸುವುದು ಪಂಚಮಹಾಯಜ್ಞಗಳೆನ್ನಿಸಿಕೊಳ್ಳುತ್ತದೆ.

ಒಬ್ಬ ಮನುಷ್ಯ ಹುಟ್ಟಿ, ಬೆಳೆದು ಸಾರ್ಥಕ ಜೀವನ ನಿರ್ವಹಿಸಲು ಆತನಿಗೆ ಅನೇಕ ವಿಧವಾದ ಪೋಷಣೆ, ಸಹಕಾರಗಳು ಅವಶ್ಯಕವಾಗಿದ್ದು ಭಗವಂತನ ಅನುಗ್ರಹದಿಂದ ದೊರೆಯುತ್ತದೆ. ಒಂದು ಮಗು ಹುಟ್ಟಿದೊಡನೆಯೇ ಅದಕ್ಕೆ ಯಾರೂ ಹೇಳಿಕೊಡದಿದ್ದರೂ ತನ್ನದೇ ಸಹಜ ಪ್ರೇರಣೆಯಿಂದ ಸ್ತನ್ಯಪಾನ ಮಾಡುತ್ತದೆ. ನಂತರ ತಾನಾಗಿಯೇ ನೋಡುವುದು, ನಡೆಯುವುದು, ಮಾತಾನಾಡುವುದನ್ನೆಲ್ಲಾ ಕಲಿತುಕೊಳ್ಳುತ್ತದೆ. ಮಾತನ್ನು ಕಲಿಯುವಾಗ ಸುತ್ತಮುತ್ತಲಿನ ಜನರ ಮಾತನ್ನು ಕೇಳುತ್ತಾ ಮಾತನ್ನು ಕಲಿತರೂ ಕಲಿಯುವಿಕೆಯು ಆಗುವುದು ತನ್ನೊಳಗೇ ಇರುವು ಸಹಜ ಪ್ರವೃತ್ತಿಯ ದೆಸೆಯಿಂದಲೇ ಹೊರತು ಒಬ್ಬ ವ್ಯಕ್ತಿ ಕಲಿತಿರುವ ಅಥವಾ ಆಡುವ ಅಷ್ಟೂ ಮಾತನ್ನು ಯಾರೂ ಹೊರಗಡೆಯಿಂದ ಹೇಳಿಕೊಡಲಿಕ್ಕಾಗುವುದಿಲ್ಲ.

ಈ ಉದಾಹರಣೆಯನ್ನು ವಿಸ್ತರಿಸಿ ಗಮನಿಸಿದಾಗ, ನಮ್ಮ ಎಲ್ಲಾ ಇಂದ್ರಿಯ ಮನಸ್ಸುಗಳ ಕಾರ್ಯನಿರ್ವಹಣೆ ನಮ್ಮೊಳಗಿನ ಪ್ರೇರಣೆಯಿಂದಲೇ ನಡೆಯುತ್ತಿರುತ್ತದೆ. ನಮ್ಮೊಳಗೇ ಶಕ್ತಿ ರೂಪದಲ್ಲಿದ್ದು, ಇಂದ್ರಿಯ ಮನಸ್ಸುಗಳಿಗೆ ಪ್ರೇರಣೆ ನೀಡುವವರನ್ನು ದೇವತೆಗಳು ಎನ್ನುತ್ತೇವೆ. ದೇವತೆಗಳು ಭಗವಂತನ ಅನುಗ್ರಹ ಹರಿಯಲು ಇರುವ ಒಂದು ದ್ವಾರ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವ ನಾನಾ ವಿಧಗಳನ್ನು ದೇವ ಯಜ್ಞ ಎನ್ನುತ್ತೇವೆ. ಇದೇ ರೀತಿ, ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜೀವನದಲ್ಲಿ ನಾನಾ ಪಾತ್ರ ವಹಿಸಿದರೂ, ತನ್ನ ಮಕ್ಕಳ ವಿಷಯಕ್ಕೆ ಬಂದಾಗ ಅತನಲ್ಲಿಮತ್ತು ಆಕೆಯಲ್ಲಿ ತಂದೆತನ ಮತ್ತು ತಾಯಿತನ ಇರುತ್ತದೆ.

