ಮಹಿಳೆಯರಿಗೆ ಸುರಕ್ಷತೆ ದೊರಕುವಂತೆ ಮಾಡುವುದು ಸರ್ಕಾರದ ಮತ್ತು ಸಮಾಜದ ಕರ್ತವ್ಯ ಎಂಬ ಖಚಿತ ನಿಲುವನ್ನು ವ್ಯಕ್ತಪಡಿಸಿದ್ದ ಭಾರತದ ಗೌರವಾನ್ವಿತ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಜಸ್ಟೀಸ್ ಜೆ.ಎಸ್.ವರ್ಮಾ ಅವರು ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ನಿರ್ಭಯಾ ಪ್ರಕರಣ)ದ ನಂತರ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯ ನೇತೃತ್ವ ವಹಿಸಿ ಐತಿಹಾಸಿಕವಾದ ವರದಿ ನೀಡಿದವರು. 2013ರ ಜನವರಿ 23ರಂದು ಇಕನಾಮಿಕ್ ಟೈಮ್ಸ್‌ಗೆ ಸಂದರ್ಶನ ನೀಡಿದ್ದರು: “ನಮ್ಮ ದೇಶದಲ್ಲಿ ಮಹಿಳೆಯರು ಸುರಕ್ಷತೆಯಿಲ್ಲದಂತಹ ಸ್ಥಿತಿಯಲ್ಲಿರುವುದು ಕಾನೂನುಗಳ ಕೊರತೆಯಿಂದಲ್ಲ, ಬದಲಿಗೆ ಸರಿಯಾದ ಆಡಳಿತದ ಕೊರತೆಯಿಂದ” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು.
ಭಾರತದಲ್ಲಿ ದಿನದಿನವೂ ಎಗ್ಗಿಲ್ಲದಂತೆ ನಡೆಯುತ್ತಿರುವ, ಹೆಚ್ಚುತ್ತಲೇ ಹೋಗುತ್ತಿರುವ ಅತ್ಯಂತ ಭಯಂಕರವಾದ ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಯ ಪ್ರಕರಣಗಳನ್ನು ನೋಡಿದಾಗ ಈ ಮಾತುಗಳಲ್ಲಿರುವ ಸತ್ಯ ಅರಿವಾಗುತ್ತಿದೆ. ವರ್ಮಾ ಸಮಿತಿಯು ತನ್ನ ವರದಿ ನೀಡಿ ಒಂದು ದಶಕಕ್ಕಿಂತ ಹೆಚ್ಚು ಕಾಲ ಕಳೆದಿದೆ. ಅತ್ಯಂತ ಆಳವಾದ ಮಾಹಿತಿ ಸಂಗ್ರಹದೊಂದಿಗೆ ಮಾತ್ರವಲ್ಲ, ಭಾರತದ ಮಹಿಳೆಯರ ಪರಿಸ್ಥಿತಿಯ ಕುರಿತಾದ ಸಂಪೂರ್ಣ ಅರಿವು ಮತ್ತು ಸೂಕ್ಷ್ಮತೆಯೊಂದಿಗೆ ವರ್ಮಾ ಸಮಿತಿ ನೀಡಿದ್ದ ವರದಿಯು ಕಾರ್ಯರೂಪಕ್ಕೆ ತರಬಹುದಾಗಿದ್ದ ಅನೇಕ ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ, ಈ ವರದಿಯ ಬೆನ್ನಿಗೇ ಕೆಲವು ಕಾನೂನುಗಳು ತಿದ್ದುಪಡಿಯಾಗಿ ಅತ್ಯಾಚಾರಗಳ ವಿರುದ್ಧ ಕಾನೂನಿನ ಕೈ ಇನ್ನಷ್ಟು ಬಲಗೊಂಡಿತೆಂಬುದನ್ನು ಬಿಟ್ಟರೆ ಉಳಿದ ಅನೇಕ ಶಿಫಾರಸ್ಸುಗಳು ಹಾಗೆಯೇ ನೆನೆಗುದಿಗೆ ಬಿದ್ದವು. ಅದರಲ್ಲೂ ವಿಶೇಷವಾಗಿ ಘಟನೆ ನಡೆದ ನಂತರದ ವಿಷಯಗಳನ್ನು ನಿರ್ವಹಿಸುವುದು ಮಾತ್ರವಲ್ಲದೆ, ವರ್ಮಾ ಸಮಿತಿಯು ಅತ್ಯಾಚಾರಗಳು, ಅತ್ಯಾಚಾರ-ಕೊಲೆಗಳು ಮತ್ತು ಲೈಂಗಿಕ ಹಿಂಸಾಚಾರಗಳು ನಡೆಯುವುದನ್ನೇ ತಡೆಯುವುದಕ್ಕೆ ಪೂರಕವಾಗಿ ನೀಡಿದ್ದ ಸಲಹೆಗಳನ್ನಂತೂ ಪರಿಣಾಮರಹಿತವನ್ನಾಗಿಸಲಾಗಿದೆ. ಮತ್ತೀಗ ಮತ್ತೊಂದು ನೆನೆಗುದಿಗೆ ಬಿದ್ದಿದ್ದ ವರದಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ಮಲೆಯಾಳಂ ಚಿತ್ರರಂಗದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟ ದೂರುಗಳ ಹಿನ್ನೆಲೆಯಲ್ಲಿ 2017ರಲ್ಲಿ ರಚನೆಯಾಗಿದ್ದ ಹೇಮಾ ಸಮಿತಿಯ ವರದಿಯ ಜಾರಿಯ ಕುರಿತು ಕೇರಳ ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದ್ದರಿಂದ ಅದು ಮುನ್ನಲೆಗೆ ಬಂದಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ, ನಂತರದಲ್ಲಿ ಬಿಹಾರದಲ್ಲಿ ನಡೆದಿರುವ ಇಂಥದ್ದೇ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದು ಮಾತ್ರವಲ್ಲ, ಯಾವುದೇ ರಂಗದಲ್ಲೂ ಎಂತಹ ಸುರಕ್ಷತೆಯೂ ಇಲ್ಲದೆ ಪ್ರಾಣ ಮತ್ತು ಘನತೆಯನ್ನು ಪಣಕ್ಕಿಟ್ಟು ಬದುಕುವ ಅತಂತ್ರ ಸ್ಥಿತಿಗೆ ಮಹಿಳೆಯರು ತಲುಪಿರುವ ಕುರಿತು ಆತಂಕ ಮಡುಗಟ್ಟಿದೆ.
ಈ ವರದಿಗಳ ಮತ್ತು ಅವಕ್ಕೆ ಕಾರಣವಾದ ಘಟನೆಗಳ ಹಿನ್ನೆಲೆಯಲ್ಲಿ ಕಳೆದೊಂದು ದಶಕದಲ್ಲಿ ಮಹಿಳೆಯರ ಬದುಕು, ಬವಣೆ ಮತ್ತು ಚಳವಳಿ ಸಾಗಿದ ಹಾದಿಯನ್ನೊಮ್ಮೆ ತಿರುಗಿ ನೋಡಬೇಕಾಗಿದೆ.
ಜಸ್ಟೀಸ್ ವರ್ಮಾ ಸಮಿತಿ ವರದಿಯ ಮುಖ್ಯಾಂಶಗಳು
2012ರ ಡಿಸೆಂಬರ್‌ನಲ್ಲಿ ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ, ಕೊನೆಗೆ ಆಕೆಯ ಸಾವಿಗೆ ಕಾರಣವಾದ ಅತ್ಯಂತ ಬರ್ಬರವಾದ ಅತ್ಯಾಚಾರ ಪ್ರಕರಣವು ಇಡೀ ದೇಶದಾದ್ಯಂತ ಪ್ರತಿಭಟನೆಯ ಕಿಡಿ ಹತ್ತಿಸಿತ್ತು. ಇದರ ಫಲಶೃತಿಯಾಗಿ ಎರಡು ಸಮಿತಿಗಳು ರಚನೆಯಾದವು. ಜಸ್ಟೀಸ್ ಜೆ.ಎಸ್. ವರ್ಮಾ ಸಮಿತಿ ಮತ್ತು ಜಸ್ಟೀಸ್ ಉಷಾ ಮೆಹ್ರಾ ಸಮಿತಿ. ಉಷಾ ಮೆಹ್ರಾ ಸಮಿತಿಯು ನಿರ್ದಿಷ್ಟವಾಗಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತಾಗಿ ವರದಿ ನೀಡಿದೆ; ವರ್ಮಾ ಸಮಿತಿಯ ಶಿಫಾರಸ್ಸುಗಳು ಸರ್ಕಾರದ ಪ್ರತಿ ಯಂತ್ರಾಂಗವನ್ನೂ ಮತ್ತು ಸಮಾಜದ ಪ್ರತಿಯೊಂದು ಸಂಸ್ಥೆಯನ್ನೂ ಮಹಿಳೆಯರ ದೃಷ್ಟಿಯಿಂದ ಸುಧಾರಿಸಲು ಏನು ಮಾಡಬೇಕೆಂಬ ಶಿಫಾರಸ್ಸುಗಳನ್ನು ಮಾಡಿದೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಸ್ಥೂಲವಾಗಿ ಗಮನಿಸಿದಾಗ, ಇಂತಹವು ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ಜಾರಿಯಾಗದೆ ಉಳಿದುಹೋಗುತ್ತಿರುವುದು ಇಂದಿಗೂ ಅತ್ಯಾಚಾರಗಳ ಸಂಖ್ಯೆ ಮಾತ್ರವಲ್ಲದೆ ಅವುಗಳ ಕ್ರೂರತೆ ಹೆಚ್ಚಾಗುವುದಕ್ಕೆ ಹೇಗೆ ಕಾರಣವಾಗುತ್ತಿದೆ ಎಂಬುದು ಮನವರಿಕೆಯಾಗುತ್ತದೆ.
