ನರಸಿಂಹಾವತಾರ ಭಾಗ ೧ ಭಾಗವತದ ಸಪ್ತಮೋಧ್ಯಾಯದಲ್ಲಿ ಹೆಣೆಯಲಾಗಿದೆ.
ಜಯ ವಿಜಯ ಎಂಬ ಶ್ರೀ ವಿಷ್ಣುವಿನ ದ್ವಾರಪಾಲಕರು ಶ್ರೀಹರಿಯ ದರ್ಶನ ಪಡೆಯಲು ಬಂದ ಬ್ರಹ್ಮ ಮಾನಸ ಪುತ್ರರಾದ ಸನಕಾದಿ ಮುನಿಗಳನ್ನು ಸಣ್ಣ ಮಕ್ಕಳೆಂದು ಭಾವಿಸಿ ತಡೆಯಲು, ಕೋಪಗೊಂಡ ಮುನಿಗಳಿಂದ ಅಸುರ ಯೋನಿಯಲ್ಲಿ ಜನಿಸಿ ಎಂದು ಶಾಪಗ್ರಸ್ತರಾಗಿ ಮೊದಲನೇ ಜನ್ಮವಾಗಿ ದಿತಿ ಕಶ್ಯಪರ ಮಕ್ಕಳಾಗಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ ಹುಟ್ಟಿದರು.
ವರಾಹರೂಪಿ ಶ್ರೀ ಹರಿಯಿಂದ ಹಿರಣ್ಯಾಕ್ಷನು ಸಂಹೃತನಾಗಲು ಕ್ರುದ್ಧನಾದ ಹಿರಣ್ಯಕಶಿಪು ತನ್ನ ದಾನವರಲ್ಲಿ ಹೇಳುತ್ತಾನೆ ” ನನ್ನ ತಮ್ಮನ ಕೊಂದಂತಹ ವಿಷ್ಣುವನ್ನು ಕೊಂದು ದಾನವ ಸಾಮ್ರಾಜ್ಯ ಸ್ಥಾಪಿಸೋಣ ಎಂದನು.
ಬೇರೆ ದೈತ್ಯರು ಕೊಳ್ಳಿಗಳಿಂದ ಜನರ ಮನೆಗಳನ್ನು ಸುಟ್ಟರು. ಊರು ಕೇರಿಗಳನ್ನೆಲ್ಲ ಧ್ವಂಸಗೊಳಿಸಿದರು.
ಹಿರಣ್ಯಕಶಿಪು ದು:ಖಿತನಾಗಿ ಮೃತನಾದ ಹಿರಣ್ಯಾಕ್ಷನಿಗೆ ಉತ್ತರಕ್ರಿಯೆ ನೆರವೇರಿಸಿ, ಹಿರಣ್ಯಾಕ್ಷನ ಮಕ್ಕಳಾದ ಶಕುನಿ, ಶಂಬರ, ಧೃಷ್ಟ, ಭೂತಸಂತಾಪನ, ವೃಕ, ಕಾಲನೇಮಿ, ಮಹಾನಭ, ಹರಿಶ್ಮಶ್ರು, ಉಲ್ಕಲರನ್ನು ಮತ್ತು ಹಿರಣ್ಯಾಕ್ಷನ ಪತ್ನಿ ಋಶದ್ಭಾನುವನ್ನು ಸಂತೈಸಲು ಪ್ರಯತ್ನಿಸಿದನು. “ಹಿರಣ್ಯಾಕ್ಷ ಶತ್ರುವಿನೊಂದಿಗೆ ಹೋರಾಡಿ ಮೃತನಾಗಿ, ವೀರಸ್ವರ್ಗ ಸೇರಿದ್ದಾನೆ. ಶ್ರೀಹರಿಯು ಸ್ವರೂಪ ನಾಶರಹಿತನು., ಪ್ರಾಕೃತ ಗುಣತ್ರಯರಹಿತ, ಸರ್ವತ್ರವ್ಯಾಪ್ತ, ಸ್ವತಂತ್ರ, ಅವನು ಅಪ್ರಾಕೃತ, ಪಾರತಂತ್ರ್ಯಾದಿ ದೋಷವಿಲ್ಲದವ. ಹುಟ್ಟು ಸಾವು ಎಲ್ಲರಿಗೂ ಇದ್ದದ್ದೇ ಅದನ್ನು ಪ್ರತಿಯೊಬ್ಬರೂ ಅನುಭವಿಸಲೇಬೇಕು.”. ಇದು ಹಿರಣ್ಯಕಶಿಪು ಮಾತು.
ಈರೀತಿ ಅವನು ಸಾತ್ವಿಕ ಚಿಂತನೆ ಮಾಡಲು ಅವನಲ್ಲಿದ್ದ ಜೀವದ್ವಯಾವೇಷದ ಜಯನ ಆವೇಶ ಕಾರಣ
ಹೀಗೆಲ್ಲ ಹೇಳಿ ಅವರನ್ನು ಸಮಾಧಾನ ಪಡಿಸಿದ. ಅವರೆಲ್ಲ ದು:ಖ ತ್ಯಜಿಸಿದರು.