ಈ ತಂದೆತನ, ತಾಯ್ತನದ ಪ್ರವೃತ್ತಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವುದು ಆತನ ಒಳಗೇ ಇರುವ ಪಿತೃ ದೇವತೆಗಳೆಂಬ ಶಕ್ತಿಗಳಿಂದ. ಒಬ್ಬ ಮನುಷ್ಯ ಹುಟ್ಟಿದ ನಂತರ ಆತನ ಅಥವಾ ಆಕೆಯ ಪಾಲನೆ, ಪೋಷಣೆಯನ್ನು ಪಿತೃದೇವತೆಗಳು ಪ್ರತ್ಯಕ್ಷವಾಗಿ ತಂದೆ, ತಾಯಿಯ ರೂಪದಲ್ಲೂ, ಪರೋಕ್ಷವಾಗಿ ದೇಹದೊಳಗೆ ಶಕ್ತಿರೂಪದಲ್ಲೂ ನೀಡುತ್ತಿರುತ್ತಾರೆ. ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಪಿತೃಯಜ್ಞ ಎನ್ನುತ್ತಾರೆ. ಹೀಗೆಯೇ ಒಬ್ಬ ಮನುಷ್ಯನ ಜ್ಞಾನ ಸಾಧನೆಗೆ ಋಷಿಗಳು ಹೊರಗಿನಿಂದಲೂ, ಒಳಗಿನಿಂದಲೂ ಕಾರಣರಾಗಿರುತ್ತಾರೆ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಬ್ರಹ್ಮ ಯಜ್ಞ ಅಥವಾ ಜ್ಞಾನ ಯಜ್ಞ ಎನ್ನುತ್ತಾರೆ. ಇದಲ್ಲದೇ ಒಬ್ಬ ಮನುಷ್ಯ ಸಮರ್ಥ ಜೀವನ ನಡೆಸುವಲ್ಲಿಅನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ.

ಒಬ್ಬ ವ್ಯಕ್ತಿ ಒಂದು ಹೊತ್ತಿನ ಆಹಾರ ಸೇವನೆ ಮಾಡಬೇಕಾದರೆ ಹಲವರ ಪಾತ್ರವಿರುತ್ತದೆ.ಇದೇ ರೀತಿಯಲ್ಲಿ ನಮ್ಮ ವಸತಿ, ಬಟ್ಟೆ, ಶಿಕ್ಷಣ, ಮನೋರಂಜನೆ, ಸಂಪಾದನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಅನೇಕಾನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅತಿಥಿ ಸತ್ಕಾರದ ಮೂಲಕ ಮನುಷ್ಯರನ್ನು ಸತ್ಕರಿಸುವುದು ಮನುಷ್ಯ ಯಜ್ಞವೆನಿಸಿಕೊಳ್ಳುತ್ತದೆ. ಹೀಗೆಯೇ ಪಶು ಪಕ್ಷಿಗಳೂ ಸಹ ನಮ್ಮ ಪಾಲನೆ ಪೋಷಣೆಗೆ ಕಾರಣವಾಗಿರುತ್ತದೆ. ಪಶುಪಕ್ಷಿಗಳಿಗೆ ಆಹಾರ ನೀಡುವುದನ್ನು ಭೂತ ಯಜ್ಞ ಎನ್ನುತ್ತಾರೆ. ಹೀಗೆ ಭಗವಂತನ ಪೋಷಣೆ ನಮಗೆ ತಲಪುವ ದ್ವಾರಗಳಲ್ಲಿ 5 ಮುಖ್ಯ ದ್ವಾರಗಳಾದ – ದೇವತೆಗಳು, ಪಿತೃಗಳು, ಋುಷಿಗಳು, ಮನುಷ್ಯರು ಮತ್ತು ಪಶುಪಕ್ಷಿಗಳನ್ನು ಅರಾಧಿಸುವುದನ್ನು, ಸತ್ಕರಿಸುವುದನ್ನು ಪಂಚ ಮಹಾ ಯಜ್ಞಗಳೆಂದು ಕರೆಯುತ್ತಾರೆ. ಈ ಐದರಲ್ಲಿಒಂದಾಗಿರುವುದರಿಂದ ಪಿತೃ ಯಜ್ಞಕ್ಕೆ ಒಂದು ಮಹತ್ವ.