ಕಾನೂನಿನ ಬದಲಾವಣೆಗಳು: ಬಹಳ ಮುಖ್ಯವಾದ ಅನೇಕ ಕಾನೂನಾತ್ಮಕ ಬದಲಾವಣೆಗಳನ್ನು ವರ್ಮಾ ಸಮಿತಿ ಸೂಚಿಸಿತು.
ಈ ಹಿಂದಿನ ಅತ್ಯಾಚಾರಕ್ಕೆ ಸಂಬಂಧಪಟ್ಟ ಕಾನೂನು ಅತ್ಯಾಚಾರವನ್ನು ಸಾಬೀತು ಮಾಡಲು ಬಲವಂತದ ಸಂಭೋಗವನ್ನು ಮಾತ್ರವೇ ಮಾನದಂಡವಾಗಿ ಇಟ್ಟುಕೊಂಡಿತ್ತು. ಸಮಿತಿಯು ಅಪಾಯಕಾರಿ ವಸ್ತುಗಳನ್ನು ತುರುಕುವುದು ಅಥವಾ ಬಲವಂತವಾಗಿ ಯಾವುದೇ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಕೂಡಾ ಅಪರಾಧವೇ ಎಂದು ಹೇಳಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವು ಕೇವಲ ಕಾಮೋದ್ರೇಕದ ಅಪರಾಧಗಳಲ್ಲ, ಬದಲಿಗೆ ದುರ್ಬಲರ ಮೇಲೆ ಪ್ರಬಲರು ಚಲಾಯಿಸುವ ಅಧಿಕಾರದ ಅಭಿವ್ಯಕ್ತಿ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಬಲವಂತದ ಸಂಭೋಗವಿಲ್ಲದಿದ್ದ ಎಲ್ಲ ಬಗೆಯ ಕೃತ್ಯಗಳನ್ನೂ ಈವರೆಗೆ ಸೆಕ್ಷನ್ 354ರ ಅಡಿಯಲ್ಲಿ ವರ್ಗೀಕರಿಸಿ ಹೆಚ್ಚೆಂದರೆ 2 ವರ್ಷದ ಶಿಕ್ಷೆ ನೀಡಲಾಗುತ್ತಿತ್ತು. ಅದನ್ನು ಬದಲಿಸಿ ಸಮಿತಿಯು ’ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳುವ ಉದ್ದೇಶವನ್ನು ಸಾಬೀತುಮಾಡಬೇಕು’ ಎಂಬ ಮಾನದಂಡವನ್ನು ಲೈಂಗಿಕ ಹಿಂಸೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಅಳವಡಿಸುವುದು ನಿಲ್ಲಬೇಕು ಎಂದು ಹೇಳಿತು, ಬಲವಂತದ ಎಲ್ಲ ಬಗೆಯ ಲೈಂಗಿಕ ಸ್ವರೂಪದ ಕೃತ್ಯಗಳನ್ನೂ ’ಲೈಂಗಿಕ ಆಕ್ರಮಣ’ (ಸೆಕ್ಷುಯಲ್ ಅಸಾಲ್ಟ್) ಎಂದು ಪರಿಗಣಿಸಬೇಕು ಮತ್ತು ಅದಕ್ಕೆ ಶಿಕ್ಷೆ 5 ವರ್ಷ ಇರಬೇಕೆಂದು ಶಿಫಾರಸ್ಸು ಮಾಡಿತು.
ಮಕ್ಕಳ ಮೇಲಿನ ಲೈಂಗಿಕ ಹಿಂಸೆಯ ಕುರಿತಾಗಿ ಸಮಿತಿ ನೀಡಿದ ಬಲವಾದ ಶಿಫಾರಸ್ಸುಗಳು ’ಪೋಕ್ಸೋ’ದಂತಹ ಗಟ್ಟಿಯಾದ ಕಾನೂನು ರಚನೆಯಾಗಲು ಕಾರಣವಾದವು.
ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಹಿಂಸೆಯನ್ನು ತಡೆಯಲು ಆಂತರಿಕ ದೂರು ಸಮಿತಿಯಂತಹವನ್ನೂ ಜೊತೆಗೆ ಅಸಂಘಟಿತ ಕಾರ್ಮಿಕರ ಮೇಲಿನ ದೌರ್ಜನ್ಯಗಳನ್ನೂ ಒಳಗೊಳ್ಳುವಂತಹ ಸಮಿತಿಗಳನ್ನೂ ರಚಿಸಬೇಕೆಂದು ವರ್ಮಾ ಸಮಿತಿಯು ಸರ್ಕಾರಕ್ಕೆ ಆದೇಶಿಸಿತು.
ಮಿಲಿಟರಿಗೆ ಅಸೀಮ ಅಧಿಕಾರ ನೀಡುವ ಮೂಲಕ ಮಹಿಳೆಯರ ಮೇಲೆ ಕೊನೆಯಿಲ್ಲದ ಹಿಂಸಾಚಾರಕ್ಕೆ ಅವಕಾಶ ನೀಡಿರುವ ’ಸಶಸ್ತ್ರ ಬಲಗಳ ವಿಶೇಷಾಧಿಕಾರ ಕಾಯ್ದೆ’ಯನ್ನು ರದ್ದುಪಡಿಸಬೇಕೆಂದು ದಿಟ್ಟತನದ ಸಲಹೆಯನ್ನು ಸಮಿತಿ ಸರ್ಕಾರದ ಮುಂದಿಟ್ಟಿತ್ತು.2. ಅತ್ಯಾಚಾರಗಳನ್ನು ತಡೆಗಟ್ಟುವುದು ಹೇಗೆಂಬ ಬಗ್ಗೆ ಸಮಿತಿ ಬಹಳವೇ ತಲೆಕೆಡಿಸಿಕೊಂಡಿತ್ತು. ಕೇವಲ ಕಾನೂನಿಗೆ ಸಂಬಂಧಿಸಿದಂತಹ ಸುಧಾರಣೆಗಳನ್ನು ಮಾತ್ರವಲ್ಲದೆ, ಆಡಳಿತದಲ್ಲಿ ಮತ್ತು ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ತರಲಿಕ್ಕಾಗಿ ಪ್ರಮುಖ ಸುಧಾರಣೆಗಳನ್ನು ಶಿಫಾರಸ್ಸು ಮಾಡಿತ್ತು.
ಯುವ ತಲೆಮಾರಿನ ಶಿಕ್ಷಣದಲ್ಲಿ ಬರಲೇಬೇಕಾದ ಸುಧಾರಣೆಗಳಲ್ಲಿ, ಕಲಿಕೆಯಲ್ಲಿ ಲಿಂಗಸೂಕ್ಷ್ಮತೆಯ ಅಂಶಗಳು ನಿರ್ಣಾಯಕವಾದ ರೀತಿಯಲ್ಲಿ ಸೇರ್ಪಡೆಯಾಗುವುದು ಮುಖ್ಯವಾದುದು; ಅದಕ್ಕಾಗಿ ಹಿರಿಯ ಪ್ರಾಥಮಿಕ ಹಂತದಿಂದಲೇ ಅಗತ್ಯ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಶಿಕ್ಷೆಯಿಂದ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲಾಗದು, ಆರೋಗ್ಯಕರ ಸಮಾಜಕ್ಕಾಗಿ ಸಮಾನತೆಯ ಮನಸ್ಥಿತಿಯಲ್ಲಿ ಯುವತಲೆಮಾರಿನಲ್ಲಿ ಮೂಡಿಸುವುದು ಅಗತ್ಯ ಎಂಬುದು ವರ್ಮಾ ಸಮಿತಿಯ ಪ್ರಮುಖ ಶಿಫಾರಸ್ಸ್ಸುಗಳಲ್ಲೊಂದು.
