“ಇದು ವರ್ಷದ ಕಡೆಯ ದಿನದ ಹನಿಗಳು. ಡಿಸೆಂಬರ್ 31 ರಂದು ನಮ್ಮ ನಿಮ್ಮೆಲ್ಲರ ಆಂತರ್ಯದಿ ಮಾರ್ದನಿಸುವ ದನಿಗಳು. ವರ್ಷಾಂತ್ಯದ ದಿನ ನಮ್ಮೊಳಗೆ ಉಂಟಾಗುವ ತಲ್ಲಣ, ರಿಂಗಣ, ಸಂಘರ್ಷ, ಉತ್ಕರ್ಷ, ವೇದನೆ, ಶೋಧನೆ ಎಲ್ಲವುಗಳ ಅಭಿವ್ಯಕ್ತಿಯೇ ಈ ಹನಿಗವಿತೆಗಳು. ನನ್ನ ನಿಮ್ಮ ಎದೆಯ ಸಂವೇದನೆಗಳ ಭಾಷ್ಯರೂಪವೇ ಈ ಆರು ಭಾವಪ್ರಣತೆಗಳು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


1. ಮುವ್ವತ್ತೊಂದು..!

ಡಿಸೆಂಬರ್ ಮುವ್ವತೊಂದು ಎಂದರೆ
ಹಳೆಯ ನೆನಪುಗಳಿಗೆ ವಿದಾಯ ಬೆನ್ನುಡಿ
ಹೊಸ ಕನಸುಗಳಿಗೆ ಭರವಸೆ ಮುನ್ನುಡಿ.!

*****************

2. ಹರಣ.!

ಕ್ಯಾಲೆಂಡರ್ ಪುಟಗಳ
ತಿರುವಿ ಹಾಕುವುದರಲ್ಲೇ
ಮುಗಿದು ಹೋಯ್ತು ವರ್ಷ
ನೀಡದೆ ತೀಡದೆ ಬದುಕಿಗೆ
ಏನೊಂದೂ ನವ ಸ್ಪರ್ಷ.!

******************

3. ಭ್ರಮೆ..!

ಆಗಲಿಲ್ಲ ಈ ವರ್ಷದಾರಂಭದಂದು
ಅಂದುಕೊಂಡ ಏನೊಂದು ಕಾಯಕಲ್ಪ
ನಾಳೆಯಿಂದ ಹೊಸವರ್ಷಕೆ ಮತ್ತದೇ
ಕನಸು ಕಾಯಕಗಳ ಹೊಸ ಸಂಕಲ್ಪ.!

***************

4. ಪರಿ-ವರ್ತನೆ.!

ನಾಳೆಯಿಂದ ಬದಲಾಗುತ್ತದೆ ಕ್ಯಾಲೆಂಡರು
ದಿನಚರಿ ಪುಸ್ತಕ ದಿನಾಂಕ ವರ್ಷದ ಮೊಹರು
ಮಿಕ್ಕಿದ್ದೆಲ್ಲ ಮತ್ತದೇ ಪ್ರತಿನಿತ್ಯದ ಕಾರುಬಾರು.!

*******************

5. ಸಂಕಲ್ಪ.!

ಭರವಸೆಯಿಡುತ ಹೊಸವರ್ಷ ದರ್ಪಣದಿ
ಬಿಡೋಣ ಹಳೆವರ್ಷದ ನೋವಿಗೆ ತರ್ಪಣ
ಹೊಮ್ಮಲಿ ಹೃನ್ಮನದಿ ನವೋತ್ಸಾಹದ ರಿಂಗಣ.!

***************

6. ಪಡ್ಡೆಗಳಾಚರಣೆ.!

ಸಂಜೆಯಿಂದ ರಾತ್ರಿ ಹನ್ನೆರಡರ ತನಕ
ಮದಿರೆಯ ಗುಕ್ಕು ಗುಕ್ಕಿಗೂ ಬಿಕ್ಕುತ್ತಾ
ಹಳೆವರ್ಷಕೆ ಕೋರುವರು ವಿದಾಯ.!
ರಾತ್ರಿ ಹನ್ನೆರಡರ ನಂತರ ಬೆಳತನಕ
ಶೀಷೆ ಕುಕ್ಕುತ್ತಾ ಉನ್ಮತ್ತರಾಗಿ ಉಕ್ಕುತ್ತಾ
ಹೊಸವರ್ಷಕೆ ಮಾಡ್ವರು ಸ್ವಾಗತನೃತ್ಯ.!

ಎ.ಎನ್.ರಮೇಶ್.ಗುಬ್ಬಿ.

“ಇದು ಅಪ್ಪ-ಅಮ್ಮ ಎಂಬ ಕಂಗಳ ಕವಿತೆ. ಮನೆ-ಮಕ್ಕಳ ಎಡಬಿಡದೆ ಕಾಯ್ವ ಜೀವಂತ ದೈವಗಳ ಭಾವಗೀತೆ. ಎಲ್ಲ ಮಕ್ಕಳಿಗೂ ಅಪ್ಪ-ಅಮ್ಮ ಹೀಗೇ ವೈರುಧ್ಯ ಸ್ವರೂಪಗಳಾಗೆ ಕಾಣುತ್ತಾರೆ. ಏಕೆಂದರೆ ಆ ವಿಧಾತನ ಸೃಷ್ಟಿಯಿರುವುದೂ ಹೀಗೆ. ಜಗದ ದೃಷ್ಟಿಯಿರುವುದೂ ಹೀಗೆ. ಏನಂತೀರಾ..?”- ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


ಅಮ್ಮ ಅಪ್ಪ..!

ಅಮ್ಮನ ಅಕ್ಕರೆ ಪ್ರೇಮ
ನುಡಿ ನುಡಿಯಿಂದ ವ್ಯಕ್ತ
ಅಪ್ಪನ ಪ್ರೀತಿ ವಾತ್ಸಲ್ಯ
ನಡೆಯಿಂದಲೇ ಅಭಿವ್ಯಕ್ತ.!

ಅಮ್ಮ ಮಾತಿನ ಪ್ರತೀಕ
ಅಪ್ಪ ಮೌನದ ದ್ಯೋತಕ.!
ಅಮ್ಮ ಮಮತೆಯ ರೂಪ
ಅಪ್ಪ ಭದ್ರತೆಯ ದೀಪ.!

ಕರಗುವ ಮೆತ್ತನೆ ಮೇಣದಂತೆ
ಅಮ್ಮನ ಅಂತಃಕರಣ ಸತ್ವ
ಗಟ್ಟಿಚಿಪ್ಪಿನ ಸ್ವಾತಿಮುತ್ತಿನಂತೆ
ಅಪ್ಪನ ಸ್ವಭಾವ ವ್ಯಕ್ತಿತ್ವ.!

ಅಮ್ಮನಿಗೆ ಬಿಕ್ಕಿ ಅಳಲಿಕ್ಕೆ
ಬಿಂಕ ಬಿಗುಮಾನಗಳಿಲ್ಲ
ಅಪ್ಪನಿಗೆ ಅತ್ತು ಹಗುರಾಗಲಿಕ್ಕೆ
ಜಾಗ ಸಮಯಗಳೇ ಇಲ್ಲ.!

ತುಸು ಮೊರೆತಕು ಬೆದರುತ
ಆತಂಕ ಬಿರುಗಾಳಿಗೆ ಬೆಚ್ಚುತ
ಬಾಳನೌಕೆ ನಲುಗದಂತೆ ನಿತ್ಯ
ತಲ್ಲಣಿಸಿ ಕಾಯ್ವ ಜೀವ ಅಮ್ಮ.!

ಸೂರು ಕಳಚಿದರೂ ಹೆದರದೆ
ಚಂಡಮಾರುತಕು ದೃತಿಗೆಡದೆ
ಸಂಸಾರ ನಾವೆ ದಿಕ್ತಪ್ಪದಂತೆ
ನಡೆಸುವ ದಿಟ್ಟ ನಾವಿಕ ಅಪ್ಪ.!

ಅಮ್ಮ ಕುಟುಂಬದ ಕಣ್ಣಾದರೆ
ಅಪ್ಪ ಕಂಗಳ ಕಾಪಿಡುವ ರೆಪ್ಪೆ
ಅಮ್ಮ ಮನೆಗೆ ಹೃದಯವಾದರೆ
ಅಪ್ಪ ಮನೆಯ ಪೊರೆವ ಮೆದುಳು.!

ಕಣ್ಣೆರಡಾದರು ನೋಟವೊಂದೆ
ಅಪ್ಪ ಅಮ್ಮ ಜೀವವೆರಡಾದರೂ
ಮನೆ ಮಕ್ಕಳೆಡೆಗಿನ ಭಾವವೊಂದೆ
ಒಲವು ನಿಲುವು ಅನುಭಾವವೊಂದೆ.!