  1. ಎರಡನೆಯದಾಗಿ, ಈ ಹದಿನೈದು ದಿನಗಳಿಗೆ ಕಾಲದ ದೃಷಿಯಿಂದಲೂ ಒಂದು ಮಹತ್ವ ಉಂಟು. ಹೇಗೆ ಒಂದು ದಿನದಲ್ಲಿ ರಾತ್ರಿ ಕಾಲ ನಿದ್ರೆಗೂ, ಹಗಲು ಪ್ರವೃತ್ತ ಜೀವನಕ್ಕೂ ಮತ್ತು ಸಂಧ್ಯಾ ಕಾಲ ಭಗವಂತನ ಆರಾಧನೆಗೂ ಸೂಕ್ತವಾಗಿದೆಯೋ ಹಾಗೆಯೇ ಒಂದು ವರ್ಷದ ಕೆಲವು ದಿನಗಳಲ್ಲಿ ಕೆಲವು ದೇವತೆಗಳ ಅನುಗ್ರಹವು ವಿಶೇಷವಾಗಿ ಹರಿಯುತ್ತಿದ್ದು ಆಯಾ ದೇವತೆಯ ವಿಶೇಷ ಆರಾಧನೆಗೆ ಪ್ರಶಸ್ತ ಎಂದು ಪರಿಗಣಿಸಲ್ಪಡುತ್ತದೆ. ಈ ವಿಶೇಷ ದಿನಗಳನ್ನು ಪರ್ವ ಅಥವಾ ಹಬ್ಬ ಎಂದು ಆಯಾ ದೇವತೆಯ ಹೆಸರಿನಿಂದ, ರಾಮ ನವಮೀ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮೊದಲಾಗಿ ಕರೆಯುತ್ತಾರೆ. ಈ ನೇರದಲ್ಲಿ ಪಿತೃ ದೇವತೆಗಳ ಸಾನ್ನಿಧ್ಯ ವಿಶೇಷವಾಗಿ ಕೂಡಿ ಬಂದು ಅವರ ಅನುಗ್ರಹ ಹರಿಯುವುದಕ್ಕೆ ವಿಶೇಷವಾಗಿರುವ ಅವಧಿ ಎಂದರೆ ಈ ಪಿತೃ ಪಕ್ಷ. ಈ ಕಾಲಾವಧಿಯಲ್ಲಿ ಪಂಚ ಮಹಾ ಯಜ್ಞಗಳಲ್ಲೊಂದಾದ ಪಿತೃ ಯಜ್ಞದ ಆಚರಣೆ ವಿಶೇಷ ಫಲವನ್ನು ನೀಡುವುದರಿಂದ ಪಿತೃ ಪಕ್ಷವು ಮಹತ್ವವನ್ನು ಪಡೆಯುತ್ತದೆ.

ಕರ್ಮಭೂಮಿ ಎನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ ” ಶ್ರಾದ್ಧ ” ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದಕ್ಕೆ ” ಪಿತೃಯಜ್ಞ ” ವೆಂದು ಕರೆಯುವದುಂಟು.
ಪಿತೃಪಕ್ಷ ದ ಮಹತ್ವವೇನು

