ನೀರಿನಲ್ಲಿ ಮಡಿದವರ ಮೇಲೆತ್ತುವ ಮಡಿ ದಿನ
ನೀರಿನಲ್ಲಿ ಮಡಿದವರ ಮೇಲೆತ್ತುವ ಮಡಿ ದಿನೇಶ್
ನಾಗರಾಜ ಖಾರ್ವಿ, ಕಂಚುಗೋಡು
ಮನುಷ್ಯ ಸ್ವಭಾವತಃ ಈಜುಗಾರನಲ್ಲ. ಪ್ರಯತ್ನಪೂರ್ವಕವಾಗಿ ಕಲಿತವರು ಮಾತ್ರ ಈಜುಗಾರರಾಗಿತ್ತಾರೆ. ಈಜುವಾಗ ಉಸಿರನ್ನು ತೆಗೆದುಕೊಂಡು, ಹೊರಬಿಡುವ ಪ್ರಕ್ರಿಯೆಯು ನಿಯಮಬದ್ಧವಾಗಿ ನಡೆಯಬೇಕು. ಸ್ವಲ್ಪ ವ್ಯತ್ಯಾಸವಾದರೂ ಆಯಾಸವಾಗಬಹುದು. ಕೆಲವು ಬಾರಿ ನೀರಿನಲ್ಲಿ ಮುಳುಗುವ ಸಾಧ್ಯತೆಯೂ ಇರುತ್ತದೆ. ಅದಕ್ಕಿಂತಲೂ ಕಷ್ಟದ ವಿದ್ಯೆಯೆಂದರೆ ಮುಳುಗುವ ವಿದ್ಯೆ. ಈಜುವುದಕ್ಕಿಂತ ಮುಳುಗುವುದು ಸುಲಭ ಅಲ್ಲವೇ ಎಂದು ಕೇಳುವವರಿದ್ದಾರೆ.
ಆದರೆ ನೂರು ಜನ ಈಜು ಕಲಿತರೆ ಅದರಲ್ಲಿ ಒಂದೆರಡು ಮಂದಿ ಮಾತ್ರ ಮುಳುಗುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಈಜುವವನಿಗೆ ಈಜಲು ಮಾತ್ರ ತಿಳಿದಿದ್ದರೆ ಸಾಕು. ಆದರೆ ಮುಳುಗುತಜ್ಞ ಈಜನ್ನೂ ಬಲ್ಲವನಾಗಿರಬೇಕು; ಮುಳುಗುವ ವಿದ್ಯೆಯನ್ನೂ ಬಲ್ಲವನಾಗಿರಬೇಕು. ಈ ಎರಡೂ ವಿದ್ಯೆಗಳನ್ನು ಕರಗತ ಮಾಡಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಬಹುದು ಎಂಬುವುದನ್ನು ತೋರಿಸಿಕೊಟ್ಟವರು ಮಡಿ ದಿನೇಶ್ ಖಾರ್ವಿ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ತಮ್ಮ ಸಮಾಜ ಸೇವೆಯ ಮೂಲಕವೇ ಗುರುತಿಸಿಕೊಂಡವರು. ಸಮುದ್ರ, ನದಿ, ಜಲಪಾತ, ಅಣೆಕಟ್ಟು ಮುಂತಾದ ಜಾಗಗಳಲ್ಲಿ ನೀರುಪಾಲಾದ ಸುಮಾರು 40 ಕ್ಕೂ ಹೆಚ್ಚು ಹೆಣಗಳನ್ನು ಇವರು ಹೊರತೆಗೆದಿದ್ದಾರೆ.
