ಸ್ವಾಭಿಮಾನದ ಬೆಲೆ.! 💐💐💐💐💐💐💐 ಎ.ಎನ್.ರಮೇಶ್. ಗುಬ್ಬಿ

“ಇಲ್ಲಿದೆ ಜೀವನದ ಮಾನ-ಸ್ವಾಭಿಮಾನಗಳ ಮಹತ್ವ ಸಾರುವ ಆರು ಹನಿಗವಿತೆಗಳು. ಜೀವದ ಆತ್ಮಾಭಿಮಾನದ ಬೆಳಕತತ್ವ ಬೀರುವ ಭಾವಪ್ರಣತೆಗಳು. ಅವರಿವರ ಓಲೈಸುತ, ನಮ್ಮತನ ಮಾರಿಕೊಂಡು, ಬೆಲೆಯಿಲ್ಲದೆ ನೂರು ವರ್ಷ ಬದುಕುವುದಕಿಂತ, ನಮ್ಮದೇ ಜೀವ-ಜೀವನದ ಸ್ವಂತಿಕೆಯ ಮುದ್ರೆಯೊತ್ತುತ, ಆತ್ಮಾಭಿಮಾನ ಉಳಿಸಿಕೊಂಡು ನಾಲ್ಕುದಿನ ಬದುಕುವುದೇ ಶ್ರೇಷ್ಟ. ಆ ಬದುಕೇ ಉತ್ಕೃಷ್ಟ. ಏನಂತೀರಾ..?” – ಪ್ರೀತಿಯಿಂದಎ.ಎನ್.ರಮೇಶ್.ಗುಬ್ಬಿ.

1. ಸ್ವಂತಿಕೆ.!

ನಮ್ಮ ಬದುಕು
ನಮ್ಮದೇ ಆಗಿರಬೇಕೆಂದರೆ..
ನಾವು ನಾವಾಗಿರಬೇಕು.!

***************

2. ಲೇಸು-ಸಲೀಸು.!

ವೃಥಾ ದಾಕ್ಷಿಣ್ಯಕೆ ಬಸಿರಾಗುವುದಕಿಂತ
ಧಾರ್ಷ್ಟ್ಯದಿ ಬಂಜೆಯಾಗಿರುವುದು ಲೇಸು.!
ಅವಡುಗಚ್ಚಿ ನುಂಗುತ ನರಳುವುದಕಿಂತ
ಧೈರ್ಯದಿ ಕಕ್ಕಿ ನಿರಾಳರಾಗುವುದು ಸಲೀಸು.!

**********************

3. ಪ್ರಾರ್ಥನೆ.!

ಸದಾ ಬಾಗುವ ಶಿರಕ್ಕಿಂತ
ಬೀಗುವ ಕರನೀಡು ಶಿವ
ಕನಿಕರದಿ ಹರಸುವುದಕಿಂತ
ಹೆಮ್ಮೆಯಲಿ ಹಾರೈಸಲಿ ಭವ.!

*****************

4. ಶವಯಾನ.!

ಅಡವಿಟ್ಟು ಆತ್ಮಾಭಿಮಾನ
ಬದಿಗಿಟ್ಟು ಸ್ವಾಭಿಮಾನ
ಹರಾಜಿಗಿಟ್ಟು ಮಾನಾಭಿಮಾನ
ಬದುಕುವುದೆಂತಹ ಜೀವನ?
ನಿತ್ಯ ಜೀವಚ್ಚವ ಯಾನ.!

********************

5. ಕೃತ್ರಿಮತೆ.!

ಇಷ್ಟವಿಲ್ಲದಿದ್ದರೂ ಅರಳಿಸುತ ಮೊಗ
ಸುಮ್ಮನೆ ಬೀರಲಾರೆ ಬಲವಂತದ ನಗೆ.!
ಮಾತಾಡುವ ಮನಸಿಲ್ಲದಿದ್ದರೂ ಒಳಗೆ
ತೋರಲಾರೆ ಸಿಹಿ ಸವಿನುಡಿ ಹೂರಗೆ.!

********************

6. ದುರಂತ.!

ಕಂಡವರ ಕನಿಕರದ
ಕಂಬನಿಯಲ್ಲೆ ಸುಖಿಸುವವರಿಗೆ
ಎದುರಿನವರ ಅನುಕಂಪದ
ಅಲೆಯಲ್ಲೆ ತೇಲುವವರಿಗೆ
ರುಚಿಸದು ಬೆವರಿನ ಸೆಲೆ
ತಿಳಿಯದು ಸ್ವಾಭಿಮಾನದ ಬೆಲೆ.!

ಎ.ಎನ್.ರಮೇಶ್.ಗುಬ್ಬಿ.

Related Posts