ಆತ್ಮ ಚೌರ್ಯ…………….ಕೃಪೆ ಸದಾಚಾರ

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ ಸುಪ್ರಭಾತದಿಂದ ಹಿಡಿದು ಶಯನ ಗೃಹಕ್ಕೆ ದೊರೆ ಹೋಗುವವರೆಗೂ ಅವನ ಎಲ್ಲ ಬೇಕು ಬೇಡಗಳನ್ನು ಇವನೇ ನೋಡಿಕೊಳ್ಳುವನು.

ಒಂದು ದಿನ ಅವನಿಗೊಂದು ಕೆಟ್ಟ ಆಲೋಚನೆ ಬಂತು. ಯಾರದೋ ದುರ್ಬೋಧನೆ. ” ಎಷ್ಟು ದಿನ ಈ ಊಳಿಗ! ಇನ್ನಾದರೂ ನೆಮ್ಮದಿ ಬೇಡವೇ ” ಎಂದೆಲ್ಲ.

ದೊರೆ ಮಲಗುವ ಮುನ್ನ ತನ್ನೆಲ್ಲ ಆಭರಣಗಳನ್ನೂ ಕಳಚಿ ಇವನ ಕೈಗೇ ಕೊಡುತ್ತಿದ್ದ. ಈ ವೃದ್ಧ ಸೇವಕ ಅವನ್ನೆಲ್ಲಾ ಒಪ್ಪವಾಗಿ ತೆಗೆದಿಟ್ಟು ಮುದ್ರೆಯಿಟ್ಟು ದೊರೆಯ ಬಳಿ ಒಪ್ಪಿಸಿ ನಂತರ ಮನೆಗೆ ಹೋಗುವವ.

ಅದೊಂದು ದುರ್ದಿನ. ಆಭರಣವನ್ನೆಲ್ಲ ಒಪ್ಪ ಮಾಡುವಾಗ ಈ ಸೇವಕ ಒಂದು ಬೆಲೆಬಾಳುವ ಕಡಗವನ್ನು ತನ್ನ ಜೇಬಿಗಿಳಿಸಿದ. ಮನೆಗೆ ಹೋಗದೆ ಎತ್ತಲೋ ಮಾಯವಾದ. ಮನೆಯವರು ಅವನು ಅರಮನೆಯಲ್ಲೇ ಉಳಿದಿರಬೇಕೆಂದು ತೀಳಿದರು. ಮರುದಿನ ಬೆಳಿಗ್ಗೆ ಇವನಿಲ್ಲದೇ ದೊರೆಗೆ ಮನ ನೆಮ್ಮದಿಯಿಲ್ಲ. ತಳಮಳ. ಒಡವೆಯೊಂದು ಕಾಣದಾಗಲು ಪರಿವಾರದವರು ಅದಕ್ಕೂ ಅವನಿಗೂ ತಳಕು ಹಾಕಿ ತೀವ್ರವಾಗಿ ಹುಡುಕಲಾರಂಭಿಸಿದರು. ಅವನು ಯಾರ ಕೈಗೂ ಸಿಗದೆ ಬಹುದೂರ ಹೋಗಿಬಿಟ್ಟಿದ್ದ.

ಅವನಿಗೋ ಕೈಲಿ ಕಾಸಿಲ್ಲ. ಊಟ ತಿಂಡಿ ಇರಲಿ, ಮುಖ ಮರೆಸಿಕೊಂಡು ಕುಡಿಯಲು ನೀರು ಕೇಳಲೂ ನಾಚಿಕೆ.
ಕಡಗವಿತ್ತಲ್ಲ! ಅದನ್ನು ಮಾರಲು ಹಲವಾರು ಅಕ್ಕಸಾಲಿಗಳ ಬಳಿ ಹೋದರೆ ಅವರೆಲ್ಲ ಇವನನ್ನು ಸಂಶಯದಿಂದ ನೋಡಿ ಅಳೆಯುವರು. ಅವರ ಕೈಯಿಂದ ಅದನ್ನು ಕಿತ್ತುಕೊಂಡು ಮತ್ತೆ ಓಡುತ್ತಿದ್ದ. ಹೀಗೆ ಓಡಿ ಓಡಿ ಸುಸ್ತಾದವ ಬದುಕುವುದೇ ಕಷ್ಟ ಎನ್ನುವ ಸ್ಥಿತಿಗೆ ಬಂದು ಬಿಟ್ಟ. ಒಂದು ನಿರ್ಧಾರಕ್ಕೂ ಬಂದ.
ವಾಪಸ್ಸು ಊರಿಗೆ ಬಂದವನೇ ಸೀದಾ ಅರಮನೆಗೆ ಹೋದ. ಇವನ ಮಾಸಿದ ಬಟ್ಟೆ ಬೆಳೆದ ದಾಡಿ ಮೀಸೆಯಿಂದ ಇವನನ್ನಾರೂ ಗುರುತು ಹಿಡಿಯಲಿಲ್ಲ. ಒಬ್ಬಿಬ್ಬರು ಗುರುತಿಸಿದವರು ಕಳ್ಳನೆಂದು ಅವನನ್ನು ಹಿಡಿದು ದೊರೆಯ ಬಳಿ ಒಯ್ದರು. ದೊರೆಗೆ ಹೇಗೋ ಅವನ ಗುರುತು ಸಿಕ್ಕಿತು. ಇವನೋ ಭಯದಿಂದ ಮೊದಲು ಕಡಗವನ್ನು ಒಪ್ಪಿಸಲು ಜೇಬನ್ನು ತಡಕಾಡಿದ.

ದೊರೆ ಅವನ ತಡಕಾಟವನ್ನು ನೋಡಿದರೂ ನೋಡದಂತೆ, ಸಿಂಹಾಸನದಿಂದ ಇಳಿದು ಬಂದು ಅವನ ಮಲಿನ ವಸ್ತ್ರ, ಕೊಳಕು ಮೈಯನ್ನೂ ಗಮನಿಸದೇ ಅವನನ್ನು ಬಾಚಿ ತಬ್ಬಿಕೊಂಡ. ” ಏನಜ್ಜಾ, ನನ್ನ ಬಿಟ್ಟು ಎಲ್ಲಿ ಹೋದೆ! ನೀನಿರದೆ ನಾನು ಎಷ್ಟು ಸಂಕಟಪಟ್ಟೆ ” ಮುಂತಾಗಿ ಹಲುಬಿದ!
ಮುದುಕ ಕಡಗವನ್ನು ತೆಗೆದು ಅವನ ಪಾದದಲ್ಲಿಟ್ಟು, ” ಧಣೀ, ನನ್ನನ್ನು ಕ್ಷಮಿಸಿ ” ಎಂದು ಹೇಳುತ್ತಾ ಬಿಕ್ಕಿದ. ಮುಂದೆ ಮಾತನಾಡದಾದ. ಅವನನ್ನು ಮತ್ತೆ ದೊರೆ ಮೇಲೆತ್ತಿ ತಬ್ಬಿ ಮೈಯನ್ನೆಲ್ಲ ನೇವರಿಸಿ , ” ಅಜ್ಜ, ಕಡಗ ಹಾಗಿರಲಿ. ಆದೇನೂ ದೊಡ್ಡ ವಿಷಯವಲ್ಲ! ಒಂದಿಲ್ಲದಿದ್ದರೆ ಇನ್ನೊಂದು ನೂರಾರು ಕಡಗ ಸಿಗುತ್ತದೆ ! ಧರಿಸಿದರಾಯಿತು. ನಿನ್ನನ್ನು ನೋಡು! ಎಷ್ಟು ಸೊರಗಿದ್ದೀಯೆ! ಊಟ ಮಾಡಿ ಯಾವ ಸಮಯವಾಯಿತೋ ಪಾಪ!” ಎಂದು ಅಲ್ಲಿದ್ದ ಸೇವಕನನ್ನು ಕರೆದ. ಮುದುಕ ಕಡಗವನ್ನು ದೊರೆಯ ಪಾದಕ್ಕೆ ತೊಡಿಸದೇ ಬಿಡಲೊಲ್ಲ. ಕೊನೆಗೆ ದೊರೆ ಕಾಲು ಚಾಚಿದ. ಕಡಗವನ್ನು ಮತ್ತೆ ದೊರೆಗೆ ತೊಡಿಸಿದ ಮುದುಕ ಸೇವಕ ಆನಂದದಿಂದ ಕಣ್ಣೊರೆಸಿಕೊಂಡು ಹೇಳಿದ, ” ಪ್ರಭು, ನನ್ನದಲ್ಲದ ವಸ್ತುವನ್ನು ನಾ ಕದ್ದು ಪಡಬಾರದ ಪಾಡು ಪಟ್ಟೆ. ಇನ್ನು ಅದನ್ನು ನಿನಗೊಪ್ಪಿಸಿದ್ದೇನೆ. ನನಗಾವ ಶಿಕ್ಷೆಯಿತ್ತರೂ ನಾನು ಸಿದ್ಧ” ಎಂದ. ದೊರೆಗೂ ಕಣ್ಣಲ್ಲಿ ನೀರು. ” ಅಜ್ಜಾ, ನಿನಗೆ ಹಣದ ಅವಶ್ಯಕತೆ ಇದ್ದರೆ ನನ್ನನ್ನೇ ಕೇಳಬಹುದಿತ್ತಲ್ಲ! ನೀನು ಸಾಕೆನ್ನುವಷ್ಟು ಕೊಡುತ್ತಿದ್ದೆನಲ್ಲವೇ? ಅನ್ಯಾಯವಾಗಿ ಇಷ್ಟು ಕಷ್ಟ ಪಟ್ಟೆಯಲ್ಲ! ಇದು ಸಾಕು. ವಿಶ್ರಾಂತಿ ಪಡೆದು ಮತ್ತೆ ನನ್ನ ಬಳಿಗೇ ಬಾ. ನಿನ್ನ ಕೊನೆಗಾಲದವರೆಗೂ ನೀನು ನನ್ನ ಬಳಿಯೇ ಇರಬೇಕು. ಯಾವ ಕೆಲಸವನ್ನೂ ಮಾಡಬೇಡ ” ಎಂದು ಅವನನ್ನು ಸಮಾಧಾನ ಪಡಿಸಿ, ಪ್ರೀತಿಯಿಂದಲೂ ಅಧಿಕಾರದಿಂದಲೂ ಅಪ್ಪಣೆ ಮಾಡಿದ.

