ತಿರುಪತಿ ದೇವಾಲಯ
ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮ ಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ
ತಿರುಮಲಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲವಾಗಲು ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಸ್ಥಳೀಯ ದೇವಾಲಯಗಳು ಮತ್ತು ಸಂಯೋಜಿತ ದೇವಾಲಯಗಳ ಮಾಹಿತಿಯನ್ನು ಭಕ್ತರಿಗೆ ಲಭ್ಯವಾಗುವಂತೆ ಮಾಡಲು ಟಿಟಿಡಿ ಯೋಚಿಸಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಎಲ್ಲಾ ವಿವರಗಳು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗಬೇಕು ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ. ಅಂದರೆ ದೇವಸ್ಥಾನದಲ್ಲಿ ನಡೆಯುವ ಪೂಜೆ, ವಿಶೇಷ ದಿನಗಳ ಬಗ್ಗೆ ಮಾಹಿತಿಯನ್ನು ಭಕ್ತರಿಗೆ ಒದಗಿಸಲು ಇದು ಅನುಕೂಲಕರವಾಗಿದೆ. ತಿರುಮಲಕ್ಕೆ ಹೋಗುವ ಭಕ್ತರಿಗೆ ಪ್ರಮುಖ ಸೂಚನೆಯನ್ನು ನೀಡಲು ಇದು ಸಹಾಯವಾಗಲಿದೆ.
ಜೊತೆಗೆ ಟಿಟಿಡಿ ಸ್ಥಳೀಯ ದೇವಾಲಯಗಳು ಮತ್ತು ತಿರುಪತಿ ಹಾಗೂ ಇತರ ಪ್ರದೇಶಗಳಲ್ಲಿನ ಸಂಯೋಜಿತ ದೇವಾಲಯಗಳಿಗೆ ವ್ಯಾಪಕ ಪ್ರಚಾರ ನೀಡುವ ಸಲುವಾಗಿ ಎಲ್ಲಾ ವಿವರಗಳೊಂದಿಗೆ ವೆಬ್‌ಸೈಟ್ ಅನ್ನು ನವೀಕರಿಸುವಂತೆ ಟಿಟಿಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮಂಗಳವಾರ ತಿರುಪತಿಯ ಟಿಟಿಡಿ ಆಡಳಿತ ಭವನದಲ್ಲಿ ಇಒ ಸ್ಥಳೀಯ ದೇವಸ್ಥಾನಗಳ ಪರಿಶೀಲನೆ ನಡೆಸಿದರು.
ಟಿಟಿಡಿಯಲ್ಲಿ 60 ಕ್ಕೂ ಹೆಚ್ಚು ಸ್ಥಳೀಯ ದೇವಾಲಯಗಳು ಮತ್ತು ಸಂಯೋಜಿತ ದೇವಾಲಯಗಳಿವೆ. ಇವುಗಳಿಗೆ ಸಂಬಂಧಿಸಿದ ಸ್ಥಳ, ಸೇವೆಗಳು, ದರ್ಶನ ಸಮಯ ಮತ್ತು ಇತರ ಸೌಲಭ್ಯಗಳ ಬಗ್ಗೆ ವೆಬ್‌ಸೈಟ್ ಮೂಲಕ ಭಕ್ತರಿಗೆ ತಿಳಿಸಲು ಟಿಟಿಡಿ ತಿಳಿಸಿದೆ.
ಈ ಹಿಂದೆ ಕರಪತ್ರಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನು ಭಕ್ತರಿಗೆ ವಿವಿಧ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದತ್ತ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ವೆಬ್ ಸೈಟ್ ಆಧುನೀಕರಣಗೊಳಿಸಲು ಸೂಚಿಸಲಾಗಿದೆ. ಎಸ್‌ವಿಬಿಸಿ ಮೂಲಕ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದ ಕಿರು ವಿಡಿಯೋ ತುಣುಕುಗಳನ್ನು ಮಾಡಿ ವಿವಿಧ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲು ತಿಳಿಸಲಾಯಿತು. ಆ ಮೂಲಕ ದೇವಸ್ಥಾನಗಳ ಬಗ್ಗೆ ಹೆಚ್ಚು ಜನರಿಗೆ ತಿಳಿಯುತ್ತದೆ ಎಂಬುದು ಉದ್ದೇಶವಾಗಿದೆ.