ಅದೇರೀತಿ ರಾಜಕೀಯ ವ್ಯವಸ್ಥೆಯಲ್ಲೂ- ಚುನಾವಣಾ ವ್ಯವಸ್ಥೆಯನ್ನೂ ಒಳಗೊಂಡಂತೆ- ಕೆಲವು ಸುಧಾರಣೆಗಳನ್ನು ಸಮಿತಿ ಸೂಚಿಸಿತ್ತು.
ಬಹುಮುಖ್ಯವಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಈ ವಿಚಾರದಲ್ಲಿ ಬರಬೇಕೆಂಬ ಅಭಿಪ್ರಾಯ ಹೊಂದಿದ್ದ ವರ್ಮಾ ಸಮಿತಿ, ದೂರು ದಾಖಲಿಸಲು ಬರುವ ಮಹಿಳೆಯರ ರಕ್ಷಣೆಯಿಂದ ಹಿಡಿದು ತನಿಖೆ ಮುಕ್ತಾಯದವರೆಗೆ ವಿವರವಾದ ಹಲವು ಹಂತಗಳ ಶಿಫಾರಸ್ಸುಗಳನ್ನು ನೀಡಿತು. ರಾಜ್ಯ ಸರ್ಕಾರಗಳು ರಾಜ್ಯ ಪೊಲೀಸರ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ರಾಜ್ಯ ಭದ್ರತಾ ಆಯೋಗಗಳ ಸ್ಥಾಪನೆ; ಈ ಆಯೋಗವು ವಿಶಾಲವಾದ ನೀತಿ ಮಾರ್ಗಸೂಚಿಗಳನ್ನು ರೂಪಿಸುತ್ತದೆ ಮತ್ತು ಇದರಂತೆ ಪೊಲೀಸರು ಕಾನೂನಿನಪ್ರಕಾರ ಕಾರ್ಯನಿರ್ವಹಿಸಬೇಕು ಎಂಬ ಆಶಯ ವರ್ಮಾ ಸಮಿತಿಯದಾಗಿತ್ತು.
ಭಾರತದ ಪೊಲೀಸರಲ್ಲಿ ಅತ್ಯಾಚಾರಗಳ ಬಗ್ಗೆ ಸೂಕ್ಷ್ಮತೆ ಮೂಡದಿದ್ದರೆ ಅವುಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವೆಂಬ ಸಮಿತಿಯ ಅಭಿಪ್ರಾಯ ಅತ್ಯಂತ ಸರಿಯಾದುದಾಗಿತ್ತೆಂದು ಈಗಿನ ಸನ್ನಿವೇಶ ಸಾರಿ ಹೇಳುತ್ತಿದೆ.
ವರ್ಮಾ ಸಮಿತಿಯ ಶಿಫಾರಸ್ಸುಗಳ ಕಾರಣಕ್ಕೆ ಮತ್ತು ಆ ಸಂದರ್ಭದಲ್ಲಿ ಭುಗಿಲೆದ್ದ ಜನರ ಹೋರಾಟಗಳ ಕಾರಣಕ್ಕೆ ಐಪಿಸಿಗೆ ಅನೇಕ ಬದಲಾವಣೆಗಳು ಬಂದವು.
ಐಪಿಸಿ ವ್ಯಾಪ್ತಿಯ ಸೆಕ್ಷನ್ 375ಅನ್ನು ಈಗ ವಿಸ್ತರಿಸಲಾಗಿದೆ, ಇದು ಮಹಿಳೆಯರ ಘನತೆಯನ್ನು ಉಲ್ಲಂಘಿಸುವ ಎಲ್ಲಾ ರೀತಿಯ ಅತ್ಯಾಚಾರವನ್ನೂ ಶಿಕ್ಷಾರ್ಹಗೊಳಿಸುವುದನ್ನು ಒಳಗೊಂಡಿದೆ.
ಸಾಮೂಹಿಕ ಅತ್ಯಾಚಾರದ ಅಪರಾಧಿಗೆ 20 ವರ್ಷಗಳವರೆಗೆ ಶಿಕ್ಷೆಯನ್ನು ನೀಡುತ್ತದೆ, ಅದನ್ನು ಜೀವಿತಾವಧಿಯವರೆಗೆ ವಿಸ್ತರಿಸಬಹುದು.
ಸೆಕ್ಷನ್ 376ಎ, 20 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಯನ್ನು ಅಥವಾ ಅತ್ಯಾಚಾರವು ಮಹಿಳೆಯರ ಸಾವಿಗೆ ಕಾರಣವಾದರೆ ಅಥವಾ ಮಹಿಳೆಯರನ್ನು ಜೀವಚ್ಛವದ ಸ್ಥಿತಿಯಲ್ಲಿ ಬಿಟ್ಟರೆ ಜೀವಾವಧಿ ಅಥವಾ ಮರಣದವರೆಗೆ ಜೈಲು ಶಿಕ್ಷೆಯನ್ನು ಸಕ್ರಿಯಗೊಳಿಸುತ್ತದೆ.
ಅಂತಹ ಮಾಹಿತಿಯನ್ನು ದಾಖಲಿಸಲು ವಿಫಲರಾದ ಸಾರ್ವಜನಿಕ ಸೇವಕರನ್ನು ಶಿಕ್ಷಿಸಲು ಐಪಿಸಿಯಲ್ಲಿ ಸೆಕ್ಷನ್ 166ಎಅನ್ನು ಪರಿಚಯಿಸಲಾಗಿದೆ. ಇದಲ್ಲದೆ, ಐಪಿಸಿಯ ಸೆಕ್ಷನ್ 166ಬಿ ಅತ್ಯಾಚಾರ ಸಂತ್ರಸ್ತರಿಗೆ ಚಿಕಿತ್ಸೆ ನೀಡುವುದನ್ನು ಆಸ್ಪತ್ರೆಗಳಿಗೆ ಕಡ್ಡಾಯಗೊಳಿಸಿದೆ.
ಕ್ರಿಮಿನಲ್ ತಿದ್ದುಪಡಿಯು ವಯೋರಿಸಂ, ಮಹಿಳೆಯರನ್ನು ವಿವಸ್ತ್ರಗೊಳಿಸುವುದು, ಹಿಂಬಾಲಿಸುವುದು ಮತ್ತು ಆಸಿಡ್ ಎಸೆಯುವುದನ್ನು ವಿವಿಧ ವಿಭಾಗಗಳ ಅಡಿಯಲ್ಲಿ ಶಿಕ್ಷಾರ್ಹಗೊಳಿಸಿತು.
ಬಹಳ ಮುಖ್ಯವಾಗಿ ಕುಖ್ಯಾತ ’ಎರಡು ಬೆರಳ ಪರೀಕ್ಷೆ’ಯನ್ನು ನಿಲ್ಲಿಸಲಾಯಿತು.
ಕಾನೂನಿನಲ್ಲಿ ಬಂದ ಈ ಕೆಲವು ಬದಲಾವಣೆಗಳನ್ನು ಹೊರತುಪಡಿಸಿದರೆ, ವರ್ಮಾ ಸಮಿತಿ ನೀಡಿದ್ದ ಹಲವು ಪ್ರಮುಖ ಶಿಫಾರಸ್ಸುಗಳು ಜಾರಿಯಾಗಲಿಲ್ಲ; ನೊಂದವರಿಗೆ ಅನುಕೂಲವಾಗಲೆಂಬ ಉದ್ದೇಶ ಹೊಂದಿದ್ದ ಸರಳವಾದ ’ಏಕ ಗವಾಕ್ಷಿ ವ್ಯವಸ್ಥೆ’ಯಂತಹವನ್ನೂ ರಾಜ್ಯಗಳು ಸಮರ್ಪಕವಾಗಿ ಜಾರಿಗೆ ತರಲಿಲ್ಲ.
ವಿಶೇಷವಾಗಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗದಂತೆ ತಡೆಯಲು ಸಮಾಜದಲ್ಲಿ ಮತ್ತು ಆಡಳಿತದಲ್ಲಿ ಬರಬೇಕೆಂದು ಸಮಿತಿ ಬಯಸಿದ್ದ ಸುಧಾರಣೆಗಳು ಆಗಲಿಲ್ಲ ಮಾತ್ರವಲ್ಲ, 2014ರ ನಂತರ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರದ ಸಂಪ್ರದಾಯವಾದಿ ಪ್ರತಿಗಾಮಿ ನಿಲುವುಗಳ ಕಾರಣಕ್ಕೆ ಒಟ್ಟಾರೆ ಸಾಮಾಜಿಕ ಮನೋಭಾವದಲ್ಲಿ ಮಹಿಳಾ ವಿರೋಧಿತನವನ್ನೇ ಪ್ರೇರೇಪಿಸುವಂತಹ ಬೆಳವಣಿಗೆಗಳು ವ್ಯವಸ್ಥಿತವಾಗಿ ಪ್ರಭುತ್ವದ ಬೆಂಬಲ ಅಥವಾ ಮುಂದಾಳತ್ವದೊಂದಿಗೆ ನಡೆಯುತ್ತಿವೆ!
ಕರ್ನಾಟಕದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಪರಿಣತ ಸಮಿತಿ (ಉಗ್ರಪ್ಪ ಸಮಿತಿ) ಮುಂದಿಟ್ಟ ಶಿಫಾರಸ್ಸ್ಸುಗಳು:
2015ರಲ್ಲಿ ಕರ್ನಾಟಕದಲ್ಲಿ ಹಲವು ಶಾಲಾ ಮಕ್ಕಳ ಮೇಲೆ ಮತ್ತು ವಿವಿಧೆಡೆಗಳಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳು ಮತ್ತು ಲೈಂಗಿಕ ಹಿಂಸಾಚಾರಗಳ ಸರಣಿ ಪ್ರಕರಣಗಳ ವಿರುದ್ಧ ನಡೆದ ಭಾರೀ ಪ್ರತಿಭಟನೆಗಳ ನಂತರ ಕರ್ನಾಟಕ ಸರ್ಕಾರವು ಸಚಿವರಾದ ಉಗ್ರಪ್ಪ ಅವರ ನೇತೃತ್ವದಲ್ಲಿ ಪರಿಣತ ಸಮಿತಿಯನ್ನು ರಚಿಸಿತು. ಸಮಿತಿಯು 2017ರ ಸೆಪ್ಟೆಂಬರ್‌ನಲ್ಲಿ 135 ಶಿಫಾರಸ್ಸ್ಸುಗಳನ್ನುಳ್ಳ 5000 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಪ್ರಮುಖ ಶಿಫಾರಸ್ಸ್ಸುಗಳು ಹೀಗಿದ್ದವು:
ಪ್ರತಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯ. ಇದು ಮಹಿಳಾ ಪ್ರಾಸಿಕ್ಯೂಟರ್ ಮತ್ತು ನ್ಯಾಯಾಧೀಶರನ್ನು ಹೊಂದಿರಬೇಕು. ಪ್ರತಿ ತಾಲೂಕಿನಲ್ಲಿ ವಿಶೇಷ ಪೂರ್ಣ ಮಹಿಳಾ ಪೊಲೀಸ್ ಠಾಣೆಗೆ ಶಿಫಾರಸ್ಸು.
ನೊಂದ ಮಹಿಳೆಯರಿಗಾಗಿ ಎಲ್ಲ ಸೌಲಭ್ಯಗಳನ್ನೂ ಒಂದೆಡೆ ಒದಗಿಸಬಹುದಾದ ಏಕಗವಾಕ್ಷಿ ಕೇಂದ್ರದಂತಹ ವ್ಯವಸ್ಥೆ.
ಮಹಿಳಾ ಆಯೋಗವನ್ನು ಇನ್ನಷ್ಟು ಬಲಪಡಿಸಬೇಕು.
ಸಂತ್ರಸ್ತರಿಗೆ ಪ್ರಕರಣಗಳು ದಾಖಲಾದಾಗ ಶೇ.25ರಷ್ಟು, ಆರೋಪಪಟ್ಟಿ ಸಲ್ಲಿಸಿದಾಗ ಶೇ.25ರಷ್ಟು ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಉಳಿದ ಶೇ.50ರಷ್ಟು ಪರಿಹಾರ ನೀಡಬೇಕು.
ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ.
ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಲು ಕನಿಷ್ಟ 6 ತಿಂಗಳಿಂದ ಒಂದು ವರ್ಷದ ಅವಧಿಯ ಮಿತಿ, ಫೋಕ್ಸೋ ಪ್ರಕರಣಗಳನ್ನು ಆ ಕಾನೂನಿನಂತೆಯೇ ಒಂದು ವರ್ಷದೊಳಗೆ ವಿಲೇವಾರಿ ಮಾಡಬೇಕು.
ಹೆಣ್ಣುಮಕ್ಕಳನ್ನು ಚುಡಾಯಿಸುವ ಮತ್ತು ಹಿಂಬಾಲಿಸುವ ಪ್ರಕರಣಗಳ ಮೇಲೆ ನಿಗಾ ಇಡಲು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ. ಪೊಲೀಸ್ ಠಾಣೆಗಳ ಒಳಗೆ ಸಿಸಿಟಿವಿ ಕ್ಯಾಮೆರಾ.
ಗ್ರಾ.ಪಂ.ನಲ್ಲಿ ಪ್ರತಿವರ್ಷ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸಮೀಕ್ಷೆ ನಡೆಸಬೇಕು. ಜಾಗೃತಿ ಮೂಡಿಸಬೇಕು.
ಶಾಲಾಕಾಲೇಜುಗಳ ಸಮೀಪ ಹಗಲಿನಲ್ಲಿ ಮತ್ತು ಔದ್ಯೋಗಿಕ ಪ್ರದೇಶಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಗಸ್ತನ್ನು ಬಿಗಿಗೊಳಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಗುಂಪುಗಳು ಅಂಥಲ್ಲಿ ಕಂಡರೆ ನಿರ್ಲಕ್ಷ್ಯ ತೋರದೆ ಕ್ರಮ ಕೈಗೊಳ್ಳಬೇಕು.
ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಪ್ರತಿ ಶಾಲಾಕಾಲೇಜುಗಳಲ್ಲಿ ನಿಯಮಿತ ಸಭೆ ನಡೆಸಬೇಕು.
ಸಾರ್ವಜನಿಕ ಜಾಗೃತಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಿನೆಮಾ ಮಂದಿರಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಎತ್ತಿಹಿಡಿಯುವ ಸಂದೇಶಗಳನ್ನು ನಿರಂತರವಾಗಿ ತೋರಿಸಬೇಕು.
ಇವೇ ಮುಂತಾದ ಶಿಫಾರಸ್ಸುಗಳನ್ನು ಉಗ್ರಪ್ಪ ಸಮಿತಿ ನೀಡಿತ್ತು. ಆದರೆ, ಇಷ್ಟು ಸಮಯದ ನಂತರವೂ ಈ ಶಿಫಾರಸ್ಸುಗಳು ಕಾಗದದ ಮೇಲೆಯೇ ಉಳಿದಿವೆ ಮತ್ತು ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ.
ಮಲಯಾಳಂ ಸಿನೆಮಾ ರಂಗದ ಲೈಂಗಿಕ ಹಿಂಸೆಯ ಪ್ರಕರಣಗಳ ತನಿಖೆಗೆ ನೇಮಿಸಲ್ಪಟ್ಟ ಜಸ್ಟೀಸ್ ಹೇಮಾ ಸಮಿತಿಯ ವರದಿ:
2017ರ ಫೆಬ್ರವರಿಯಲ್ಲಿ ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕ ಆಕ್ರಮಣ ನಡೆಸಿದ ಪ್ರಕರಣ ವರದಿಯಾಗಿ ಪ್ರಗತಿಪರ ರಾಜ್ಯ ಎನಿಸಿಕೊಂಡಿರುವ ಕೇರಳ ರಾಜ್ಯವನ್ನಷ್ಟೇ ಅಲ್ಲ, ದೇಶದ ಪ್ರಜ್ಞಾವಂತರನ್ನೆಲ್ಲಾ ಬೆಚ್ಚಿಬೀಳಿಸಿತ್ತು. ’ವಿಮೆನ್ ಇನ್ ಸಿನೆಮಾ ಕಲೆಕ್ಟಿವ್’ ಈ ಪ್ರಕರಣವನ್ನು ವಿಶೇಷ ತನಿಖೆಗೆ ಒಳಪಡಿಸಬೇಕೆಂದು ಪಿಟಿಷನ್ ದಾಖಲಿಸಿತ್ತು.
