ಭಗವಂತನ ಕೃಪಾಶೀರ್ವಾದಗಳು ತಂದೆ ತಾಯಿಯರ ಮೂಲಕ ನಮಗೆ ದೊರೆಯುತ್ತವೆ.

|| ಜೋತಿಷ್ಯ ವಿಜ್ಞಾನ||

ಜನ್ಮದಾತರನ್ನು ನಿರ್ಲಕ್ಷಿಸಿದರೆ ದೋಷ ಖಂಡಿತ
—————————————————
ನೆನಪಿರಲಿ: ಭಗವಂತನ ಕೃಪಾಶೀರ್ವಾದಗಳು ತಂದೆ ತಾಯಿಯರ ಮೂಲಕ ನಮಗೆ ದೊರೆಯುತ್ತವೆ

ಮೊದಲಿಗೇ ಸ್ಪಷ್ಟಪಡಿಸುತ್ತಿದ್ದೇನೆ. ಇದು ಯಾರನ್ನೂ ಹೆದರಿಸುವ ಬೆದರಿಸುವ ಪ್ರಯತ್ನವಲ್ಲ. ಬದಲಿಗೆ
ಹಲವು ಜ್ಯೋತಿಷ್ಯಕಾರರ 45 ವರ್ಷಗಳಿಗೂ ಹೆಚ್ಚು ಕಾಲ ಕ್ರಮಬದ್ಧವಾಗಿ , ವೈಜ್ಞಾನಿಕವಾಗಿ ಒಂದು ಲಕ್ಷಕ್ಕೂ ಮೀರಿದ ಜಾತಕಗಳ ಪರಿಶೀಲನೆ, ವಿಶ್ಲೇಷಣೆ, 10000 ಕ್ಕೂ ಹೆಚ್ಚು ದೋಷ ನಿವಾರಣಾ ಹೋಮಗಳನ್ನು ಮಾಡಿಸಿದ ಹಾಗೂ ಜ್ಯೋತಿಷ್ಯಶಾಸ್ತ್ರದ ಅಭ್ಯಾಸ , ಅನುಭವ, ಜ್ಞಾನಾಧಾರಿತ ಬರಹವಿದು.
ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತಗಳ ಪ್ರತ್ಯಕ್ಷಾನುಭವದ ಹಿನ್ನೆಲೆ ಈ ಬರಹಗಳಿಗಿದೆ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಳಷ್ಟು ಜನರು ಮಾಡುತ್ತಿರುವ ತಪ್ಪು ಕರ್ಮಗಳನ್ನೂ , ಮುಂದೆ ಈ ಜನ್ಮದಲ್ಲೋ ಅಥವಾ ಮುಂದಿನ ಜನ್ಮಗಳಲ್ಲೋ ತಪ್ಪದೇ ಅನುಭವಿಸಲೇಬೇಕಾಗುವ ಕರ್ಮಫಲಗಳನ್ನು ಪ್ರಜ್ಞಾಪೂರ್ವಕವಾಗಿ ನಿವಾರಿಸಿಕೊಳ್ಳಲೆಂಬ ಸದುದ್ದೇಶವಷ್ಟೇ.

ಬದುಕಿದ್ದಾಗ ಕಾಡಿಸಿ, ಪೀಡಿಸಿ, ಹಿಂಸಿಸಿ ನೆಮ್ಮದಿ ಶಾಂತಿ ಕಿತ್ತುಕೊಂಡು ಸತ್ತ ನಂತರ ಶಾಪ ಕೊಟ್ಟಾರೆಂಬ ಭಯದಿಂದ ತಿಥಿ , ಶ್ರಾದ್ಧ, ತರ್ಪಣ , ಎಡೆ ಇಡುವುದು, ಮಹಾಲಯ ಅಮಾವಾಸ್ಯೆ ಇತ್ಯಾದಿ ಆಚರಣೆ ,ಪರಿಹಾರ, ಪ್ರಾಯಶ್ಚಿತ್ತಗಳಿಂದ ಹೆಚ್ಚಿನ ಶುಭಫಲಗಳು ಪ್ರಾಪ್ತಿಯಾಗುವುದಿಲ್ಲ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದ ನಾಲ್ಕನೇ ಮನೆ ವ್ಯಕ್ತಿಯ ಸುಖ, ವಿದ್ಯೆ, ಮಾತೃಸೌಖ್ಯ, ವಾಹನ ಸೌಖ್ಯ, ನೆಮ್ಮದಿ , ಶಾಂತಿ, ಸ್ವಗೃಹವಾಸ ಇತ್ಯಾದಿಗಳ ಸೂಚಕ.
ತಾಯಿ ಅಥವಾ ತತ್ಸಮಾನ ಹಿರಿಯ ಮಹಿಳೆಯರಿಗೆ ಯಾವಾಗಲೂ , ವಿಶೇಷವಾಗಿ ವೃದ್ಧಾಪ್ಯದಲ್ಲಿ ನಿಂದೆ, ದೈಹಿಕ, ಮಾನಸಿಕ ಹಿಂಸೆ ,ಅವಮಾನ, ನಿರ್ಲಕ್ಷ್ಯ, ವೈದ್ಯಕೀಯ ಚಿಕಿತ್ಸೆ ನಿರಾಕರಣೆ, ಆಸ್ತಿ, ಹಣ ಕಾಸಿನ ವಂಚನೆ, ವೃದ್ಧಾಶ್ರಮ/ ಅನಾಥಾಶ್ರಮಗಳಿಗೆ ಸೇರಿಸುವುದು, ಬೀದಿಪಾಲು ಮಾಡುವುದು, ದುರುಪಯೋಗ, ಮೋಸ, ತಾತ್ಸಾರ ಇತ್ಯಾದಿ ಪಾಪಕರ್ಮಗಳನ್ನು ತಪ್ಪೆಂದು ತಿಳಿದೂ ಮಾಡಿದರೆ ಅದರ ಪರಿಣಾಮ ಘೋರ , ಭೀಕರ.
ಜಾತಕದಲ್ಲಿ 4 ನೇ ಮನೆ ದುರ್ಬಲವಾಗಿ ಅದರ ಸೂಚಕಗಳು/ ಕಾರಕತ್ವಗಳು , ಶುಭಫಲಗಳು ವ್ಯಕ್ತಿಗೆ ಸಿಗುವುದಿಲ್ಲ ಅಥವಾ ಕಾಲಕ್ರಮೇಣ ಕಡಿಮೆಯಾಗುತ್ತವೆ. ಪಾಪಕರ್ಮ ಫಲಗಳು ಜನ್ಮಾಂತರಕ್ಕೂ ವ್ಯಾಪಿಸುತ್ತವೆ.