ಎ.ಎನ್.ರಮೇಶ್.ಗುಬ್ಬಿ.

“ಇಲ್ಲಿವೆ ವರ್ಷಾಂತ್ಯದ ವಿದ್ಯಾಮಾನಗಳ ಅನಾವರಣದ ಐದು ಹನಿಗವಿತೆಗಳು. ಪ್ರಸ್ತುತ ಕಾಲಮಾನದ ಸ್ಥಿತಿ-ಗತಿ ವಿಶದೀಕರಣದ ಭಾವಪ್ರಣತೆಗಳು. ಇಲ್ಲಿ ನಮ್ಮ ನಿಮ್ಮದೇ ಸುತ್ತಮುತ್ತಲ ಬದುಕು-ಭಾವಗಳ ವಿಡಂಬನೆಯಿದೆ. ವಿನೋದವಿದೆ. ವ್ಯಂಗ್ಯವಿದೆ. ವಾಸ್ತವವಿದೆ. ವಿಷಾದವೂ ಇದೆ. ಇವು ಇಯರ್ ಎಂಡ್ ಹನಿಗಳು. ಆಧುನಿಕ ಬದುಕಿನ ವಿಪರ್ಯಾಸದ ದನಿಗಳು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


1. ಸೋಂಬೇರಿ..!

ಇನ್ನೂ ಈ ವರ್ಷದಾರಂಭದಂದು
ಮಾಡಿದ ಸಂಕಲ್ಪಗಳೇ ಆಗಿಲ್ಲ ಜಾರಿ..
ಅಬ್ಬಾ ಆಗಲೇ ಹೊಸವರ್ಷ ಬಂದು
ಎದುರು ನಿಂತಿದೆ ಹಿಡಿದು ನವಡೈರಿ.!

********************

2. ಮಾಡರ್ನ್ ಸಂಸಾರ.!

ಡಿಸೆಂಬರ್ ಕಡೆ ರಾತ್ರಿಯಂದು
ಪತಿ ಪರಿತಪಿಸುತ ನುಡಿದನು..
“ಅಯ್ಯೋ ಮರತೇ ಬಿಟ್ಟೆನು
ತರಲು ಹೊಸ ಕ್ಯಾಲೆಂಡರು.”
ಸತಿ ಸಂತೈಸುತ ಉಲಿದಳು..
“ಬಿಡಿ ತಂದಿದ್ದೀರಲ್ಲ ಸಾಕು..
ಫುಲ್‍ಬಾಟಲು ವೈನು-ಬೀರು”

*********************

3. ಯಥಾಸ್ಥಿತಿ..!

ವರ್ಷ ಮುಗಿದು ಬದಲಾಗಲಿದೆ
ಗೋಡೆಯ ಕ್ಯಾಲೆಂಡರ್ ಪಟ
ಆದರೆ ಕೊಂಚವು ಬದಲಾಗದೆ
ಹಾಗೆ ಎಂದಿನಂತಿದೆ ಬಾಳಪುಟ.!

******************

4. ದರ್ಪಣ..!

ಗೋಡೆಯ ಮೇಲಿನ ಗಡಿಯಾರ
ಗೋಡೆಗೆ ನೇತಾಕಿದ ಕ್ಯಾಲೆಂಡರ
ಏರುತ್ತಿರುವ ವಯಸ್ಸಿನ ಸೂಚಕ
ಜೊತೆಗೆ ಜಾರಿ ಹೋಗುತ್ತಿರುವ
ಅಮೂಲ್ಯ ಆಯಸ್ಸಿನ ಮಾಪಕ.!

********************

5. ಮೋಜು-ಗೋಜು.!

ಕ್ಲಬ್ಬು ಪಬ್ಬು ಬಾರುಗಳೆಲ್ಲ
ಸಡಗರದಿ ಸಜ್ಜಾಗುತಿವೆ
ಹೊಸವರ್ಷದ ಸ್ವಾಗತಕೆ.!
ಸಂಸ್ಕಾರ ಸಂವೇದನೆಗಳೆಲ್ಲ
ಸಂಕಟದಿ ನಜ್ಜಾಗುತಿವೆ
ನೆನೆಯುತ ಎರಗಲಿರುವ
ಮದಿರಾರ್ಭಟ ಘಾತಕೆ.!

ಎ.ಎನ್.ರಮೇಶ್. ಗುಬ್ಬಿ.

Related Posts