ಪಚ್ಚಿಲೆ ಅಥವಾ ಕಡಲ ಮೊಳಿ ಎಂದು ಕರೆಯಲ್ಪಡುವ ಚಿಪ್ಪು ಜೀವಿ ಸಮುದ್ರದಲ್ಲಿ ಮುಳುಗಿರುವ ಬಂಡೆಗಳ ಮೇಲೆ ಬೆಳೆಯುತ್ತದೆ. ನೀರಿನಲ್ಲಿ ಮುಳುಗಿ ಆ ಪಚ್ಚಿಲೆಯನ್ನು ತೆಗೆಯುವ ಕಾಯಕ ಮಾಡುವ ಹತ್ತಾರು ಪರಿಣಿತ ಯುವಕರು ನಮ್ಮ ಊರಿನಲ್ಲಿದ್ದರು. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಈ ರೀತಿಯಲ್ಲಿ ಮುಳುಗಿ ಪಚ್ಚಿಲೆ ತೆಗೆಯುವವರು ನಮಗೆ ದೈತ್ಯ ಪ್ರತಿಭೆಯಂತೆ, ಸೂಪರ್ ಮ್ಯಾನ್‌ಗಳಂತೆ ಗೋಚರಿಸುತ್ತಿದ್ದರು. ಮರ್ಗಿ ದೋಣಿಯಲ್ಲಿ ಹೋಗಿ ಪಚ್ಚಿಲೆ ತೆಗೆದು ಬಂದವರ ಸುತ್ತ ನಿಂತು ನಾವು ಮುಳುಗುವ ಕುರಿತು ಹತ್ತು ಹಲವು ಪ್ರಶ್ನೆ ಕೇಳುತ್ತಿದ್ದೆವು. ಅವರ ಉತ್ತರ ಕೇಳುತ್ತಾ ಕೇಳುತ್ತಾ ರೋಮಾಂಚನಗೊಳ್ಳುತ್ತಿದ್ದೆವು. ಮಡಿ ನಮ್ಮೂರಿನಿಂದ ಎರಡು ಕಿ.ಮೀ.ದೂರದಲ್ಲಿರುವ ಊರಾದರೂ ಮೀನುಗಾರಿಕೆಯ ವಿಚಾರದಲ್ಲಿ ಕಂಚುಗೋಡಿಗೂ, ಮಡಿಗೂ ಅವಿನಾಭವ ಸಂಬAಧ ಇದೆ.
ನಮ್ಮೂರಿನ ಕಡಲಿನ ಬಂಡೆಗಳಲ್ಲಿ ಸಮೃದ್ಧ ಬೆಳೆಯುತ್ತಿದ್ದ ಪಚ್ಚಿಲೆಯ ಆಕರ್ಷಣೆಗೆ ಸುತ್ತಮುತ್ತಲಿನ ಊರುಗಳ ಅನೇಕ ಯುವಕರು ನಮ್ಮೂರಿಗೆ ಬರುತ್ತಿದ್ದರು. ಹಾಗೆ ಬಂದವರಲ್ಲಿ ಮಡಿ ದಿನೇಶ್ ಖಾರ್ವಿಯೂ ಒಬ್ಬರು. ಸಮುದ್ರದಲ್ಲಿ ಒಂದೆರಡು ಗಂಟೆಯ ಅವಧಿಯಲ್ಲಿ ನೂರಾರು ಬಾರಿ ಮುಳುಗಿ ಪಚ್ಚಿಲೆ ತೆಗೆಯುತ್ತಿದ್ದ ಇವರಿಗೆ ಮುಳುಗುವ ವಿದ್ಯೆ ಕರಗತವಾಗಿತ್ತು. ಇದೇ ವಿದ್ಯೆಯನ್ನು ಅವರು ಇನ್ನೊಬ್ಬರ ಒಳಿತಿಗಾಗಿ ಉಪಯೋಗಿಸಿಕೊಂಡಿದ್ದು ವಿಶೇಷ. ನೆಲದ ಮೇಲೆ ಅವಘಡ ನಡೆದಾಗ, ಯಾರಾದರು ಸತ್ತಾಗ ಅವರ ಹೆಣವನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ ನೀರಿನಲ್ಲಿ ಬಿದ್ದು ಜೀವ ಕಳೆದುಕೊಂಡರೆ ಅವರನ್ನು ಹುಡುಕುವುದೇ ಒಂದು ಹರಸಾಹಸ. ಏಕೆಂದರೆ ನೀರಿನಲ್ಲಿ ಬಿದ್ದುವರು ಅದೇ ಜಾಗದಲ್ಲಿ ಸಿಗುವುದಿಲ್ಲ.
ನೀರಿನ ಪ್ರವಾಹ ಯಾವ ಕಡೆಯಲ್ಲಿ ಇರುವುದೋ ಆ ಕಡೆ ಅದು ಸೆಳೆದೊಯ್ಯುವುದು. ಅಂತಹ ಪ್ರವಾಹದ ದಿಕ್ಕನ್ನರಿತು, ನೀರಿನಲ್ಲಿ ಮುಳುಗಿ ಶವಗಳನ್ನು ಹೊರಗೆ ತೆಗೆಯುವ ಕಾಯಕದಲ್ಲಿ ನಿರತರಾದವರು ದಿನೇಶ್ ಖಾರ್ವಿಯವರು. ಮೊದಮೊದಲು ವರ್ಷಕ್ಕೆ ಒಂದೋ, ಎರಡೋ ಶವಗಳನ್ನು ಹೊರತೆಗೆಯುತ್ತಿದ್ದ ಇವರು ಇಂದು ಬಹುಬೇಡಿಕೆಯ ಮುಳುಗುವೀರ. ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರು ತಾಲೂಕುಗಳಲ್ಲಿ ಯಾವುದೇ ಸ್ಥಳದಲ್ಲಿ ನೀರಿನಲ್ಲಾಗುವ ಅವಘಡಗಳಿಗೆ ಇವರನ್ನೇ ಮೊದಲು ಸಂಪರ್ಕಿಸುತ್ತಾರೆ. ಹಗಲು ರಾತ್ರಿಯೆನ್ನದೆ ಯಾವುದೇ ಸಮಯದಲ್ಲಿ ಇವರನ್ನು ಕರೆದರೂ ಆ ಸ್ಥಳಕ್ಕೆ ಹಾಜರು. ಇತ್ತೀಚೆಗೆ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ಕಾಲುಸಂಕದ ಮೇಲೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಮಗುವೊಂದು ತೋಡಿಗೆ ಬಿದ್ದು ಕೊಚ್ಚಿಕೊಂಡು ಹೋದ ಘಟನೆ ಎಲ್ಲರಿಗೂ ತಿಳಿದೇ ಇದೆ.
ಆ ಘಟನೆಯಾದ ನಂತರ ಮಗುವಿನ ಶವದ ಹುಡುಕಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಉಡುಪಿ ಉತ್ತರ ಕನ್ನಡದಲ್ಲಿ ರಾತ್ರೋರಾತ್ರಿ ಮಳೆಸುರಿದು ಬಂದರಿನಲ್ಲಿ, ಸಮುದ್ರ ದಂಡೆಯಲ್ಲಿ ನಿಲ್ಲಿಸಿದ್ದ ದೋಣಿಗಳು ಸಮುದ್ರಪಾಲಾದ ಸಂದರ್ಭದಲ್ಲೂ ಇವರು ಸಮುದ್ರದಲ್ಲಿ ತೇಲುತ್ತಿದ್ದ, ಮುಳುಗಿದ್ದ ದೋಣಿಗಳನ್ನು ದಡಕ್ಕೆ ತರುವಲ್ಲಿ ಶ್ರಮಿಸಿದ್ದರು. ಮರವಂತೆಯ ರಾಷ್ಟೀಯ ಹೆದ್ದಾರಿಯಿಂದ ಸಮುದ್ರಕ್ಕೆ ಬಿದ್ದ ಕಾರನ್ನು ಎಳೆದು ತೆಗೆದು, ಅದರಿಂದ ಶವಗಳನ್ನು ತೆಗೆದವರೂ ಇವರೇ.