ವೃಶ್ಚಿಕ ರಾಶಿಯ ಚಂದ್ರ, ಚಂದ್ರ+ ರಾಹು, ಚಂದ್ರ+ ಶನಿ, ಚಂದ್ರ+ ಕೇತು, ಚಂದ್ರ+ಶನಿ+ ರಾಹು , ಬಾಧಕ ಸ್ಥಾನದ ಚಂದ್ರ ಇತ್ಯಾದಿ ಅನೇಕ ದುರ್ಯೋಗಗಳಿಗೆ ಮೇಲ್ಕಂಡ ಮಾತೃಸಂಬಂಧೀ ದುಷ್ಕರ್ಮಗಳೇ ನೇರ ಕಾರಣ !

ಇದೇ ರೀತಿ ಜಾತಕದ 9 ನೇ ಮನೆ ಪಿತೃ (ತಂದೆ ಅಥವಾ ತತ್ಸಮಾನ ಹಿರಿಯರು) , ಭಾಗ್ಯ, ಅದೃಷ್ಟ, ಧರ್ಮ ಕಾರ್ಯ, ವಿದೇಶ ಪ್ರಯಾಣ, ತೀರ್ಥ ಯಾತ್ರೆ , ಉನ್ನತ ವ್ಯಾಸಂಗ ಇತ್ಯಾದಿಗಳ ಸೂಚಕ ಸ್ಥಾನ.
ಜನ್ಮ ಕೊಟ್ಟ ತಂದೆ ಮತ್ತು ತಂದೆ ಸಮಾನರಾದ ವ್ಯಕ್ತಿಗಳಿಗೆ ಮೇಲೆ ವಿವರಿಸಿದ ಪಾಪಕರ್ಮಗಳನ್ನು ಮಾಡಿದರೆ ಜಾತಕದ 9 ನೇ ಮನೆಯ ಕಾರಕತ್ವಗಳು ದುರ್ಬಲವಾಗಿ ನಮ್ಮ ಅದೃಷ್ಟ ಕ್ಷೀಣವಾಗಿ ಕಾಲಕ್ರಮೇಣ ನಾಶವಾಗುತ್ತದೆ !
ಬದುಕಿರುವಾಗ ತಂದೆ ತಾಯಿಯರ ಸೇವೆಯನ್ನು ಕೊನೇ ಕ್ಷಣದವರೆಗೂ ಎಷ್ಟೇ ಕಷ್ಟ ನಷ್ಟವಾದರೂ ಬಿಡದೆ , ಪ್ರತ್ಯಕ್ಷ ದೇವತೆಗಳೆಂದು ತಿಳಿದು ಮಾಡಬೇಕು. ಆಗ ಮಾತ್ರ ಮಾತಾಪಿತೃ ಋಣ ಸ್ವಲ್ಪವಾದರೂ ತೀರಿದಂತೆ. ಅಂಥವರಿಗೆ ಮಾತಾಪಿತರ ಆಶೀರ್ವಾದ , ಅನುಗ್ರಹ ಚೆನ್ನಾಗಿರುತ್ತದೆ. ವಂಶಾಭಿವೃದ್ಧಿ, ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ.

ತಂದೆ ತಾಯಿ ಸಮಾನರೇ ಆದ ಅತ್ತೆ ಮಾವಂದಿರನ್ನು ರಾಹು -ಕೇತು ಗಳೆಂದು ಮೂದಲಿಸಿ ಅಪಮಾನಿಸಿ ಹಿಂಸಿಸುವ, ಕಷ್ಟ ಕೋಟಲೆ ಯಾತನೆಗಳನ್ನು ನೀಡುವ ದುಷ್ಟ ಸೊಸೆಯರಿಗೂ ಇದು ಅನ್ವಯ.

ತಂದೆ ತಾಯಿಯರು ಒಂದು ವೇಳೆ ದುಷ್ಟರು, ದುರ್ಮಾರ್ಗರು, ಬೇಜವಾಬ್ದಾರಿಗಳಾಗಿದ್ದರೂ ಸರಿ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು. ಅವರವರ ಕರ್ಮಫಲ ಅವರವರಿಗೆ!!

ನೆನಪಿರಲಿ: ಭಗವಂತನ ಕೃಪಾಶೀರ್ವಾದಗಳು ತಂದೆ ತಾಯಿಯರ ಮೂಲಕ ನಮಗೆ ದೊರೆಯುತ್ತವೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

Related Posts