ಇದರ ಬೆನ್ನಲ್ಲೇ ರಚನೆಯಾದ ಜಸ್ಟೀಸ್ ಹೇಮಾ ಸಮಿತಿಯು ಅದೇ ವರ್ಷದಲ್ಲೇ ತನ್ನ ವರದಿಯನ್ನು ಸಲ್ಲಿಸಿದ್ದರೂ ಅದರ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸುವ ಪ್ರಯತ್ನವನ್ನು ಸರ್ಕಾರಗಳು ಮಾಡಿರಲಿಲ್ಲ.
ಇತ್ತೀಚೆಗೆ ಪ್ರಮುಖ ನಟ ನಿವಿನ್ ಪೌಲಿ ಮತ್ತು ಇನ್ನಿತರರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ತಾಂತ್ರಿಕವಾಗಿ ಇದರಲ್ಲಿ ದೂರುದಾರ ಮಹಿಳೆ ಮನರಂಜನಾ ಉದ್ದಿಮೆಗೆ ಸೇರಿದವರಲ್ಲ ಮತ್ತು ಅವರ ಮೇಲೆ ದೌರ್ಜನ್ಯ ನಡೆದಿರುವುದು ಯಾವುದೇ ಚಿತ್ರೀಕರಣ ಅಥವಾ ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳ ಸಂದರ್ಭದಲಲ್ಲ. ಆದರೆ, ದೌರ್ಜನ್ಯ ನಡೆಸಿದ ವ್ಯಕ್ತಿಯೆಂದು ಆಕೆ ದೂರು ನೀಡಿರುವುದು ಮಲೆಯಾಳಂನ ಪ್ರಸಿದ್ಧ ನಟನ ಮೇಲೆ, ಅಷ್ಟು ಮಾತ್ರವಲ್ಲದೆ ಈ ವಿಚಾರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳೆಯರ ಪ್ರತಿಭಟನೆಗಳು ಆರಂಭವಾದ ನಂತರ ಸಿನೆಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ತನಿಖೆಗಾಗಿ ವಿಶೇಷ ಸಮಿತಿ ರಚನೆಯಾದ ಕೂಡಲೇ, ಇದುವರೆಗೆ ಬೆಳಕಿಗೆ ಬರದಿದ್ದ 18 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೀಗೆ ಲೈಂಗಿಕ ದೌರ್ಜನ್ಯಗಳ ಹುತ್ತವೇ ಬಣ್ಣದ ತೆರೆಯ ಹಿಂದೆ ಅಡಗಿದೆಯೆಂಬುದು ಮರೆಮಾಚಲಾಗದಂತೆ ಹೊರಬಿದ್ದ ನಂತರ ಕೇರಳ ಸರ್ಕಾರ 5 ವರ್ಷಗಳ ಹಿಂದಿನ ಹೇಮಾ ಸಮಿತಿ ವರದಿಯನ್ನು ಈ ವರ್ಷದ ಆಗಸ್ಟ್ 19ರಂದು ಪ್ರಕಟಿಸಿದೆ. ಹೇಮಾ ಸಮಿತಿಯು ಬಹಳ ಗಂಭೀರವಾದ ಘಟನೆಗಳನ್ನು ಸವಿವರವಾಗಿ ವರದಿ ಮಾಡಿದೆ, ನೊಂದವರ ಹೇಳಿಕೆಗಳನ್ನು ದಾಖಲಿಸಿದೆ ಮಾತ್ರವಲ್ಲ, ಈ ವಿಷಯಗಳ ಬಗ್ಗೆ “ಬಾಯಿ ಬಿಚ್ಚಿದವರನ್ನು ಸಿನೆಮಾ ರಂಗದಿಂದ ಬಹಿಷ್ಕರಿಸುವ” ಅತ್ಯಂತ ಅಮಾನವೀಯವಾದ ಪರಿಪಾಠವು ಮಲಯಾಳಂ ಸಿನೆಮಾ ಉದ್ದಿಮೆಯಲ್ಲಿ ನಿರಂತರವಾಗಿ ನಡೆದು ಬಂದಿರುವುದನ್ನು ಗುರುತಿಸಿದೆ. ಹೀಗಾಗಿ ವರದಿಯಲ್ಲಿ “ಕೇರಳದ ಸಿನೆಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಒಂದು ಅತಿದೊಡ್ಡ ಪಿಡುಗಾಗಿ ಲೈಂಗಿಕ ದೌರ್ಜನ್ಯಗಳು ಬೆಟ್ಟದಂತೆ ನಿಂತಿವೆ” ಎಂದೂ ಹೇಳಿದೆ.
ವರದಿಯ ಕೆಲವು ಮುಖ್ಯ ಶಿಫಾರಸ್ಸುಗಳು ಹೀಗಿದ್ದವು
ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಮಹಿಳೆಯರ ಕುಂದುಕೊರತೆಗಳನ್ನು ಪರಿಹರಿಸಲು ಸರ್ಕಾರವು ಸ್ವತಂತ್ರ ಸಂಸ್ಥೆಯನ್ನು ರಚಿಸಬೇಕು. ಈಗಿರುವ ಆಂತರಿಕ ದೂರುಗಳ ಸಮಿತಿಗಳನ್ನು ಪ್ರಸ್ತುತ ಅಧಿಕಾರ ರಚನೆಗಳು ದುರ್ಬಲಗೊಳಿಸಿರುವುದರಿಂದ ಈ ಸಮಿತಿಗಳ ಮುಂದೆ ಬಂದ ದೂರುಗಳನ್ನು ತಪ್ಪಾಗಿ ನಿರ್ವಹಿಸಲಾಗುತ್ತಿದೆ ಮತ್ತು ನೊಂದವರಿಗೇ ಶಿಕ್ಷೆಯಾಗುತ್ತಿದೆ
’ಪಾರ್ಸ’ ಕಾಯಿದೆ, 2013 (ಕೆಲಸದ ಸ್ಥಳದಲ್ಲಿ ಲೈಂಗಿಕ ಹಿಂಸಾಚಾರ ತಡೆ ಕಾಯ್ದೆ)ರಂತಹ ಕಾನೂನುಗಳನ್ನು ಕೇವಲ ಆಡಳಿತಾತ್ಮಕ ಅಗತ್ಯವೆಂದು ಪರಿಗಣಿಸಿ ಕಾಟಾಚಾರಕ್ಕೆ ಜಾರಿಮಾಡುವುದರಿಂದಾಗಿ, ನಿರ್ಣಾಯಕವಾಗಿ ದೌರ್ಜನ್ಯಗಳನ್ನು ತಡೆಗಟ್ಟುವ ಮತ್ತು ಪರಿಹಾರ ಪಡೆಯುವ ಕಾರ್ಯವಿಧಾನಗಳು ನಿಷ್ಪರಿಣಾಮಕಾರಿಯಾಗಿರುತ್ತವೆ ಅಥವಾ ಕಾಣೆಯಾಗಿವೆ. ಕಾನೂನು ಅನುಸರಣೆಗೆ ಕಟ್ಟುನಿಟ್ಟಾದ ಕ್ರಮಗಳೊಂದಿಗೆ ಮತ್ತು ಅವುಗಳ ಸರಿಯಾದ ಅನುಷ್ಟಾನಕ್ಕಾಗಿ ಚಲನಚಿತ್ರೋದ್ಯಮವನ್ನು ಹೊಣೆಗಾರರನ್ನಾಗಿ ಮಾಡಬೇಕು.
ಸಮಿತಿ ವರದಿಯಲ್ಲಿ ಹೆಸರಿಸಿರುವವರ ವಿರುದ್ಧ ಹಾಗೂ ವರದಿ ಬಿಡುಗಡೆಯಾದ ನಂತರ ದಾಖಲಾಗಿರುವ ದೂರುಗಳ ವಿರುದ್ಧ ಸೂಕ್ತ ಮತ್ತು ಸಮಗ್ರ ತನಿಖೆ ನಡೆಸಬೇಕು.
