https://www.facebook.com/share/v/14hCYBxBzN/?mibextid=D5vuiz
ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ; ಶಿರಾ ಸೇರಿ 16 ಹೊಸ ರೈಲ್ವೆ ನಿಲ್ದಾಣ
ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆ ಯಾವಾಗ ಮುಗಿಯುತ್ತದೋ ಎಂದು ಈ ಭಾಗದ ಜನ ಕಾಯುತ್ತಿದ್ದಾರೆ. ಹಲವು ದಶಕಗಳ ಬೇಡಿಕೆ, ಹೋರಾಟದ ಬಳಿಕ ಈ ಮಾರ್ಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಈಗಾಗಲೇ ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದಿದ್ದರೂ ಇನ್ನೂ ಕೆಲಸ ನಡೆಯುತ್ತಲೇ ಇದೆ. ವಿ. ಸೋಮಣ್ಣ ಕೇಂದ್ರ ರೈಲ್ವೆ ಸಹಾಯಕ ಖಾತೆ ಸಚಿವರಾದ ಬಳಿಕ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇನ್ನು ಕೆಲವು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ.
ಇನ್ನು ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿರುವುದು ಹಲವು ವರ್ಷಗಳ ಕಾಯುವಿಕೆ ಅಂತ್ಯವಾಗುವ ಸಾಧ್ಯತೆ ಇದೆ. 2027ರ ಜನವರಿ ವೇಳೆಗೆ ಕಾಮಗಾರಿ ಮುಗಿಸಿ ರೈಲ್ವೆ ಸಂಚಾರ ಆರಂಭಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.
ಬೆಳೆ ಕಟಾವಿನ ಬಳಿಕ ಕಾಮಗಾರಿ ಆರಂಭಿಸುವಂತೆ ಸೋಮಣ್ಣ ಸೂಚನೆ ಕೊಟ್ಟಿದ್ದಾರೆ. ಹಲವ ಕಡೆ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು, ರೈತರು ಮುಂಗಾರು ಬೆಳೆಗಳನ್ನು ಬೆಳೆದಿದ್ದಾರೆ. ರೈತರು ಬೆಳೆ ಕಟಾವು ಮಾಡಿಕೊಂಡ ಬಳಿಕ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.
ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲ್ವೆ ಮಾರ್ಗ ಯೋಜನೆಗಾಗಿ ದಾವಣಗೆರೆ ಜಿಲ್ಲೆಯಲ್ಲಿ 236 ಎಕರೆ ಭೂಸ್ವಾಧೀನ ಅಗತ್ಯವಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ಈಗಾಗಲೇ 234 ಎಕರೆ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನು 2-3 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೆಲಸ ಬಾಕಿ ಇದ್ದು, ಇದು ಪೂರ್ಣಗೊಳ್ಳುತ್ತಿದ್ದಂತೆ ಎರಡರಿಂದ ಮೂರು ಕಡೆಗಳಲ್ಲಿ ಒಟ್ಟಿಗೆ ಕೆಲಸ ಆರಂಭವಾಗಲಿದೆ.
ಶಿರಾ ತಾಲೂಕಿಗೆ ಬರಲಿದೆ ರೈಲು
ಶಿರಾ ತಾಲೂಕು ಜನತೆಯ ಬಹಳ ವರ್ಷಗಳ ಕನಸೊಂದು ಈಡೇರುವ ಸಮಯ ಬರುತ್ತಿದೆ. ಹಲವು ದಶಕಗಳು ಇಲ್ಲಿನ ಹೋರಾಟಗಾರರು ನೇರ ರೈಲು ಮಾರ್ಗಕ್ಕಾಗಿ ಹೋರಾಟ ಮಾಡಿದ್ದರು. 2011-12 ರಲ್ಲಿ ತುಮಕೂರು-ದಾವಣಗೆರೆ ನಡುವೆ 191 ಕಿಮೀ ಉದ್ದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. 913 ಕೋಟಿ ವೆಚ್ಚದ ಇದಾಗಿದ್ದು, ರಾಜ್ಯ ಸರ್ಕಾರ 50% ವೆಚ್ಚವನ್ನು ಭರಿಸುವುದಾಗಿ ಹೇಳಿತ್ತು. ಸುಮಾರು 13 ವರ್ಷ ಕಳೆದರೂ ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ.