ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ

ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ ಓದಿ ಸಂಪೂರ್ಣ ಮಾಡಿ ಶ್ರೀ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಿ

🙏🙏🙏🙏🙏🙏🙏🙏🙏🙏🙏🙏
ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು

ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ. ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳಿ ಎಂದು ಕೇಳಿಕೊಂಡರು.

ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತಮಹಾಮುನಿಗಳು ಕಥೆಯೊಂದನ್ನು ಹೇಳಿದರು…

ಋಷಿ ಶ್ರೇಷ್ಠರೇ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದಿದೆ. ನಿಮಗಾಗಿ ಆ ವ್ರತದ ಕಥೆ ಹೇಳುವೆ ಕೇಳಿ ಎಂದರು.

ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು.

ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು.

ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ಮಹಾದೇವಾ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳು ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ಪಾರ್ವತಿಯೇ ಕೇಳು, ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಎಂಬುದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು” ಎಂದು ಹೇಳಿದನು.

ಸಂತೋಷಗೊಂಡ ಪಾರ್ವತಿ, ಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?” ಎಂದು ಕೇಳಿದಳು.

ಆಗ ಪರಮೇಶ್ವರನು, ‘ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ.
ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು.

ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದನು ಪರಮೇಶ್ವರನು.

ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ಚಾರುಮತಿ ಎಂಬ ಸ್ತೀ ಇದ್ದಳು.
ಈ ಚಾರುಮತಿ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದಳು.

ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- ‘ ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು.

ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನಗೆ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ.

ಯಾರು ನನ್ನನ್ನು ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು.

ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ.

ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು” ಎಂದು ನಿದ್ರೆಯಲ್ಲಿ ಉಪದೇಶಿಸಿದ ಮಹಾಲಕ್ಷ್ಮಿಯು ಕಣ್ಮರೆಯಾದಳು.

ಆಗ ಚಾರುಮತಿಯು ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿದಳು.

ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.

ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು.

ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು.

ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು.

ಕಥೆ ಕೇಳಿದ ಪಾರ್ವತಿಯು, ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು” ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-

ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು.

ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು.

ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಿ, ವರಮಹಾಲಕ್ಷ್ಮಿಯನ್ನು ಪೂಜಿಸಬೇಕು.
ಷೋಡಶೋಪಚಾರ ಮಾಡಿ ಸತ್ಕರಿಸಿ
ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರದೊಂದಿಗೆ ಶಾಸ್ತ್ರೋಸ್ತ್ರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು.

ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು.

ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು” ಎಂದು ಪರಮೇಶ್ವರನು ವಿವರಿಸಿದನು.

ಸೂತಪುರಾಣಿಕರು ಈ ಕಥೆಯನ್ನು ಋಷಿಗಳಿಗೆ ಹೇಳಿದರು. ಈ ಕಥೆಯನ್ನು ಕೇಳಿದ ಋಷಿಗಳು ಸಂತೋಷ ಭರಿತರಾದರು.

ಈ ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡುವರೋ ಹಾಗೂ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ದಾರಿದ್ರ್ಯ ದುಃಖ ನಾಶವಾಗಿ ಸಂಪತ್ತಿನಿಂದ ಸಕಲ ಭಾಗ್ಯಗಳೂ ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವoತು
▬▬▬ஜ۩۞۩ஜ▬▬ ▬▬▬▬ஜ۩۞۩ஜ▬▬▬
.

Related Posts