ಇದು ಕೇವಲ ಒಂದು ಚಿತ್ರೋದ್ಯಮಕ್ಕೆ ಸಂಬಂಧಿಸಿದ್ದೆಂದು ಕಂಡರೂ ಕೆಲಸದ ಸ್ಥಳದಲ್ಲಿ ಲೈಂಗಿಕ ಹಿಂಸೆಯ ಬಹುದೊಡ್ಡ ಪಿಡುಗಿನ ಆಳ-ಅಗಲವನ್ನು ತೋರಿಸುವ ವರದಿಯಾಗಿ ಹೇಮಾ ಸಮಿತಿ ವರದಿ ನಮ್ಮ ಮುಂದಿದೆ. 2013ರಲ್ಲೇ ವರ್ಮಾ ಸಮಿತಿ ವರದಿಯು, ಕೆಲಸದ ಸ್ಥಳದಲ್ಲಿ ಲೈಂಗಿಕ ಆಕ್ರಮಣ ತಡೆಗೆ ಕೇವಲ ಆಂತರಿಕ ಸಮಿತಿಗಳು ಸಾಲುವುದಿಲ್ಲ; ಅದಕ್ಕಾಗಿ ಒಂದು ಸ್ವತಂತ್ರ ಕಮಿಷನ್ ರಚನೆಯಾಗಬೇಕು ಎಂಬ ಶಿಫಾರಸ್ಸು ಮಾಡಿತ್ತೆಂಬುದನ್ನೂ ನೆನಪಿಸಿಕೊಳ್ಳಬೇಕಿದೆ. ಈಗ ಹೈಕೋರ್ಟ್ ಸಹ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಛಡಿಯೇಟು ಕೊಟ್ಟಿರುವುದರಿಂದ, ವರದಿಯನ್ನು ಪ್ರಕಟಿಸಿರುವುದು ಮೊದಲ ಸಕಾರಾತ್ಮಕ ಹೆಜ್ಜೆಯಾಗಬಹುದೆಂದು ಆಶಿಸಬಹುದು.
ಸಮಿತಿಗಳಾದ ನಂತರ ಸಮಿತಿಗಳು ರಚನೆಯಾಗುವುದು, ವರದಿಗಳು ಹೊರಬರುವುದು ಏನನ್ನು ಸೂಚಿಸುತ್ತಿದೆ?
ಈ ಮೇಲಿನ ವರದಿಗಳ ಅನೇಕ ಶಿಫಾರಸ್ಸುಗಳು ಮತ್ತೆಮತ್ತೆ ಪುನರಾವರ್ತಿತವಾಗಿರುವುದು ಅಥವಾ ಸಮಸ್ಯೆಗಳ ಮೂಲಕಾರಣಗಳನ್ನು ಹೇಳುತ್ತಾ ಒಂದೇ ಬಗೆಯ ಪರಿಹಾರಗಳನ್ನು ಸೂಚಿಸಿರುವುದು ಏನನ್ನು ಹೇಳುತ್ತಿದೆ? ಈ ಸೂಚನೆಗಳಿಂದ ಯಾವುದೂ ನಿರ್ಣಾಯಕವಾಗಿ ಬಗೆಹರಿಯುತ್ತಿಲ್ಲ, ಸಮಸ್ಯೆಗಳು ಯಥಾಸ್ಥಿತಿ ಉಳಿಯುತ್ತಿವೆ, ಅಷ್ಟು ಮಾತ್ರವಲ್ಲ ಬೆಳೆಯುತ್ತಿವೆ. ಪ್ರತಿ ವರದಿಯು ಹಿಂದಿನವರು ಹೇಳಿದ್ದರೊಂದಿಗೆ ಬಹಳಷ್ಟು ಹೊಸ ಸಲಹೆಗಳನ್ನು ಮುಂದಿಡಬೇಕಾಗುತ್ತಿದೆ. ಅಂದರೆ, ಸಮಸ್ಯೆಗಳು ಪ್ರವಾಹದಂತೆ ಮುಂದುವರಿಯುತ್ತಿರುವ ಸಮಯದಲ್ಲಿ, ಆಡಳಿತ ಯಂತ್ರಾಂಗದ ಮತ್ತು ಸಮಾಜದ ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಮಹಿಳಾ ಸುರಕ್ಷತೆಯ ಪ್ರಶ್ನೆ ಈ ಹತ್ತು ವರ್ಷಗಳಲ್ಲಿ ಮೊದಲಿದ್ದದ್ದಕ್ಕಿಂತ ಹಿಂದಕ್ಕೆ ಚಲಿಸಿದೆ. ಲೈಂಗಿಕ ಆಕ್ರಮಣದ ಭೀಕರತೆಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿರುವ, ಘನತೆಯಿಂದ ಬದುಕುವ ಹಕ್ಕು ಕಳೆದುಕೊಳ್ಳುತ್ತಿರುವ ಅಮಾಯಕ ಜೀವಗಳ ಸಂಖ್ಯೆ ಏರುತ್ತಲೇ ಇದೆ. ಈ ಸಮಸ್ಯೆ ಇಂದಿನ ಸೈಬರ್ ಯುಗದಲ್ಲಿ ಇನ್ನೂ ಸಂಕೀರ್ಣ ರೂಪ ಪಡೆದು ವಿನಾಶಕಾರಿಯಾಗಿ ಬೆಳೆಯುತ್ತಿದೆ.
ಸಮಿತಿಗಳೇ ಇಲ್ಲದಂತೆ ಉಸಿರುಕಟ್ಟಿಸಲ್ಪಟ್ಟ ಪ್ರಕರಣಗಳು
2006ರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ನಡೆದ ಒಂದೇ ದಲಿತ ಕುಟುಂಬದ ಇಬ್ಬರು ಹೆಣ್ಣುಮಕ್ಕಳ ಅತ್ಯಂತ ಬರ್ಬರವಾದ ಅತ್ಯಾಚಾರ, ಅವರನ್ನೂ ಸೇರಿ ನಾಲ್ವರ ಹತ್ಯೆ ಪ್ರಕರಣ ದೇಶದ ಪ್ರಜ್ಞಾವಂತರನ್ನು, ದಲಿತ ಹೋರಾಟಗಾರರನ್ನು ಬೆಚ್ಚಿಬೀಳಿಸಿತು. ನಿರ್ಭಯ ಪ್ರಕರಣದಂತೆಯೇ ಇದರಲ್ಲೂ ದಿಟ್ಟ ದಲಿತ ಮಹಿಳೆಯರಾದ ಪ್ರಿಯಾಂಕಾ ಮತ್ತು ಸುರೇಖಾ ಭೋತ್‌ಮಾಂಗೆ ಅವರ ಮೇಲೆ ಜಾತಿವಾದಿ ದುಷ್ಕರ್ಮಿಗಳು ತೋರಿದ್ದ ಕ್ರೌರ್ಯ ಮೈನಡುಗಿಸುತ್ತದೆ. ಹಾಗಿದ್ದೂ ಈ ಪ್ರಕರಣ ಸುದ್ದಿಯಾದದ್ದೇ ಬಹಳ ತಡವಾಗಿತ್ತು. ಡಾ. ಆನಂದ್ ತೇಲ್ತುಂಬ್ಡೆ ಮತ್ತು ಅವರಂತಹ ಅನೇಕ ಹೋರಾಟಗಾರರು ಈ ಬಗ್ಗೆ ಬರೆಯಲಾರಂಭಿಸಿದ ನಂತರ ಮತ್ತು ದಲಿತ ಸಂಘಟನೆಗಳ ಪ್ರತಿಭಟನೆಗಳ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಇದರ ವಿಚಾರಣೆಗೆ ಫಾಸ್ಟ್‌ಟ್ರ್ಯಾಕ್ ಕೋರ್ಟ್ ರಚಿಸಿ, ವಿಚಾರಣೆ ನಡೆದು 2008ರಲ್ಲಿ ಆರೋಪಗಳು ನಿಜವೆಂದು ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಯಿತು. ಆದರೆ ನಂತರ ಬಂದ ಹೈಕೋರ್ಟ್ ತೀರ್ಪು ಇದು ’ಅತಿ ಅಪರೂಪದ ಪ್ರಕರಣವೇನಲ್ಲ, ದಲಿತ ಕುಟುಂಬದಿಂದ ಹಿಂದೆ ತೊಂದರೆಗೊಳಗಾದವರು ಸೇಡು ತೀರಿಸಿಕೊಂಡರಷ್ಟೇ’ ಎಂಬರ್ಥದ ಹಗುರವಾದ ಹೇಳಿಕೆ ನೀಡುತ್ತಾ ಹಲವರನ್ನು ಬಿಡುಗಡೆಗೊಳಿಸಿ ಶಿಕ್ಷೆಯನ್ನು ಕಡಿತಗೊಳಿಸಿತು. ಅದೇರೀತಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಹಾಗೆಯೇ ದೇಶಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೇಲಿನ ಲೈಂಗಿಕ ಆಕ್ರಮಣಗಳು, ಅವರ ಭೀಕರವಾದ ಕೊಲೆಗಳು; ಮುಂಬೈನಲ್ಲಿ ನಡೆದ ಸೈಬರ್ ಅಪರಾಧದ ಅತಿದೊಡ್ಡ ಪ್ರಕರಣವಾದ ’ಸುಲ್ಲಿ ಬಾಯ್ಸ್’ ’ಬುಲ್ಲಿ ಬಾಯ್ಸ್’ ಪ್ರಕರಣದಲ್ಲಿ ನೊಂದ ಹೆಣ್ಣುಮಕ್ಕಳು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾದ್ದರಿಂದ ಅವರ ಬಗ್ಗೆ ಸಹಾನುಭೂತಿಯ ಬದಲು ಇನ್ನಷ್ಟು ಆನ್‌ಲೈನ್ ದಾಳಿ ನಡೆದದ್ದನ್ನೂ ನೋಡುತ್ತಿದ್ದೇವೆ. ಹೀಗೆ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ಅಧಿಕಾರ, ಪ್ರಾಬಲ್ಯದ ಏಣಿಶ್ರೇಣಿಯಲ್ಲಿ ಯಾವುದಾದರೊಂದು ರೀತಿಯಲ್ಲಿ ಕೆಳತಳ್ಳಲ್ಪಟ್ಟವರಾಗಿದ್ದರೆ ಅಂತಹ ಪ್ರಕರಣಗಳು ಸಮಿತಿಯೊಂದು ನೇಮಕಗೊಂಡು ಹೆಚ್ಚು ವಿಚಾರಣೆಗೊಳಗಾಗುವುದಕ್ಕೂ ’ಅರ್ಹತೆ’ ಗಳಿಸದಿರುವ ದುರಂತವನ್ನು ಇಂದಿಗೂ ಅನುಭವಿಸುತ್ತಿದ್ದೇವೆ.
