“ಇದು ಬದುಕಿನ ಹಾದಿಯ ಬೆಳಗುವ ಬೆಳಕಿನ ಕವಿತೆ. ಬೆಳಕಿನ ಕಿರಣಗಳ ರಿಂಗಣಿಸುವ ಬದುಕಿನ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಸಾರವಿದೆ. ಅರ್ಥೈಸಿದಷ್ಟೂ ಸಾರದ ವಿಸ್ತಾರವಿದೆ. ಮೊಗೆದಷ್ಟೂ ಜೀವ-ಜೀವನಗಳ ಭಾವಸಾಗರವಿದೆ. ಬದುಕೆಂದರೆ ಸಿಗದ ಕ್ಷಣಗಳ ಆವೇದನೆಯಲ್ಲ. ಆಸ್ವಾಧಿಸಿದ ಘಳಿಗೆಗಳ‌ ಆರಾಧನೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.

ಪ್ರಾಪ್ತಿ..!

ಋಣವಿದ್ದರೆ
ಕಣಜವೇ
ದೊರೆವುದು.!
ಬೇಡವೆಂದರೂ
ಬಿಡದು.!

ಋಣವಿಲ್ಲದಿರೆ
ಕಣವಲ್ಲ
ತೃಣಮಾತ್ರವೂ
ಸಿಗದು.!

ಬೇಕೇಬೇಕೆನಲು
ನಾನ್ಯಾರು..?
ಬೇಡವೆನಲು
ನೀನ್ಯಾರು..?

ಬೇಡುವುದಷ್ಟೆ
ನಮದು.!
ನೀಡುವುದು..
ಬಿಡುವುದು..
ಅವನದು.!!

ಬದುಕೆಂದರಿಷ್ಟೆ
ಋಣಕೆ ಇದ್ದಷ್ಟೆ
ಆಕ್ಷಣಕೆ ಸಿಕ್ಕಷ್ಟೆ
ಭಾಗಕ್ಕೆ ದಕ್ಕಿದಷ್ಟೆ

ಬೊಗಸೆಗೆ ಸಿಕ್ಕಷ್ಟೆ
ಭಾಗ್ಯಕ್ಕೆ ಬಂದಷ್ಟೆ
ಭಾವ ಬಿರಿದಷ್ಟೆ
ಜೀವ ಮೊರೆದಷ್ಟೆ

ಅವನು ಬರೆದಷ್ಟೆ
ಬದುಕಿಗೆ ಪ್ರಾಪ್ತಿ
ಬೆಳಕಿನಾ ವ್ಯಾಪ್ತಿ
ಆರಾಧಿಸೆ ಸಂತೃಪ್ತಿ
ಅನುಮಾನಿಸೆ ಸಮಾಪ್ತಿ.!

ನಗುತಿರಲಿ ಸಂಪ್ರೀತಿ
ಚಿರವಿರಲಿ ಸುಶಾಂತಿ.!
ಬೆಳಗಲಿ ಭಾವದೀಪ್ತಿ
ಹರಡಲಿ ಜೀವಕಾಂತಿ
ಬೆಳಕಾಗಲಿ ಜ್ಯೋತಿ.!

ಎ.ಎನ್.ರಮೇಶ್. ಗುಬ್ಬಿ.

Related Posts