ಪ್ರತಿ ವೈದಿಕ ಕ್ರಿಯೆಯಲ್ಲೂ ಗತಿಸಿದ ಪಿತೃಗಳನ್ನು ಸ್ಮರಿಸಿ “ಪಿತೃದೇವತಾಂ ನಮಸ್ಕೃತ್ಯ’ ಎಂದು ಅನುಗ್ರಹ ಪಡೆದು ವೈದಿಕಕ್ರಿಯೆ ಮುಂದುವರಿಸುವುದು ಸಂಪ್ರದಾಯ. ಪಿತೃದೇವತೆಗಳ ಅನುಕೂಲಕ್ಕಾಗಿ ಋಣಸಂದಾಯ ಮೂಲಕ ಕರ್ತವ್ಯ ಪಾಲನೆಗೆ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುವ ಮಹಾಲಯ – ಈ 15 ದಿನಗಳು ಪಿತೃಪಕ್ಷವೆನಿಸಿ, ಶ್ರಾದ್ಧಾವಿಧಿಗಳಿಗೆ ಪ್ರಾಶಸ್ತ್ಯ ಎಂದು ಹೇಳಿದೆ.
ಯಾರು ಮಾತಾ-ಪಿತೃರ ಶ್ರಾದ್ಧವನ್ನು ಮಾಡುವುದಿಲ್ಲವೋ ಅವನು ಮಾಡುವ ದೇವತಾಕಾರ್ಯಗಳು, ಪೂಜೆ-ಪುನಸ್ಕಾರಗಳನ್ನು ದೇವತೆ
ಗಳು ಸ್ವೀಕರಿಸುವುದಿಲ್ಲವೆಂದು ಶ್ರಾದ್ಧ ನಿಯಮದಲ್ಲಿ ಹೇಳಿದೆ.
ಪಿತೃಪಕ್ಷ ಅಶುಭವಲ್ಲ…….
ಪಿತೃಪಕ್ಷದಲ್ಲಿ ಯಾವುದೇ ದೇವತಾ ಕಾರ್ಯಗಳನ್ನಾಗಲಿ, ಮಂಗಲ ಕಾರ್ಯಗಳನ್ನಾಗಲಿ ಮಾಡುವುದು ಶ್ರೇಯಸ್ಕರ ಅಲ್ಲವೆಂಬ ಅಭಿಪ್ರಾಯವಿದೆ. ಗತಿಸಿದ ಕುಟುಂಬದ ಹಿರಿಯರು, ಮಾತಾ –
ಪಿತರಿಗೆ ಶ್ರಾದ್ಧ ಪಿಂಡ ತರ್ಪಣ ನೀಡಿ, ದಿವ್ಯಾತ್ಮಗಳನ್ನು ತೃಪ್ತಿಪಡಿಸಿ, ಅಗಲಿದ ಚೈತನ್ಯಗಳಿಂದ ಅನುಗ್ರಹ ಪಡೆಯುವ ಪ್ರಶಸ್ತ ಕಾಲವೇ ಪಿತೃಪಕ್ಷ. ಹಾಗೆಂದೇ ಶ್ರಾದ್ಧ ಕ್ರಿಯೆಗೆ ಪ್ರಾಧಾನ್ಯ ನೀಡಲಾಗಿದೆ.

ಶ್ರಾದ್ಧ ಎಂದರೇನು ?

ನಮ್ಮ ಜನ್ಮಕ್ಕೆಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ದಾರಕ್ಕೇ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ -ತಾಯಿ ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನಜಲಾದಿಗಳನ್ನು ಕೊಡುವ ಪಿತೃಕಾರ್ಯಕ್ಕೆ ” ಶ್ರಾದ್ಧ ” ವೆಂದು ಹೆಸರು.
ಪಿತೃಗಳನ್ನುದ್ದೇಶಿಸಿ ಶ್ರದ್ದೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಮಾನಸಿಕವಾಗಿ ಭಾವನೆಯಿಂದ ಮಾಡುವ ಆಚರಣೆ ಶ್ರಾದ್ಧವೆಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯಗಳನ್ನು ತನ್ನ ಪಿತೃಗಳನ್ನುದ್ದೇಶಿಸಿ ಕೊಡುವ ” ಪಿಂಡಪ್ರದಾನ ” ಕ್ರಿಯೆಗೆ ಶ್ರಾದ್ಧವೆಂದು ಹೇಳುತ್ತಾರೆ.

