ಇಂದು (ದಿನಾಂಕ: ೨೫-೦೧-೨೦೨೪, ಗುರುವಾರ) ಬನದ ಹುಣ್ಣುಮೆ. ತಾಯಿ ಬನಶಂಕರಿ ದೇವಿ ನಿಮ್ಮನ್ನು ಹರಸಿ, ಆಶೀರ್ವದಿಸಲಿ.
🌷🙏🙏🙏🌷
ಬದಾಮಿಶ್ರೀದೇವಿ_ಬನಶಂಕರಿ; ನಮ್ಮ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು.
ಹಿಮಾಲಯದ ಪಾವನ ಪ್ರವಾಹಗಳ ತಟಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ – ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು.
ದೇಶದಲ್ಲಿರುವ ಶಕ್ತಿ ದೇವತೆಯ ಪ್ರಮುಖ ಪೀಠಗಳಲ್ಲಿ ಬನಶಂಕರಿ ಕ್ಷೇತ್ರವೂ ಒಂದು. ಬನಶಂಕರಿ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು.
ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ.
ವೈಶಾಖ ಮಾಸದಲ್ಲಿ ಬರುವ ‘ಆಗಿ ಹುಣ್ಣಿಮೆ’ (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾ-ಪಿತೃ ದ್ರೋಹವು, ವೇದನಿಂದ ಪಾತಕವೂ, ಪರಕನ್ಯಾಯಾಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ.
ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು:
ಮಾಲಿನಿ (ಮಲಪ್ರಭಾ ನದಿ) ತೀರ್ಥ
ಸರಸ್ವತಿ (ಹಳ್ಳ) ತೀರ್ಥ
ಹರಿದ್ರಾ (ದೊಡ್ಡ ಹೊಂಡ) ತೀರ್ಥ
ಪದ್ಮ ತೀರ್ಥ
ತೈಲ ತೀರ್ಥ
ರಂಗ ತೀರ್ಥ
ಅಗಸ್ತ್ಯ ತೀರ್ಥ
ಅಶ್ವತ್ಥಾಮ ತೀರ್ಥ
ಭಾಸ್ಕರ ತೀರ್ಥ
ಕೋಟಿ ತೀರ್ಥ
ವಿಷ್ಣು ಪುಷ್ಕರಣಿ
ನಾಗೇಶ ತೀರ್ಥ
ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು.
ಸುಂದರವಾದ ಕೋಟೆಯಂತೆ ಕಾಣಿಸುವ ಪ್ರವೇಶ ದ್ವಾರ, ಎದುರುಗಡೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ನಮಗೆ ಕಾಣಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು. ಇನ್ನು ಈ ಕಲ್ಯಾಣಿಯ ಸೊಬಗನ್ನು ನೋಡುತ್ತಾ ಮುಂದೆ ಸಾಗಿದರೆ ನಮಗೆ ಸಿಗುವುದು 7 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಅರಸನಾದ 1 ನೇ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಬನಶಂಕರಿ ದೇವಾಲಯ. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಕೆಲವು ಶಾಸನಗಳು ಸಾರುತ್ತವೆ. ದೇವಾಲಯದ ಆವರಣದಲ್ಲಿರುವ ಸ್ತಂಭಗಳ ಮೇಲೆ ಮಾಡಿದ ಕುಸುರಿ ಕೆಲಸ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಾಗಿದೆ. ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಪುನರ್ ನಿರ್ಮಾಣ ಮಾಡಿದರೆಂಬ ಉಲ್ಲೇಖವೂ ಇದೆ.
ಬನಶಂಕರಿದೇವಿ_ಮೂರ್ತಿ: ಇನ್ನು ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಪಾರ್ವತಿಯ ಸುಂದರ ಮೂರ್ತಿಯಿದೆ.
ಬನಶಂಕರಿ ದೇವಿಯ ಮೂರ್ತಿ ಐದು ಅಡಿ ಎತ್ತರವಿದೆ. ಕಪ್ಪು ಶಿಲೆಯಲ್ಲಿ ಸಿಂಹ ರೂಪಿಣಿಯಾಗಿ ತಾಯಿ ಮೂಡಿದ್ದಾಳೆ. ದೇವಿಗೆ ಅಷ್ಟ ಭುಜ,ಕೈಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ಈ ದೇವಿ ತ್ರಿನೇತ್ರೆ. ಬನಶಂಕರಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತವಾದರೆ ಎಡಗೈಯು ಶೌರ್ಯದ ಸಂಕೇತವಾಗಿದೆ. ದೇವಸ್ಥಾನದ ಶಿಖರವು ಚೌಕ ಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಗೋಪುರದಲ್ಲಿ ಯಾವ ದೇವರ ವಿಗ್ರಹಗಳೂ ಇಲ್ಲ. ದೇವಾಲಯಕ್ಕೆ ನಾಲ್ಕೂ ದಿಕ್ಕಿನಲ್ಲಿ ದ್ವಾರಗಳಿವೆ. ದೇವಾಲಯದ ಆವರಣದಲ್ಲಿ ನಾಲ್ಕು ದೀಪಸ್ತಂಭಗಳಿವೆ. ಕಾರ್ತಿಕ ಮಾಸದಲ್ಲಿ ಈ ದೀಪಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗಿಸುತ್ತಾರೆ.
ಪುರಾಣ: ಬಾದಾಮಿಯಲ್ಲಿ ಶ್ರೀ ಬನಶಂಕರಿ ದೇವಿ ನೆಲೆಸಿ ನಿಂತ ಬಗ್ಗೆ ಸ್ಕಂದ ಪುರಾಣದಲ್ಲಿ ಹಾಗೂ ದೇವಿ ಮಹಾತ್ಮೆಯಲ್ಲಿ ಉಲ್ಲೇಖವನ್ನು ನಾವು ಕಾಣಬಹುದು. ಹಿಂದೆ ಈ ಸ್ಥಳ ತಿಲಕಾರಣ್ಯ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿನ ಪ್ರದೇಶದಲ್ಲಿ ದುರ್ಗಮಾಸುರ ಎಂಬ ಅಸುರನು ಇಲ್ಲಿನ ಜನಗಳಿಗೆ ಬಹಳವಾಗಿ ತೊಂದರೆಯನ್ನು ಕೊಡುತ್ತಾ, ಋಷಿಮುನಿಗಳನ್ನು ಪೀಡಿಸುತ್ತಾ ಇದ್ದನಂತೆ. ಇವನ ಉಪಟಳವನ್ನು ತಾಳಲಾರದೆ ದೇವತೆಗಳ ಮೊರೆ ಹೋದಾಗ, ಆದಿಶಕ್ತಿ ಪಾರ್ವತಿ ತನ್ನ ತಾಮಸ ರೂಪದೊಂದಿಗೆ, ರಾಜಸ ರೂಪವಾದ ಲಕ್ಷ್ಮೀ ಮತ್ತು ಸಾತ್ವಿಕ ರೂಪವಾದ ವಾಣಿಯ ರೂಪವನ್ನು ಏಕೀಕರಿಸಿಕೊಂಡು ನೀಚ ಅಸುರನಾದ ದುರ್ಗಮಾಸುರನನ್ನು ಕೊಂದಳಂತೆ. ಹೀಗೆ ದುರ್ಗಮಾಸುರನನ್ನು ಕೊಂದು ಪಾರ್ವತಿಯು ದುರ್ಗಾ ಎಂಬ ನಾಮವನ್ನು ಹೊಂದುತ್ತಾಳೆ. ಮುಂದೆ ಇಲ್ಲಿನ ಕಾಡಿನಲ್ಲಿ ನೆಲೆಸಿದ ದೇವಿ ಶಿವನ ಪ್ರಿಯಂಕರಿ ಪಾರ್ವತಿಯನ್ನು ಜನರು 'ಬನಶಂಕರಿ' ಎಂದು ಪೂಜಿಸಲಾರಂಭಿಸಿದರು. 'ಬನ' ಎಂದರೆ 'ಕಾಡು', ಶಂಕರಿ ಎಂದರೆ 'ಶಿವನ ಅರ್ಧಾಂಗಿ' ಎಂಬುದಾಗಿದೆ. ಹೀಗೆ ಆದಿಮಾಯೆ ಪಾರ್ವತಿ, ಲಕ್ಷ್ಮೀ ಮತ್ತು ವಾಣಿಯ ಮೂರು ಗುಣಗಳಿಂದ 'ಶ್ರೀ ಬನಶಂಕರಿ' ದೇವಿಯಾಗಿ ಬಾದಾಮಿಯಲ್ಲಿ ನೆಲೆಸುತ್ತಾಳೆ.
