ಧರ್ಮಶಾಸ್ತ್ರದ ಪ್ರಕಾರವಾಗಿ ಅಕ್ಕನ ಮಗಳು ಸೋದರಮಾವನ ಮಗಳು – ಸೋದರತ್ತೆಯ ಮಗಳು ಇವರಲ್ಲಿ ಯಾರೂ ವಿವಾಹ ಯೋಗ್ಯರಲ್ಲ. – ಇವರು ಸೋದರ ಸೋದರಿ ಭಾವದಿಂದ ಇರಬೇಕೆಂದು ಮನುಧರ್ಮಶಾಸ್ತ್ರ ಧರ್ಮಸಿಂಧು, ಗೌತಮಧರ್ಮಶಾಸ್ತ್ರ ಮುಂತಾದ ಧರ್ಮಶಾಸ್ತ್ರಗಳು ಹೇಳುತ್ತಿವೆ. ಇದನ್ನು ಜೀವಶಾಸ್ತ್ರವೂ (ವಿಜ್ಞಾನ) ಅಂಗೀಕರಿಸುವುದಿಲ್ಲ. ಇದು ಉತ್ತಮ ಸಂಪ್ರದಾಯವೂ ಅಲ್ಲ.
ಮಹಾಭಾರತ ಇತಿಹಾಸವನ್ನು ನೋಡಿದರೆ ಅರ್ಜುನನ ಧರ್ಮಪತ್ನಿ ಸುಭದ್ರೆ ಅರ್ಜುನನಿಗೆ ಸೋದರ ಮಾವನ ಮಗಳು. ಶ್ರೀಕೃಷ್ಣನ ಹೆಂಡತಿ ‘ಭದ್ರಾದೇವಿ’ ಕೃಷ್ಣನ ಸೋದರತ್ತೆಯಾದ ‘ಶೃತಕೀರ್ತಿ’ಯ ಮಗಳು. ಶ್ರೀಕೃಷ್ಣನ ಮಗನಾದ ಪ್ರದ್ಯಮ್ನನು ರುಕ್ಮಿಣಿ ಅಣ್ಣನ ಮಗಳನ್ನು ಮದುವೆಯಾದ. ಭಾರತ ಯುದ್ಧಾನಂತರ ಈ ರೀತಿಯ ಸಂಬಂಧಗಳನ್ನು ಋಷಿ ಸಂಪ್ರದಾಯವು ತಿರಸ್ಕರಿಸಿದೆ ಎನಿಸುತ್ತದೆ. ಈ ರೀತಿಯ ಸಂಬಂಧಗಳು ಶುಭದಾಯಕವಲ್ಲವೆಂದು ಘೋಷಿಸಿದೆ. ಸುಭದ್ರಾರ್ಜುನರಿಗೆ ಹುಟ್ಟಿದ ಅಭಿಮನ್ಯು ಅಲ್ಪಾಯುಷಿಯಾದನು. ಭದ್ರಾದೇವಿ- ಕೃಷ್ಣನಿಗೆ ಹುಟ್ಟಿದ ಹತ್ತು ಜನ ಮಕ್ಕಳು ಪುಂಡಪೋಕಿರಿಗಳಾದರು. ಪ್ರದ್ಯುಮ್ನನ ಮಕ್ಕಳೂ ಹಾಗೆ ಆದರು. ಈ ಕಾರಣಗಳಿಂದಾಗಿ ಉತ್ತರ ಭಾರತೀಯರು ಅಕ್ಕನ ಮಗಳನ್ನು ಮದುವೆಯಾಗುವುದಿಲ್ಲ. “ಕುಲಮಗ್ರೇ ಪರಿಕ್ಷೇತ ಮಾತೃತಃ ಪಿತೃತಸ್ಚೇತಿ” ಮದುವೆಗೆ ತಾಯಿಸಂಬಂಧಿಕರಲ್ಲಿ ಐದು ತಲೆಮಾರಿನವರನ್ನು ತಂದೆಯ ಸಂಬಂಧಿಕರಲ್ಲಿ ಏಳು ತಲೆಮಾರಿನವರನ್ನು ಬಿಡಬೇಕೆಂದು ‘ಧರ್ಮಸಿಂಧು’ ಹೇಳುತ್ತಿದೆ. ಮನುಧರ್ಮಶಾಸ್ತ್ರವೂ ಇದನ್ನೇ ಹೇಳುತ್ತಿದೆ.