ಇಲ್ಲಿ ಕೆಲವರು ಪ್ರಶ್ನೆ ಕೇಳುವುದುಂಟು – ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ, ಪಿಂಡಪ್ರದಾನದಿಂದ ಅವರು ಹೇಗೆ ತೃಪ್ತರಾಗುತ್ತಾರೆ ? ನಾವು ಇಲ್ಲಿ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟದ್ದು ಪಿತೃಗಳಿಗೆ ಹೇಗೆ ತಲುಪುತ್ತದೆ ? ಉತ್ತರ.

ನಾವು ಕೊಟ್ಟ ಅನ್ನವನ್ನು ಅಂದರೆ ಅದರ ಸಾರ ಭಾಗವನ್ನು ಪಿತ್ರಗಳಿಗೆ ಸಂಬಂಧಿಸಿದ ದೇವತೆಗಳು ಮತ್ತು ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಹುಟ್ಟಿ, ಎಲ್ಲಿ ಇರುವರೋ, ಅಲ್ಲಿ ಅವರಿಗೆ ಆಹಾರರೂಪವಾಗಿ ಸೂಕ್ತರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ ಭಗವಂತ.

ಯಥಾ ಧೇನುಸಹಸ್ರೇಷು
ವತ್ಸೋ ವಿಂದತಿ ಮಾತರಃ।
ತಥಾ ಪೂರ್ವಕೃತಂ
ಕರ್ಮ ಕರ್ತಾರಮನುವಿಂದತಿ॥”.

ಸಾವಿರಾರು ಹಸುಗಳ ಹಿಂಡಿನಲ್ಲಿದ್ದರೂ ಕರು,
ತನ್ನ ತಾಯಿ ಧೇನುವನ್ನು ಹುಡುಕಿಕೊಂಡು ಅದರ ಬಳಿಗೆ ಹೋಗುವಂತೆ,

ಪೂರ್ವಜನ್ಮದ ಕರ್ಮವು ಮನುಷ್ಯನು ಎಲ್ಲಿದ್ದರೂ
ಅವನನ್ನು ಹುಡುಕಿಕೊಂಡು ಹೋಗಿ ತಗಲುತ್ತದೆ ಪಿತೃಪಕ್ಷ ಆಚರಣೆ ಏಕೆ*

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು. ಭಾದ್ರಪದ ಮಾಸದ ಕೃಷ್ಣಪಕ್ಷಕ್ಕೆ ಪಿತೃಪಕ್ಷ ಎನ್ನುತ್ತಾರೆ. ಈ ಪಕ್ಷಕ್ಕೆ ಮಹಾಲಯ ಪಕ್ಷ, ಅಪರ ಪಕ್ಷವೆಂದು ಕರೆಯುತ್ತಾರೆ. ಪಿತೃಪಕ್ಷವು ಹಿಂದೂ ಚಾಂದ್ರಮಾನ ತಿಂಗಳಾದ ಭಾದ್ರಪದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುತ್ತದೆ. (ಪಿತೃಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ಸಂಚರಿಸುತ್ತವೆ ಎಂಬ ನಂಬಿಕೆ )

ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ಆತ್ಮವು( ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ
ಅಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಆತ್ಮಗಳು ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ.

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಎಷ್ಟು ಜನ್ಮ ತಾಳಿದರೂ ಸಹ ಮುಗಿಸಲಾಗದಷ್ಟು ಪಾಪವನ್ನು ಒಂದೇ ಜನ್ಮದಲ್ಲಿ ಸಂಪಾದಿಸಿಬಿಡುತ್ತೇವೆ. ಈ ಕಠಿಣ ಸಮಸ್ಯೆಗೆ ನಮ್ಮ ಶಾಸ್ತ್ರಗಳು ಸುಲಭ ಪರಿಹಾರ ನೀಡುತ್ತವೆ. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಶ್ರಾದ್ಧ ಕರ್ಮದ ಉದ್ದೇಶವೇನು?
ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?
ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ.