ಹೊರಟದ್ದೆಲ್ಲಿಂದ, ತಲುಪಿದ್ದೆಲ್ಲಿಗೆ?
ಎರಡನೇ ಅಲೆಯ ಸ್ತ್ರೀವಾದಿ ಚಳವಳಿ ಎಂದು ಭಾರತದಲ್ಲಿ ಗುರುತಿಸಲ್ಪಡುವ ದೊಡ್ಡಮಟ್ಟದ ಮಹಿಳಾ ಹೋರಾಟವು ತನ್ನ ಗಟ್ಟಿಯಾದ ಹೆಜ್ಜೆಗುರುತನ್ನು ಮೂಡಿಸಿದ್ದು ’ಮಥುರಾ ಪ್ರಕರಣ’ ಎಂದೇ ಪರಿಚಿತವಾಗಿರುವ ಆದಿವಾಸಿ ಹೆಣ್ಣುಮಗಳ ಮೇಲೆ ಪೊಲೀಸ್ ಠಾಣೆಯಲ್ಲಿ ನಡೆದ ಅತ್ಯಾಚಾರ ಮತ್ತು ನಂತರದಲ್ಲಿ ಕೋರ್ಟುಗಳಿಂದ ನ್ಯಾಯ ನಿರಾಕರಣೆಯ ಪ್ರಕರಣದಿಂದ. ಮಥುರಾ ಪ್ರಕರಣದ ಸಂದರ್ಭದಲ್ಲಿ ನಡೆದ ತೀವ್ರವಾದ ಮಹಿಳಾ ಹೋರಾಟಗಳು ಹೆಣ್ಣುಮಕ್ಕಳ ಬದುಕು, ಆಯ್ಕೆ ಮತ್ತು ಸುರಕ್ಷತೆಯ ಕುರಿತಂತೆ ಅತ್ಯಂತ ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದವು. ಈ ಹೋರಾಟದ ಕಾರಣಕ್ಕೆ ಮೊಟ್ಟಮೊದಲ ಬಾರಿಗೆ ಭಾರತದ ಕಾನೂನು ವ್ಯವಸ್ಥೆಯು ಮಹಿಳಾ ಸುರಕ್ಷತೆಯ ದೃಷ್ಟಿಕೋನದಿಂದ ತುಸು ಹೊಸ ವಿವೇಕ ಪಡೆದುಕೊಂಡಿತು; ’ಅಪರಾಧ ಸಾಬೀತು ಮಾಡುವ ಹೊಣೆ’ ಹೊರಬೇಕಿರುವುದು ಅತ್ಯಾಚಾರಕ್ಕೊಳಗಾಗಿ ಇಡೀ ಸಮಾಜದಲ್ಲಿ ಅತ್ಯಂತ ಭಯಂಕರವಾದ ರೀತಿಯಿಂದ ಮತ್ತೆಮತ್ತೆ ದೌರ್ಜನ್ಯಕ್ಕೊಳಗಾಗುವ ಹೆಣ್ಣುಮಗಳಲ್ಲ, ಬದಲಿಗೆ ಆರೋಪಿ ತನ್ನ ನಿರಪರಾಧಿತ್ವ ನಿರೂಪಿಸಬೇಕು, ಹೆಣ್ಣುಮಕ್ಕಳ ಮೇಲಿನ ಹೊರೆ ಬಹುದೊಡ್ಡ ಅನ್ಯಾಯ ಎಂಬ ’ಜ್ಞಾನೋದಯ’ವನ್ನು ಪಡೆಯಿತು.
ಹಾಗೆಯೇ, ಭಂವರಿದೇವಿ ಪ್ರಕರಣದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವಿಶಾಖಾ ತಂಡದ ಕಾರಣದಿಂದ ’ವಿಶಾಖಾ ತೀರ್ಪು’ ಎಂದೇ ಖ್ಯಾತವಾದ ತೀರ್ಪಿನ ನಂತರ, ಕೆಲಸದ ಸಂದರ್ಭದಲ್ಲಿ ನಡೆಯುವ ಲೈಂಗಿಕ ಹಿಂಸಾಚಾರದ ಹೊಣೆ ಸರ್ಕಾರದ್ದೇ ಎಂಬ ಅರಿವನ್ನು ಬಿತ್ತುವುದು ಸಾಧ್ಯವಾಯಿತು. ಹೀಗೆ ಒಂದೊಂದೇ ಹೆಜ್ಜೆಯಿಡುತ್ತಾ ಮಹಿಳೆಯರನ್ನು ಲೈಂಗಿಕ ಹಿಂಸೆಯಿಂದ ಮತ್ತು ಇನ್ನಿತರ ಎಲ್ಲ ಬಗೆಯ ಜೆಂಡರ್ ಆಧಾರಿತ ತಾರತಮ್ಯ, ದೌರ್ಜನ್ಯಗಳಿಂದ ಮುಕ್ತಗೊಳಿಸಬೇಕೆಂಬ ಮಹತ್ವಾಕಾಂಕ್ಷೆ ಹೊತ್ತು ನಡೆದ ಮಹಿಳಾ ಚಳವಳಿ, ಈ ಹತ್ತು ವರ್ಷಗಳಲ್ಲಿ ಹಲವು ಬಗೆಯ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಪ್ರತಿದಿನ, ಪ್ರತಿಕ್ಷಣ, ಪ್ರತಿ ತಿರುವಿನಲ್ಲಿ ಎದುರಾಗುತ್ತಿರುವ ಕ್ರೌರ್ಯಕ್ಕೆ ತುತ್ತಾದ ಹೆಣ್ಣುಮಕ್ಕಳ ಕಳೇಬರಗಳು ಮನಸ್ಸನ್ನು ಭಾರವಾಗಿಸುತ್ತಿವೆ. ಇಡೀ ಸಮಾಜ ಹೀಗೆ ನೊಂದ ಹೆಣ್ಣುಮಕ್ಕಳೆದುರು ನಿಸ್ಸಹಾಯಕವಾಗಿ ತಲೆತಗ್ಗಿಸಿ ನಿಲ್ಲುತ್ತಿರುವಂತೆ ಕಾಣುತ್ತಿದೆ. ಪ್ರತಿ ಘಟನೆ ನಡೆದಾಗಲೂ ನಡೆಯುತ್ತಿರುವ ಪ್ರತಿಭಟನೆ, ಹೋರಾಟಗಳ ಪರಿಣಾಮಗಳು ದೀರ್ಘಕಾಲದಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತಿವೆ ಎಂಬ ಪ್ರಶ್ನೆಯ ಕಾಡುತ್ತಿದೆ.
