ಕೃಷಿ ಭೂಮಿ ಖರೀದಿಗೆ ನಿರ್ಬಂಧ ಹೇರಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಾನೂನು ಜಾರಿಯಾದರೆ, ರೈತರಲ್ಲದವರು ಕೃಷಿ ಭೂಮಿ, ಜಮೀನು ಖರೀದಿಸುವಂತಿಲ್ಲ.
ಕೃಷಿಕರಲ್ಲದವರು ಸಾಗುವಳಿ ಜಮೀನು ಖರೀದಿಸಲು ಇದ್ದ ನಿರ್ಬಂಧವನ್ನು ಈ ಹಿಂದಿನ ಬಿಜೆಪಿ ಸರ್ಕಾರ ತೆಗೆದುಹಾಕಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 79ಎ ಮತ್ತು ಬಿ ಗೆ ತಿದ್ದುಪಡಿ ತಂದು ರೈತರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿತ್ತು. ಕೃಷಿ ಭೂಮಿಗೂ ಉತ್ತಮ ದರ ಸಿಗುತ್ತದೆ ಎಂಬುದಾಗಿ ಬಿಜೆಪಿ ಸರ್ಕಾರದ ನಾಯಕರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
ಆದರೆ, ಇದರಿಂದ ರೀಯಲ್ ಎಸ್ಟೇಟ್ ದಂಧೆಗೆ ಪ್ರಚೋದನೆ ದೊರೆತು ರೈತರು ಭೂ ರಹಿತರಾಗುತ್ತಾರೆ ಎಂದು ರೈತ ಸಂಘದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.