ಹಿರಣ್ಯಕಶಿಪುವಿನ ತಪಸ್ಸು :
ಇಷ್ಟೆಲ್ಲಾ ಉಪದೇಶಿಸಿದ ಹಿರಣ್ಯಕಶಿಪು, ಜರಾ ಮರಣ ಗಳಿಲ್ಲದೇ, ಯಾರಿಗೂ ಸೋಲದೇ ಅಜೇಯನಾಗಲೂ, ಎದುರಾಳಿಗರಾರೂ ಇಲ್ಲದಂತಿರಲು, ಈ ಜಗತ್ತಿಗೆ ತಾನೊಬ್ಬನೇ ರಾಜನಾಗಿರಬೇಕೆಂದು ನಿಶ್ಚಯಿಸಿ, ಘೋರ ತಪಸ್ಸು ಆಚರಿಸಿದನು.
ಅವನು ಮಂದರ ಪರ್ವತ ತಪ್ಪಲಿಗೆ ಹೋಗಿ, ತನ್ನ ತೋಳುಗಳನ್ನು ಮೇಲಕ್ಕೆತ್ತಿ, ನಭೋ ದೃಷ್ಟಿ – ಆಕಾಶದ ಕಡೆ ನೋಡುತ್ತಾ, ಕಾಲಿನ ಹೆಬ್ಬೆರಳ ತುದಿಯಿಂದ ಭೂಮಿಯಲ್ಲಿ ನಿಂತು ತಪಸ್ಸನ್ನಾಚರಿಸಿದನು. ಅವನ ಘೋರ ತಪಸ್ಸಿನಿಂದ ಪ್ರಳಯ ಕಾಲದ ಸೂರ್ಯನಂತೆ ಪ್ರಕಾಶಿಸಿದನು. ಅವನು ಉಗ್ರ ತಪಸ್ಸಾಚರಿಸುತ್ತಿದ್ದಾಗ, ಅವನ ಶಿರದಿಂದ ಜ್ವಾಲೆ ಎಲ್ಲಾ ದಿಕ್ಕುಗಳಲ್ಲಿ ವ್ಯಾಪಿಸಿತು. ನದಿಗಳು ಸಮುದ್ರಗಳು ಅಲ್ಲೋಲ ಕಲ್ಲೋಲವಾದವು. ಭೂಮಿ ಕಂಪಿಸಿ, ಆ ಬೇಗೆಗೆ ತಪ್ತರಾದ ದೇವತೆಗಳು ಸ್ವರ್ಗ ಬಿಟ್ಟು ಸತ್ಯಲೋಕಕ್ಕೆ ಹೋಗಿ ಬ್ರಹ್ಮನಿಗೆ ವಿಜ್ಞಾಪಿಸಿ, ಅವನ ತಪಸ್ಸನ್ನು ಶಾಂತಗೊಳಿಸಿರೆಂದು ಕೋರಿದರು.
ಇವನ ಘೋರ ತಪಸ್ಸಿಗೆ ಮೆಚ್ಚಿ ಸೃಷ್ಟಿಕರ್ತ ಬ್ರಹ್ಮದೇವರು ಪ್ರತ್ಯಕ್ಷರಾದರು.
ಹಿರಣ್ಯಕಶಿಪು ಕೇಳಿದ ವರ ಅಭೂತಪೂರ್ವವಾಗಿತ್ತು.
ನನಗೆ ಸಾವೇ ಬರಬಾರದೆಂದು ಕೋರಿದ. ಬ್ರಹ್ಮನಿಗೇ ಒಂದು ಕಾಲಾಂತರದಲ್ಲಿ ಸಾವಿರುವಾಗ ಬೇರೆಯವರಿಗೆ ಹೇಗೆ ಆ ವರವನ್ನು ಕೊಡಬಲ್ಲ. ಆಗ ಬ್ರಹ್ಮ ದೇವರು ಸಾವಿಲ್ಲದ ವರವನ್ನು ಕೊಡಲಾಗುವುದಿಲ್ಲ. ಬೇರೆ ಏನಾದರೂ ಕೇಳು ಕೊಡುತ್ತೀರಿ ಎಂದಾಗ, ಹಿರಣ್ಯಕಶಿಪು ಕೇಳಿದ ವರ ಹೀಗಿತ್ತು :-
ಬ್ರಹ್ಮನೇ, ನೀನು ಸೃಷ್ಟಿಸಿದ ಜೀವಿಗಳಿಂದ ನನಗೆ ಸಾವು ಬರಬಾರದು; ಒಳಗಾಗಲಿ ಹೊರಗಾಗಲಿ ಹಗಲಾಗಲಿ ಇರುಳಾಗಲಿ, ಭೂಮಿಯಲ್ಲಾಗಲೀ ಆಕಾಶದಲ್ಲಾಗಲಿ, ಮನುಷ್ಯರಿಂದಾಗಲಿ ಪ್ರಾಣಿಗಳಿಂದಾಗಲಿ ಯಾವುದೇ ಆಯುಧದಿಂದಾಗಲಿ – ನನಗೆ ಸಾವು ಬರಬಾರದು
ಮುಂದುವರಿಯುವುದು…. ಭಾಗ ೨
ಲೇಖನ – ನರಹರಿ ಸುಮಧ್ವ