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆಯು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

*ಮಹಾಲಯ ಪಕ್ಷ ಮಾಸದ ಕೆಲವು ಮುಖ್ಯ ದಿನಗಳು*

Shraddaya charitam shraadha:
ಶ್ರದ್ಧಯಾ ಚರಿತಂ ಶ್ರಾದ್ಧಂ

ಮಾತೃದೇವೋಭವ ಪಿತೃದೇವೋಭವ ಆಚಾರ್ಯದೇವೋಭವ

Mahalaya Paksha 2022 specified dates

11.09.2022 – ಮಹಾಲಯ ಪಕ್ಷಾರಂಭ
Mahalaya Paksharambha ಪ್ರತಿಪದ + ದ್ವಿತೀಯ
12.9 2022 ತೃತೀಯ
13.9.2022 ಚತುರ್ಥಿ
14.09.2022 – ಪಂಚಮಿ – ಮಹಾಭರಣಿ ಶ್ರಾದ್ಧ
MahabharaNi shraaddha
15.09.2022 – ಷಷ್ಟಿ
16.9.2022 – ಕಾಲಶ್ರಾದ್ಧ ಮಾಡುವಂತಿಲ್ಲ. ಆದರೆ ಪಕ್ಷ ಮಾಡಬಹುದು.
17.9.2022 – ಸಪ್ತಮಿ, ಕನ್ಯಾ ಸಂಕ್ರಮಣ, ಪೂರ್ವೇದ್ಯುಶ್ರಾದ್ಧ
18.09.2022 – ಮಧ್ಯಾಷ್ಟಮಿ ಶ್ರಾದ್ಧ
Madhyashtami Shraaddha
19.09.2022 – ಅವಿಧವಾ ನವಮಿ Avidhava navami, ವ್ಯತೀಪಾತ ಶ್ರಾದ್ಧ, ಅನ್ವಷ್ಟಕ ಶ್ರಾದ್ಧ
20.09.2922 – ದಶಮಿ
22.10.2022 – ಯತಿ ಮಹಾಲಯ Yati Mahalaya
23.10.2022 – ತ್ರಯೋದಶಿ ಶ್ರಾದ್ಧ
24.10.2022 – ಘಾತಚತುರ್ದಶಿ Ghata chaturdashi,
25.10.2022 – ಮಹಾಲಯ ಅಮಾವಾಸ್ಯೆ
Mahalaya Amavasye , ಸರ್ವಪಿತೃ ಅಮಾವಾಸ್ಯೆ
26.10.2022 – ಮಾತಾಮಹ ಶ್ರಾದ್ಧ matamaha Shraddha

ಗಮನಿಸಿ :. ಅವಿಧವಾನವಮಿ ದಿನ 19 9.22 – ತಂದೆ ಜೀವಂತ ಇದ್ದು ತಾಯಿ ಇಲ್ಲದವರಿಗೇ ಮೀಸಲು. ಬೇರೆಯವರಿಗಾಗಿ ಶ್ರಾದ್ಧ ಮಾಡುವಂತಿಲ್ಲ.

22.9.22 – ಯತಿ ಮಹಾಲಯ – ಯತಿಗಳಿಗೇ ಮೀಸಲಾದ ದಿನ – ಬೇರೆಯವರಿಗೇ ಪಕ್ಷ ಮಾಡುವಂತಿಲ್ಲ.

24.9.2022 – ಘಾತ ಚತುರ್ದಶಿ – ಶಸ್ತ್ರಾಸ್ತ್ರದಲ್ಲಿ ಹತರಾದವರಿಗೆ,. ಅಪಘಾತದಲ್ಲಿ ಮೃತರಾದವರಿಗೆ ಮಾತ್ರ ಮೀಸಲು. ಬೇರೆಯವರಿಗೆ ಪಕ್ಷ ಮಾಡುವಂತಿಲ್ಲ.ಕೃಪೆ
🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏

Related Posts