ಪ್ರಭುತ್ವ ಮಹಿಳೆಯರನ್ನು ಮತ್ತೆ ’ಅರಮನೆಗಳ ಅಂತಃಪುರ’ಗಳಿಗೆ ಸೀಮಿತವಾಗಿರುವ ’ಭಾರತ’ದ ಮಹಿಳೆಯರನ್ನಾಗಿಸಲು ನಿಶ್ಚಯಿಸಿಕೊಂಡು ಮುಂದಡಿಯಿಡುತ್ತಿರುವಾಗ ಭಾರತದ ಮಹಿಳಾ ಮತ್ತು ಪ್ರಜ್ಞಾವಂತರ ಹೋರಾಟಗಳ ಮುಂದಿನ ನಡೆ ಏನಾಗಿರಬೇಕು? ಪ್ರವಾಹದ ಅಲೆಗಳ ನಡುವಿನ ನಡುಗಡ್ಡೆಗೆ ತಲುಪಿ ನಿಂತಂತೆ ಕಾಣುತ್ತಿರುವ ಹೋರಾಟದ ನಾವೆ ಮುಂದೆ ಸಾಗಬೇಕಾದ ದಿಕ್ಕು ಯಾವುದು? ಈ ಬಗ್ಗೆ ಅತ್ಯಂತ ಆಳವಾದ ಅವಲೋಕನ, ಚಿಂತನ, ಮಂಥನ ನಡೆಯಬೇಕಾದ ಅಗತ್ಯವಿದೆ. ಈ ಎಲ್ಲ ಸವಾಲು, ಅಡ್ಡಿ, ಆತಂಕಗಳ ನಡುವೆಯೂ ಇಂದು ಪಶ್ಚಿಮ ಬಂಗಾಳದಲ್ಲಿ ಹಿಂಜರಿಯದೆ ಹೋರಾಟ ಮುಂದುವರಿಸಿರುವ ಬಂಧುಗಳ ಪ್ರಯತ್ನಗಳಂತೆ, ಕರ್ನಾಟಕದಲ್ಲಿ ಆರೋಪಿತ ಪ್ರಜ್ವಲ್ ರೇವಣ್ಣ ಎಂಬ ಪಾಳೇಗಾರಿಕೆಯ ಪ್ರತಿನಿಧಿ ನಡೆಸಿದ ಸರಣಿ ದೌರ್ಜನ್ಯಗಳ ಸಂದರ್ಭದಲ್ಲಿ ಮೊಳಗಿನ ಒಗ್ಗಟ್ಟಿನ ದನಿಗಳಂತೆ, ಆಶಾದಾಯಕವಾದ ಬೆಳಕಿನ ಕಿರಣಗಳೂ ಕೂಡಾ ಆಗೀಗ ಕಾಣುತ್ತಿವೆ. ಮುಂದೆ ಸಾಗಬೇಕಾದ ಹಾದಿಗೆ ಬೆಳಕು ಚೆಲ್ಲುತ್ತಿವೆ.
ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
100
500
1000
Donate
LEAVE A REPLY
Comment:
Comment:
Name:*
Name:*
Email:*
Email:*
Website:
Save my name, email, and website in this browser for the next time I comment.
Previous article
ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಬೇಸತ್ತ ಟೆಕ್ಕಿಗಳು; ಫ್ಲೈಓವರ್ ಮೇಲೆ ವಾಹನಬಿಟ್ಟು ಮನೆಗೆ ತೆರಳಿದ ಜನರು
Next article
ಬೆಂಗಳೂರು | ಕಟ್ಟಡ ಕುಸಿದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ : ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ
ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ
ಇದೇ ಲೇಖಕರ ಬರಹ
ಮುಖಪುಟ
ವಿಚಾರಣೆ ಬಾಕಿಯಿರುವ ಆರೋಪಿಯನ್ನು ಮಾಧ್ಯಮಗಳು ಅಪರಾಧಿ-ನಿರಪರಾಧಿ ಎಂದು ಘೋಷಿಸುವಂತಿಲ್ಲ : ಕೇರಳ ಹೈಕೋರ್ಟ್
ಕರ್ನಾಟಕ
ನ್ಯಾಯಾಂಗ ನಿಂದನೆ ಆರೋಪ | ಸಚಿವ ಝಮೀರ್ ವಿರುದ್ದ ಕ್ರಮಕ್ಕೆ ರಾಜ್ಯಪಾಲರ ಸೂಚನೆ
ಕರ್ನಾಟಕ
ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು : ಎಸ್ಪಿ ಪ್ರತಿಕ್ರಿಯೆ
– Advertisment –
ಗೌರಿ ಲಂಕೇಶ್ ನ್ಯಾಯಪಥ ಪತ್ರಿಕೆಯ ಚಂದಾದಾರರಾಗಲು ಇಲ್ಲಿ ಕ್ಲಿಕ್ಕಿಸಿ
ಮುಖಪುಟ
ವಿಚಾರಣೆ ಬಾಕಿಯಿರುವ ಆರೋಪಿಯನ್ನು ಮಾಧ್ಯಮಗಳು ಅಪರಾಧಿ-ನಿರಪರಾಧಿ ಎಂದು ಘೋಷಿಸುವಂತಿಲ್ಲ : ಕೇರಳ ಹೈಕೋರ್ಟ್
ನಾನು ಗೌರಿ -11 November 2024, 10:21 AM0
ಕರ್ನಾಟಕ
ನ್ಯಾಯಾಂಗ ನಿಂದನೆ ಆರೋಪ | ಸಚಿವ ಝಮೀರ್ ವಿರುದ್ದ ಕ್ರಮಕ್ಕೆ ರಾಜ್ಯಪಾಲರ ಸೂಚನೆ
ನಾನು ಗೌರಿ -11 November 2024, 9:36 AM0
ಕರ್ನಾಟಕ
ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು : ಎಸ್ಪಿ ಪ್ರತಿಕ್ರಿಯೆ
ನಾನು ಗೌರಿ -11 November 2024, 8:49 AM0
ಮುಖಪುಟ
ಜಮ್ಮು ಕಾಶ್ಮೀರ | ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿ ಮೃತ, ಇತರ 3 ಮಂದಿಗೆ ಗಾಯ
ನಾನು ಗೌರಿ -10 November 2024, 7:48 PM0
ಮುಖಪುಟ
ನೆಟ್‌ಫ್ಲಿಕ್ಸ್‌ನ ‘ದೋ ಪಟ್ಟಿ’ ವಿರುದ್ಧ ಬಹಿಷ್ಕಾರಕ್ಕೆ ಹೂಡಾ ಖಾಪ್ ಪಂಚಾಯತ್ ನಿರ್ಧಾರ
ನಾನು ಗೌರಿ -10 November 2024, 7:29 PM0
ಮುಖಪುಟ
ಪಟಾಕಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಉಚಿತ ಶಿಕ್ಷಣ; ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ
ನಾನು ಗೌರಿ -10 November 2024, 6:54 PM0
ಮುಖಪುಟ
‘ಕೆಫಿಯಹ್’ ಧರಿಸಿ ಫುಟ್ಬಾಲ್ ವೀಕ್ಷಿಸಲು ತೆರಳಿದ್ದ ನಾಲ್ವರನ್ನು ವಶಕ್ಕೆ ಪಡೆದ ಕೇರಳ ಪೊಲೀಸರು!
ನಾನು ಗೌರಿ -10 November 2024, 6:45 PM0
ಅಂತರಾಷ್ಟ್ರೀಯ
ಮಾಸ್ಕೋಗೆ ಗುರಿಯಿಟ್ಟು 34 ಡ್ರೋನ್ ಹಾರಿಸಿದ ಉಕ್ರೇನ್; 2022ರ ಯುದ್ಧದ ಬಳಿಕ ಅತಿದೊಡ್ಡ ದಾಳಿ
ನಾನು ಗೌರಿ -10 November 2024, 6:32 PM0
ಮುಖಪುಟ
ಆಂಧ್ರಪ್ರದೇಶ | ವಾಟ್ಸಾಪ್ ಮೂಲಕ ಕನಿಷ್ಠ 100 ಸರ್ಕಾರಿ ಸೇವೆ ನೀಡುವ ಯೋಜನೆ
ನಾನು ಗೌರಿ -10 November 2024, 6:19 PM0
ಮುಖಪುಟ
ವಿರೋಧ ಲೆಕ್ಕಿಸದೆ ದೇಗುಲ ಪ್ರವೇಶಿಸಿದ ದಲಿತರು; ದೇವರನ್ನೇ ಹೊರತಂದ ಸವರ್ಣೀಯರು
ನಾನು ಗೌರಿ -10 November 2024, 6:07 PM1
ವಂತಿಗೆ- Donate English ನಮ್ಮ ಕುರಿತು ನೀವೂ ಬರೆಯಿರಿ
© Newspaper WordPress Theme by Ta