ಇದು ಕತೆ.

ಭಗವಂತನೇ ಈ ಕತೆಯಲ್ಲಿರುವ ದೊರೆ. ನಾವೆಲ್ಲ ಆ ವೃದ್ಧ ಸೇವಕನಂತೆ. ನಮ್ಮಲ್ಲಿರುವ ಜೀವಾತ್ಮನೇ ದೊರೆಯ ಕಾಲ್ಕಡಗ. ಜೀವಾತ್ಮನೆಂದಿಗೂ ಭಗವಂತನಿಗೆ ಸೇರಿದವನು.

ಶರೀರವೇ ನಾನೆಂದು ಭ್ರಮಿಸಿರುವ ನಾವು ನಮ್ಮದಲ್ಲದ ಒಡವೆಯನ್ನು ಕದ್ದು, ಧರಿಸಿ, ಅಹಂಕಾರದಿಂದ ಮೆರೆದು ಕೊನೆಗೆಂದೋ ಒಮ್ಮೆ ನಾನು ನನ್ನವನಲ್ಲ ಎಂಬ ಸತ್ಯವನ್ನರಿತು ಭಗವಂತನ ಮೊರೆ ಹೋಗುತ್ತೇವೆ. ಅಷ್ಟರಲ್ಲಿ ಬಹಳಷ್ಟು ಕಷ್ಟವನ್ನೂ ಅನುಭವಿಸಿರುತ್ತೇವೆ.

ಭಗವಂತನೋ ಕರುಣಾಳು. ಈಗಲಾದರೂ ಬಂದೆಯಲ್ಲ ಎಂದು ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾನೆ. ಆದರೂ ಅವನೂ ” ಇಷ್ಟೊಂದು ದುಃಖವನ್ನನುಭವಿಸಿದೆಯಲ್ಲಾ! ಇನ್ನೊಂದು ಸ್ವಲ್ಪ ಮುಂಚೆ ಬಂದಿದ್ದರೆ ಕಷ್ಟದಿಂದ ನಾನು ಪಾರು ಮಾಡುತ್ತಿದ್ದೆನಲ್ಲಾ ಎಂದು ಪರಿತಪಿಸುತ್ತಾನೆ, ಆ ದೊರೆಯಂತೆ.

