” ಲೋಕಕ್ಕೆ ಲೋಕವೇ ಅವನ ನಾಮ ಪಠಿಸುತಿರುವಾಗ, ದೇಶಕ್ಕೆ ದೇಶವೇ ಅವನ ನಾಮ ಪಾಡುತಿರುವಾಗ.. ಪೀಠಿಕೆ ಏಕೆ ಬೇಕು.. ಅವನ ನಾಮ ಒಂದೇ ಸಾಕು.. ರಾಮ..ರಾಮಾ.. ಎನ್ನುವ ಎರಡಕ್ಷರವೆ ಬೆಳಕು. ಪ್ರಾಣ ಪ್ರತಿಷ್ಟಾಪನೆಯ ಶುಭಮಹೂರ್ತದ ಶುಭದಿನದ ಶುಭಾಶಯಗಳೊಂದಿಗೆ ಒಪ್ಪಿಸಿಕೊಳ್ಳಿ.. ಅವನಿಗಾಗಿ ಅರ್ಪಿಸಿದ ನನ್ನ ನಿಮ್ಮೆಲ್ಲರ ಅನಂತ ಭಕ್ತಿಭಾವಗಳ ಅಕ್ಷರ ಪ್ರಣತೆ..” –
ರಾಮ.. ರಾಮಾ..
ಸಾಕಾರ ಅಯೋಧ್ಯೆಯಲಿಂದು ರಾಮಮಂದಿರ
ಝೇಂಕರಿಸುತಿಹ ಮನೆಮನೆಯಲಿ ರಾಮಚಂದಿರ
ಮಾರ್ದನಿಸಿಹುದು ಮನಮನದಲಿ ರಾಮನಾಮ
ಪ್ರತಿ ಹೃದಯದಿ ರಘುಪತಿ ರಾಘವ ರಾಜಾರಾಮ.!
ನನಸಾಗುತಿದೆಯಿಂದು ಶತ ಶತಮಾನಗಳ ಕನಸು
ಸಡಗರದಿ ಸಂಭ್ರಮಿಸಿದೆ ಶತ ಶತಕೋಟಿ ಮನಸು
ಸಫಲವಾಯಿತಿಂದು ಸಹಸ್ರಾರು ವರ್ಷಗಳ ತಪಸ್ಸು
ಮೂಡಿದೆ ಸಕಲರ ಮೊಗದಿ ಸಾರ್ಥಕತೆಯ ತೇಜಸ್ಸು.!
ಅಹಲ್ಯೆಯಂತೆ ಕಲ್ಲಾಗಿದ್ದ ಭಾವಗಳಿಗೆ ಮರುಜೀವ
ರಾಮದರ್ಶನದಿ ಪುನೀತಳಾದ ಶಬರಿಯ ಅನುಭಾವ
ನರ ನರಗಳಲಿ ಹನುಮನಂತೆ ರಾಮಸ್ಮರಣೆ ಧ್ಯಾನ
ಸ್ವರ ಸ್ವರಗಳಲಿ ಆರಾಧನೆಯ ಶ್ರೀರಾಮಕಥಾ ಯಾನ.!
ಜಟಾಯುವಂತೆ ಅರ್ಪಿಸಿಕೊಂಡ ಆತ್ಮಗಳಿಗೆ ಮುಕ್ತಿ
ಭರತನಂತೆ ಅವಿರತ ಕಾತರಿಸಿದ ಜೀವಗಳಿಗೆ ನವಶಕ್ತಿ
ಜಾನಕಿಯಂತೆ ತಪನೆಗೈದ ಹೃನ್ಮನದಿ ಹರ್ಷಸಂಚಲನ
ದಿಗ್ದಿಗಂತಗಳಲು ಮೊಳಗಿದೆ ರಾಮಲೀಲ ಸಂಕೀರ್ತನ.!
ಅಯೋಧ್ಯೆ ಮಂದಿರದಲಿಂದು ಪ್ರಾಣ ಪ್ರತಿಷ್ಟಾಪನೆ
ಧರೆಗಿಳಿದು ಬರುತಿಹನು ಸ್ವಯಂ ಶ್ರೀರಾಮಚಂದ್ರನೆ
ನವೋತ್ಸಾಹದಿ ಉಕ್ಕಿ ಹರಿದಿಹಳು ಸರಯೂ ತಂತಾನೆ
ಸುಳಿವ ಪವನನಲೂ ಮೊರೆಯುತಿದೆ ಭಕ್ತಿ ಸಂವೇದನೆ
ರಾಷ್ಟ್ರವೇ ಒಂದಾಗಿ ಮಾಡುತಿದೆ ಮಂತ್ರೋಚ್ಚಾರಣೆ
ವಿಶ್ವವೇ ಒಟ್ಟಾಗಿ ನಡೆಸಿದೆ ಭವ್ಯ ಸಂಭ್ರಮಾಚರಣೆ
ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ರಾಮನಾಮ
ಕಡಲಡಿಯಿಂದ ಗೌರಿಶಂಕರ ಶೃಂಗದೆತ್ತರಕು ರಾಮರಾಮ.!
ಅವತರಿಸಿ ಹಾಕಿಬಿಡು ರಾಮ ರಾಮರಾಜ್ಯಕೆ ನಾಂದಿ
ಅನುಗ್ರಹಿಸಿ ಗಟ್ಟಿಮಾಡು ಪ್ರೀತಿ ಸಮಷ್ಟಿಯ ಬುನಾದಿ
ಬೆಳಗಿ ಬೆಳಕಾಗಲಿ ಪ್ರತಿ ಭಾರತೀಯನ ಬಾಳಹಾದಿ
ಸದೃಢವಾಗಲಿ ನಂಬಿಕೆ ಧರ್ಮ ಸಂಸ್ಕಾರಗಳ ತಳಹದಿ.!
ಎ.ಎನ್. ರಮೇಶ್. ಗುಬ್ಬಿ.