ಬೆಂಗಳೂರು
ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ವತಿಯಿಂದ ನಮ್ಮ ಮೆಟ್ರೋ ರೈಲಿನ ಪ್ರಯಾಣ ದರವನ್ನು ಶೇ.46ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಪ್ರತಿ 2 ಕಿ.ಮೀ.ಗೆ 10 ರೂ. ದರವನ್ನು ನಿಗದಿಪಡಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ (ಫೆ.9) ಅನ್ವಯವಾಗಲಿದೆ ಎಂದು ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಬಿಎಂಆರ್‌ಸಿಎಲ್ ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಯಿತು. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು 2024ರ ಡಿ.24ರಂದು ಸಲ್ಲಿಸಿತು. ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯಿದೆಯ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳು ಮೆಟ್ರೋ ರೈಲ್ವೇ ಆಡಳಿತದ ಮೇಲೆ ಬದ್ಧವಾಗಿರುತ್ತದೆ. ಅದರಂತೆ, ಬಿ.ಎಂ.ಆರ್.ಸಿ.ಎಲ್ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ, ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ.
ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ.5 ರಿಯಾಯಿತಿ ಮುಂದುವರಿಸಿದೆ. ಪೀಕ್ ಅವರ್‌ನಲ್ಲಿ ಶೇ.5 ಮಾತ್ರ ರಿಯಾಯಿತಿ ಸಿಗಲಿದೆ. ಉಳಿದಂತೆ ಬೆಳಗ್ಗೆ 5ರಿಂದ ಬೆಳಗ್ಗೆ 8 ಗಂಟೆವರೆಗೆ, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಹಾಗೂ ರಾತ್ರಿ 9 ಗಂಟೆಯ ನಂತರ ಆಫ್ ಪೀಕ್ ಅವರ್ ಎಂದು ಪರಿಗಣಿಸಿ ಶೇ.10 ರಿಯಾಯಿತಿ ಸಿಗಲಿದೆ. ಉಳಿದಂತೆವ ಎಲ್ಲ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ ಸಿಗಲಿದೆ.