ಬಾದಾಮಿಯ ಶ್ರೀ ಬನಶಂಕರಿ ದೇವಿಗೆ ‘ಶಾಕಾಂಬರಿ ಎಂದೂ ಕರೆಯುತ್ತಾರೆ. ಇದಕ್ಕೆ ಪುರಾಣದಲ್ಲಿ ಒಂದು ಹಿನ್ನಲೆಯನ್ನು ಕಾಣಬಹುದು. ಹಿಂದೆ ಭೀಕರ ಬರಗಾಲ ಎದುರಾಗಿ ಭೂಮಂಡಲವೆಲ್ಲ ಬರಡಾಗಿ, ಜನರೆಲ್ಲ ಹಾಹಾಕಾರದಿಂದ ಕಂಗೆಟ್ಟು ಹೋಗುತ್ತಾರೆ. ತಿನ್ನಲು ಅನ್ನಾಹಾರವಿಲ್ಲದೆ ಜಗತ್ತೆ ನಾಶವಾಗುವ ಸ್ಥಿತಿಯನ್ನು ತಲುಪುತ್ತದೆ. ಆಗ ತ್ರಿಮೂರ್ತಿಗಳು ಜಗನ್ಮಾತೆಯನ್ನು ಕೇಳಿಕೊಂಡಾಗ ಆದಿಶಕ್ತಿಯು ತನ್ನ ದೇಹದಿಂದ ಹಸಿರಿನಿಂದ ಕಂಗೊಳಿಸುವ ಹಸಿ ತರಕಾರಿಗಳನ್ನು ಸೃಜಿಸಿದಳಂತೆ. ಹಾಗೇ ಭೂಮಂಡಲವೆಲ್ಲ ಹಸಿರಾಗಿ, ಅಪಾರ ಪ್ರಮಾಣದಲ್ಲಿ ಭೂಮಿಗೆ ಸಮೃದ್ಧಿ ಉಂಟಾಯಿತು. ಹೀಗೆ ತನ್ನ ದೇಹದಿಂದ ಶಾಕಾಹಾರವನ್ನು ಸೃಜಿಸಿ ಜನರನ್ನು ಕಾಪಾಡಿದ ಜಗನ್ಮಾತೆ ಪಾರ್ವತಿದೇವಿ ಶ್ರೀ ಶಾಕಾಂಬರಿ ಎಂದು ಪ್ರಖ್ಯಾತಳಾದಳು.
ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಬಹು ದೊಡ್ಡ ಜಾತ್ರೆ. ನೂರಾರು ವರ್ಷಗಳಿಂದ ಈ ಜಾತ್ರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಪುಷ್ಯ ಮಾಸದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಬನಶಂಕರಿ ಜಾತ್ರೆಯು ಹುಣ್ಣಿಮೆಯ ಹತ್ತು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಜಾತ್ರೆಗೆ ನೆರೆ ರಾಜ್ಯಗಳಿಂದ (ಮಹಾರಾಷ್ಟ್ರ) ಸಾವಿರಾರು ಜನರು ಬರುತ್ತಾರೆ.
🙏🙏🙏🙏🙏
ಶಿವಾರ್ಪಣಮಸ್ತು