ಶ್ರೀವಿಜಯದಾಸಾರ್ಯ ವಿರಚಿತ
ಶ್ರೀನಾರಸಿಂಹದೇವರ ಸುಳಾದಿ
ರಾಗ ರೇವತಿ
ಧ್ರುವತಾಳ
ಜಯ ಜಯ ಜಯಾವೆಂದು ಜಗದೋತ್ಪಾದಕ ವಾಯು
ವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆ
ಭಯ ಬಟ್ಟವನಂದದಿ ಘನ್ನತನವನ್ನೆ ಬಿಟ್ಟು
ತ್ರಯಲೋಕ ನಗುವಂತೆ ಬಾಯಿದೆರೆದೆಯೋ
ನಯನಂಗಳು ನೋಡಿದರೆ ವಿಶಾಲಾಯತ ಸೀತಳಾ
ದಯಾರಸ ಪೂರ್ಣವಾಗಿ ನಿತ್ಯ ವೊಪ್ಪುತಲಿವೆ
ವ್ಯಯರಹಿತ ವಿದೇನೆಂಬೆನೊ ಅಖಿಳರ ಓಡಿಸುವ
ಲಯಕಾರಿಯಂತೆ ಕಿಡಿ ಉದುರಿಪ ಬಗೆ ಏನು
ನಯವಾಗಿ ನಿನ್ನ ಪಾದಾ ಗಾಯನ ಗತಿಗೆ ನಿ –
ರ್ಣಯ ಮಾಡಲಾರದೆ ಸುರರು ಮರುಳಾಹುತಿಹ್ಯರು
ಅಯುತಾಯುತಾ ನಿಯತಾ ಸಿಡಿಲು ಗರ್ಜನೆ ಮಿಗಿಲು
ಸಯವಾಗಿ ಭೋ ಎಂದು ಕೂಗಿ ಕೆಂಗೆಡಿಪದೇನು
ಹುಯಲಿಟ್ಟು ಜಗವೆಲ್ಲ ಒಂದಾಗಿ ಕರೆದರೆ
ಪಯೋಬಿಂದಿನಷ್ಟು ದೂರ ಪೀಠಾ ಬಿಡದ ಮಹಿಮಾ
ಪಯಣಗತಿ ಇಲ್ಲದಲೆ ಒಮ್ಮಿಂದೊಮ್ಮೆ ಬಂದು ವು –
ದಯವಾದೆ ಸ್ತಂಭದಿಂದ ವಿಚಿತ್ರವೇನು
ಬಯಸಿದವರಾಪತ್ತು ಎಲ್ಲಿದ್ದರೂ ನಿಲ್ಲದೆ
ಬಯಲಾಗಿ ಪೋಪವೆಂದು ಸುರರು ಕೊಂಡಾಡೆ ನಿತ್ಯ
ಪ್ರಾಯಕೆ ಸಿಕ್ಕಿದಂತೆ ಬಾಲನ ಮೊರೆಗೆ ವಿ –
ಜಯವನೀವಗೋಸುಗ ನೀನೆ ವದಗಿದ್ದೇನೊ
ಪಯೋನಿಧಿಸುತೆ ನಿನ್ನ ಲಕ್ಷಣೋಪೇತ ಚಲುವಿ –
ಕಿಯ ನೋಡಿ ಹಿಗ್ಗಿ ಹಿಗ್ಗಿ ಹಿಗ್ಗಿ ಹಾರೈಸುತಿರೆ
ಪ್ರಿಯನೆ ಪರಮಾನಂದ ಸಂಪೂರ್ಣೈಶ್ವರ್ಯ ಚಿ –
ನ್ಮಯ ಮೂರುತಿಯೇ ಇಂಥ ಅಂಗವಿಕಾರವೇನು
ಜಯದೇವಿನಾಥ ದೀನನಾಥ ದುರ್ಜಯ ವಿ –
ಜಯವಿಟ್ಠಲ ನರಸಿಂಹ ನಿನ್ನ ಲೀಲೆಗೆ ನಮೋ ॥ 1 ॥
ಮಟ್ಟತಾಳ
ಅರಿ ದರ ಮೊದಲಾದ ನಾನಾ ಕೈದುಗಳಿರಲು
ಅರಿಯ ಉದರ ನಖದಿ ಸೀಳಿದ ಪರಿ ಏನೋ
ಸರುವ ಕಾಲ ರೂಪ ನಿನಗೆ ಮೀರಿದವಿಲ್ಲಾ
ಅರಿಸಿದೆ ಸಮಯಾನುಸಾರ ಸಾಕಲ್ಯವೇನೋ
ಇರಳು ಹಗಲು ದೇವಿ ಸಾರುವ ತೊಡಿಮ್ಯಾಲೆ
ದುರುಳಾ ನಿರ್ಜೀವಿಯ ಇಟ್ಟ ಸಂಭ್ರಮವೇನೋ
ಶರಣಾಗತ ವತ್ಸಲ ವಿಜಯವಿಟ್ಠಲರೇಯಾ
ನರಕೇಸರಿ ನಿನ್ನ ಚರಿತೆಗೆ ಸೋಜಿಗವೋ ॥ 2 ॥
ತ್ರಿವಿಡಿತಾಳ
ಪರದೇವತಿ ನಿನ್ನ ಗುಣರೂಪ ಕ್ರಿಯಗಳು
ಪರಮ ಶಾಂತವೆಂದು ಸಮಸ್ತರೊಲಿಸೆ
ಭರದಿಂದ ಘುಡಿಘುಡಿಸುತ ಬಂದ ಕಾಲಕ್ಕೆ
ಉರಿ ಮಾರಿ ದೈವವೆಂದೆಲ್ಲರೊಡನಿದ್ದದ್ದೇನೋ
ವರಮಣಿ ನಾನಾ ಹಾರಗಳಿರೆ ಕೊರಳಲ್ಲಿ
ಸುರಿವ ಶೋಣಿತ ಹಸಿಗರಳಾ ಹಾಕಿದುದೇನು
ಶಿರೋರಹ ಮಿಗಿಲಾದ ಅವಯವಂಗಳು ಮೃದು –
ತರವಾಗಿದ್ದರೆ ಮಹಾಕಠಿಣ ತೋರಿದುದ್ದೇನೊ
ನರವಲ್ಲ ಮೃಗವಲ್ಲ ಜಗದ್ವಿಲಕ್ಷಣವಾದ
ಶರೀರವ ತೆತ್ತು ಅದ್ಬುತ ಬಿರಿದಾದ್ದೇನೊ
ಪರಮೇಷ್ಠಿ ಶಿವ ಪುರಂದರ ಸುರರಾದ್ಯರು
ನಿರುತ ನಿನಗೆ ನಿಜ ಕಿಂಕರರಾಗಿರೆ
ಸುರವೈರಿಗಳಿಗೆ ಒಂದೊಂದು ಪರಿಪರಿ
ವರ ಪಾಲಿಸಿದ್ದು ಮನ್ನಿಸಿದಾ ಘನವೇನೊ
ದುರಿತಕುಠಾರಿ ವಿಜಯವಿಟ್ಠಲ ಘೋರ –
ತರ ರೂಪವತಾಳಿದೆ ಸೌಮ್ಯತನವೆ ತೊರದೂ ॥ 3 ॥
ಅಟ್ಟತಾಳ
ಸಂತತ ನಿನ್ನ ಪಾದೈಕಾಶ್ರಯಾ ಏ –
ಕಾಂತಿಗಳಿಗೆ ಮೆಚ್ಚಿ ಸುಮ್ಮನಾಗದ ದೈವ
ಎಂತು ಪೇಳಲಿ, ನೋಡಿ ತರಳ ಪ್ರಹ್ಲಾದ
ಮುಂತೆ ನಿಲ್ಲಲು ಸೋತ ಮುಗುಳ ನಗಿಯೇನು
ಕಿಂತುಯಿಲ್ಲದ ಸ್ವಾಮಿ ಶುದ್ಧಾತ್ಮಾ ಶ್ರೀಲಕುಮಿ –
ಕಾಂತ ಸರ್ವಾಂತರ್ಯಾಮಿ ಕರುಣಾಳೆ
ಚಿಂತಿತ ಫಲದಾಯಾ ದೈತ್ಯಾವಳಿಗೆ ಮಹಾ
ಭ್ರಾಂತೆಗೊಳಿಪ ನಮ್ಮಾ ವಿಜಯವಿಟ್ಠಲ ಸ್ವಾ –
ತಂತ್ರ ಸರ್ವೋತ್ತಮಾ ನಿನ್ನಾ ಮರಿಯಾದೆ ಎಂತೊ ॥ 4 ॥
ಆದಿತಾಳ
ಕುಟಿಲ ನಿಟಿಲ ಲೋಚನ ಕರುಳವಕ್ತ್ರ
ಕರವಾಳಪಾಣಿ ಕಠಿಣ ಕೋಪಾಟೋಪಪಾಗ್ನಿ
ಛಟ ಛಟ ರಭಸ ಚಂಡಪ್ರತಾಪ
ಕಠೋರ ಶಬ್ದ ಹಾಹಾಕಾರ ತೀಕ್ಷಣನಖ
ವಜ್ರನಾಗೋಪವೀತ ಝಟ ಶಠ ರೋಮ ಕುಚಿತ
ಕರ್ನ ದಂತೋಷ್ಟ್ರ ಮಿಳಿತ ವುತ್ಕಟ ಶ್ವಾಸೋಛ್ವಾಸ ನಾಶಿಕ
ಪುಟ ಹುಂಕಾರ ಜ್ವಾಲಾಮಾಲಾ ಕಣಕಣ ಪ್ರವಾಹ ಭೃಕುಟಿ ತಟಿ
ತಟಿ ತಟಿತ್ಕಾಂತಿ ವೀರಾವೇಶ ಕೋಲಾಹಾ ಸಿಂಹ
ಪಟುತರ ಲಂಘಣೆ ಭುಜ ತೊಡೆ ತಟಕೆ
ಲಟಲಟ ಜಿಹ್ವಾಗ್ರ ಉಗ್ರಾಧಿಟ ಅಧಟ ಅ –
ಚ್ಚಟ ನಿಚ್ಚಟ ವುತ್ಕೃಷ್ಟ ಅಟ್ಟಹಾಸಾ ಮಿಟಿ ಮಿಟಿ
ಮಿಟಿ ಮಿಟಿ ಮಿಟಿ ನೋಟ ನಟ ನಟ ನಟಣೆ
ಅಬ್ಬರ ಉಲ್ಬಣ ನಿಬ್ಬರ ಅರ್ಭಾಟ ಬೊಬ್ಬಾಟ
ಕಟ ಕಟ ಕಾರ್ಬೊಗೆ ಹಬ್ಬಿಗೆ ಮೊಬ್ಬಿಗೆ ಉಬ್ಬಿಗೆ
ಇದರ ತಬ್ಬಿಬ್ಬಿಗೆ ಜಬ್ಬಿಗೆ ಲುಬ್ದ
ಭಟರೆದೆ ಇಬ್ಬಗೆ ಇಬ್ಬಗೆ ಆರಾಟಾ
ತುಟಿ ಕದಪು ಭುಜ ಕಂಧರ ಉರ ಬಾಹು
ಜಠರ ನಾಭಿ ಜಘನಾ ಕಟಿ ಊರು ಜಾನುಜಂಘೆ
ಗುಲ್ಫಾಂಗುಟ ಪದ ಕುಣಿಯೇ ಅನುಕಂಪ
ಪುಟ ಪುಟದಾಡುವ ಅಡಿಗಳು ಬೊಮ್ಮಾಂಡ
ಕಟಹ ದಲ್ಲಣವು ಭಟ ಸುರಮುನಿ ಕಟಕ
ನೆರೆದುಘೇ ಉಘೇ ಭಳಿರೆ ಪೂತುರೆ ಭಲ್ಲ ಭಲ್ಲರೆ ಸಿಂಗಾ
ಘಟಿತಾಘಟಿತ ಸಮರ್ಥ ನಿಜೈಶ್ವರ್ಯ ಗುಣಪೂರ್ಣ
ಚಟುಲ ನಿರ್ಜರರ ಕಟಕ ಪೂಜಿತ ಸಕಲ ಕ್ರಿಯಾನಂದ
ಹಟ ನಾನಾ ಚಿತ್ರ ವಿಚಿತ್ರ ಅದ್ಬುತ ಐಶ್ವರ್ಯಾಣು ಮಹತ್ತು –
ತ್ಕಟ ಗುರು ಲಘು ಪರಿಮಿತ ವ್ಯಕ್ತಾವ್ಯಕ್ತಾ ಉ –
ದ್ಧಟ ಅಗೋಚರ ಘೋರ ಯುಗಪದಿ ಪೂರ್ಣ
ನಿರ್ಭೇದ ದುರ್ಲಭ ಸುಲಭಾ ಅಲೋಭಾ ಅವಿರುದ್ಧಾ
ಸುವಿರುದ್ಧಾ ಕರ್ಮವಿಕರ್ಮ ವಿದೂರನೆ
ಸಟಿಯಲ್ಲ ಅನಾದಿಸಿದ್ಧ ಇಬ್ಬಗೆ ಅಸುರಾರಿ
ವಟಪತ್ರಶಾಯಿ ಸಿರಿ ವಿಜಯವಿಟ್ಠಲ
ಕಂಠೀರವ ಪಠಿಸಿ ಪುಟಾಂಜುಳಿಯಾದವಗೆ
ತೃಟಿಯೊಳು ಪೊಳೆವ, ಪತಿತ ಪಾವನನೇ ॥ 5 ॥
ಜತೆ
ಭೃತ್ಯವತ್ಸಲ ನಿನ್ನ ರೂಪಕ್ಕೆ ನಮೋ ನಮೋ
ದೈತ್ಯಮರ್ದನ ವಿಜಯವಿಟ್ಠಲ ಕಟಿ ತರುವಾಯಾ ॥