ಒಮ್ಮೆ ಅವನನ್ನು ಶರಣು ಹೊಂದಿದರೆ, ಅಂದರೆ ನಮ್ಮದಲ್ಲದ ಆತ್ಮವನ್ನೂ ಅದನ್ನು ರಕ್ಷಿಸುವ ಹೊಣೆಯನ್ನೂ ಅವನಿಗರ್ಪಿಸಿದರೆ ನಾವು ನಿರಾಳವಾಗಿರಬಹುದು. ಕಡಗವನ್ನು ದೊರೆ ಕಾಲಿಗೆ ಮತ್ತೆ ಧರಿಸಿಕೊಂಡಂತೆ ಭಗವಂತನು ನಮ್ಮನ್ನು ಸ್ವೀಕರಿಸಲಿ ಎಂದು ಸ್ವಾಮಿ ವೇದಾಂತ ದೇಶಿಕರು ಬೇಡುತ್ತಾರೆ ಈ ಪದ್ಯದಲ್ಲಿ.

ಅವನು.

ದೊರೆಯ ಕಾಲ್ಗಡವ ಸೇವಕನು ಕದ್ದ,
ಭಟ ಅವನ ಹಿಡಿದು ದೊರೆಯ ಬಳಿ ಒಯ್ದ,
ಹಳೆಯ ಭಂಟನ ಕಂಡು ದೊರೆ ಹಿಗ್ಗಿ ತಬ್ಬಿದ,
ಅವ ಕದ್ದ ಕಡಗವ ಒಪ್ಪುತಾ ಧರಿಸಿದ.

ನಾನು

ದೇಹವೇ ನಾನೆಂದು ತಿಳಿದೊಮ್ಮೆ ಮೆರೆದೆ,
ಈ ಆತ್ಮ ನಿನ್ನದೆಂದರಿಯದೇ ಕದ್ದೆ,
ನಿನ್ನೊಡವೆ ನಿನಗಿಂದು ಒಪ್ಪಿಸಲು ಬಂದೆ,
ಪಾದದಲಿ ಧರಿಸೆನ್ನ ಕಡಗದೊಲು ತಂದೆ.

ದಾಸನೆಂಬೋ ಬಿರುದ ನನಗೀಯೋ ದೊರೆಯೇ,
ಎನ್ನ ಸೇವೆಯನನವರತ ಸ್ವೀಕರಿಸೋ ಹರಿಯೇ,
ನಿನ್ನ ಹೊಂದುವುದೊಂದೇ ಎನ್ನ ಉಸಿರಾಗಿಸೋ ಗುರುವೇ,
ಇನ್ನು ತಪ್ಪನೆಸಗದೆಂತೆನ್ನ ಪೊರೆ ಪ್ರಭುವೇ..

ಆತ್ಮಾಪಹಾರ ರಸಿಕೇನ ಮಯೈವ ದತ್ತಂ,
ಅನ್ಯೈರಧಾರ್ಮಧುನಾ ವಿಬುಧೈಕನಾಥ,
ಸ್ವೀಕೃತ್ಯ ಧಾರಯಿತುಮರ್ಹಸಿ ಮಾಂ ತ್ವದೀಯಂ ಚೋರೋಪನೀತ ನಿಜ ನೂಪುರವತ್ ಸ್ವಪಾದೇ..

ಇದು ಶ್ರೀ ವೇದಾಂತ ದೇಶಿಕರ ಒಂದು ಶ್ಲೋಕ. ದೇವನಾಯಕ ಪಂಚಾಶತ್ ಸ್ತೋತ್ರದಿಂದ . ಅದರ ಸ್ದೂಲ ಭಾವಾರ್ಥ ಈ
ಕೃಪೆ ವಾಟ್ಸಾಪ್

Related Posts