ನಮ್ಮ ಮಕ್ಕಳು ನಮ್ಮ ಕಣ್ಣಿನ ಮುಂದೆ ಇರಬೇಕೆಂಬ ಕೆಟ್ಟ ವ್ಯಾಮೋಹದಿಂದಲೋ, ಪಿತ್ರಾರ್ಜಿತವಾಗಿ ಬಂದ ಅಥವಾ ತಾವು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಯಾರೋ ಹೊರಗಿನವಳು ಬಂದು ಏಕೆ ಅನುಭವಿಸಬೇಕೆಂಬ ಸಂಕುಚಿತ ಭಾವನೆಯಿಂದಲೋ ಹಿರಿಯರೇ ಇಂಥಾ ಮದುವೆಗಳನ್ನು ಮಾಡುತ್ತಿದ್ದಾರೆ. ವರದಕ್ಷಿಣೆಯ ಭೂತ ಬಂದ ಮೇಲೆ ಈ ರೀತಿ ಮದುವೆಗಳು ಜಾಸ್ತಿಯಾಗಿವೆ. ಹಿರಿಯರ ಯೋಚನೆಯಲ್ಲಿ ಸ್ವಲ್ಪ ಸ್ವಾರ್ಥವೂ ಇದೆ. ಮಗನಿಗೆ ಮೊಮ್ಮಗಳನ್ನು ಮಾಡಿಕೊಂಡರೆ ಮುಪ್ಪಿನ ಸಮಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆಂಬ ಸ್ವಾರ್ಥ ಭಾವನೆಯಿಂದಲೂ ಈ ರೀತಿಯ ಮದುವೆಗಳು ನಡೆಯಲು ಕಾರಣವಾಗುತ್ತಿದೆ.
ಹತ್ತಿರ ಸಂಬಂಧಿಕರಲ್ಲಿ ಮದುವೆಯಾಗಿರುವ ದಂಪತಿಗಳಲ್ಲಿ ಪ್ರೀತಿ ಕಡಿಮೆ ಇರುತ್ತದೆ. ಶೃಂಗಾರದ ಇಚ್ಚೆಯೂ ಕಡಿಮೆ ಇರುತ್ತದೆ. ಇದು ಪೀಳಿಗೆಯಲ್ಲಿ ಮತ್ತೆ ಮತ್ತೆ ಪುನರಾವರ್ತಿವಾಗಿ ಮುಂದುವರೆದರೆ ಮುಂದೆ ಇವರಿಗೆ ಹುಟ್ಟುವ ಮಕ್ಕಳು ಮಂದಮತಿಗಳಾಗುತ್ತಾರೆ. ರೋಗಿಷ್ಟರುಗಳಾಗುತ್ತಾರೆ. ಅವಯವಲೋಪಗಳಿರುತ್ತವೆ. ವಂಶನಾಶಕರಾಗುತ್ತಾರೆ. ವಿದ್ಯಾವಂತರಾಗುವುದಿಲ್ಲ. ಮೆದುಳು ಚಿಕ್ಕದಾಗಿರುತ್ತದೆ.
ದೂರದ ಸಂಬಂಧದಲ್ಲಿ ಈ ಸಮಸ್ಯೆಗಳಿರುವುದಿಲ್ಲ. ರಕ್ತ ವ್ಯತ್ಯಾಸ (ವಿಭಿನ್ನ ಬ್ಲಡ್‌ಗ್ರೂಪ್) ದಿಂದ ದಂಪತಿಗಳು ಅನುರಾಗದಿಂದ ಕೂಡಿರುತ್ತಾರೆ. ನಾವು ಏನು ಮಾಡಿದರೂ ಎಷ್ಟು ದುಡಿದರೂ ಮಕ್ಕಳಿಗಾಗಿಯೇ ಅಂದಮೇಲೆ ಮಕ್ಕಳ ಸುಖವನ್ನು ನೋಡಬೇಕೆ ವಿನಹ ನಮ್ಮ ಸ್ವಾರ್ಥವನ್ನು ಮಕ್ಕಳ ತಲೆಗೆ ಸುತ್ತಬಾರದು.
ದಿನದಿನಕ್ಕೂ ವಿಜ್ಞಾನವು ವೃದ್ಧಿಯಾಗುತ್ತಿದೆ. ನಮ್ಮಲ್ಲಿರುವ ಲೋಪದೋಷಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು. ಆಗಲೇ ಅಭಿವೃದ್ಧಿ.
ಶಿವಾರ್ಪಣಮಸ್ತು
ಸದ್ವಿಚಾರ ಸಂಗ್ರಹ