ಭಾರತೀಯ ಸಂಸ್ಕೃತಿಯಲ್ಲಿ ಹೆಣದ ಜೊತೆಯೂ ಒಂದು ಭಾವನಾತ್ಮಕ ಸಂಬAಧ ಇರುತ್ತದೆ. ಕೆಲವು ಅವಘಡಗಳಲ್ಲಿ ಹೆಣ ಸಿಗಲು ಒಂದೆರಡು ದಿನಗಳಿಂದ ಹಿಡಿದು ಹತ್ತು-ಹದಿನೈದು ದಿನಗಳವರೆಗೆ ತಡವಾಗುತ್ತದೆ. ಅಷ್ಟು ದಿನಗಳವರೆಗೆ ಆ ಮನೆಯವರ ಸಂಕಟ, ನೋವು ಯಾರಿಗೂ ಹೇಳಲಾಗದು. ಕೊನೆಯ ಬಾರಿ ನೋಡಬೇಕೆಂಬ ಮನೆಯವರ ಹಂಬಲ, ಹೆಣ ಸಿಕ್ಕರೆ ಮಾತ್ರ ಆ ವ್ಯಕ್ತಿಗೆ ಮೋಕ್ಷ ಸಿಗುತ್ತದೆ ಎಂಬ ಬಲವಾದ ನಂಬಿಕೆ ಅವರನ್ನು ಚಿಂತೆಗೀಡು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ದಿನೇಶ್ ಅವರು ಆಪತ್ಬಾಂಧವರಾಗಿ ಬರುತ್ತಾರೆ. ಅಬ್ಬರಿಸುವ ಸಮುದ್ರವೇ ಇರಲಿ, ಸುಳಿಗಳಿರುವ ನದಿಯೇ ಇರಲಿ, ಗಿಡಗಂಟಿಗಳಿAದ ಮುಚ್ಚಿರುವ ಬಾವಿಯೇ ಇರಲಿ ಯಾವುದನ್ನು ಲಕ್ಷಿಸದೆ ಹೆಣವನ್ನು ಹೊರಸೆಳೆಯುತ್ತಾರೆ. ಒಮ್ಮೊಮ್ಮೆ ರಾತ್ರಿಯ ವೇಳೆಯಲ್ಲೂ ನೀರಲ್ಲಿ ಮುಳುಗಿದ ಹೆಣವನ್ನು ಕೇವಲ ಕೈ ಸ್ಪರ್ಶದಿಂದಲೇ ತಡಕಾಡಿ, ಎಳೆದುಕೊಂಡು ಬರುತ್ತಾರೆ.
ತಮ್ಮ ಉಸಿರನ್ನು ಬಿಗಿಹಿಡಿದು ನೀರಿನಲ್ಲಿ ಮುಳುಗಿ ಶವವನ್ನು ಹೊರಸೆಳೆಯುವ ಇವರಿಗೆ ಒಂದು ಕೊರಗಿದೆ. ತುಂಬಾ ಆಳದಲ್ಲಿರುವ ಶವಗಳನ್ನು ಹೊರೆತೆಗೆಯಬೇಕಾದರೆ ಅದಕ್ಕೆ ಬೇಕಾದ ಪರಿಕರಗಳು ಇವರ ಬಳಿಯಲ್ಲಿ ಇಲ್ಲ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಂತಹ ಉಪಕರಣವನ್ನು ಖರೀದಿಸುವ ಶಕ್ತಿಯೂ ಅವರಿಗಿಲ್ಲ. ಸರಕಾರವೋ, ಸಂಘಸAಸ್ಥೆಗಳೋ ಅವರಿಗೆ ಮುಳುಗಲು ಬೇಕಾದ ಸಾಧನಗಳನ್ನು ಒದಗಿಸಿದರೆ ಅವರು ಇನ್ನಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡಲು ಸಾಧ್ಯ.
ಸಾಮಾನ್ಯವಾಗಿ ಸಮುದ್ರ ಪ್ರಕ್ಷುಬ್ಧಗೊಂಡಾಗ, ನದಿಗಳು ಉಕ್ಕೇರಿ ಹರಿಯುವಾಗಲೇ ಜಲ ದುರಂತಗಳು ಸಂಭವಿಸುತ್ತದೆ. ಅಂತಹ ಸಂದರ್ಭದಲ್ಲಿ ದಿನೇಶ್ ಖಾರ್ವಿಯಂತವರು ತಮ್ಮ ಜೀವದ ಹಂಗನ್ನು ತೊರೆದು ಕಾಯಕದಲ್ಲಿ ನಿರತರಾಗುತ್ತಾರೆ. ತಮ್ಮ ಜೀವವನ್ನು ಒತ್ತೆಯಿಟ್ಟು ಸೇವೆ ಮಾಡುವ ಇಂತವರ ಜೀವಕ್ಕೆ ಸುರಕ್ಷತೆಯನ್ನು ಒದಗಿಸುವುದು ಸರಕಾರದ ಜವಾಬ್ದಾರಿಯೂ ಕೂಡ. ಸರ್ಕಾರವು ನಮ್ಮ ಕರಾವಳಿಯಲ್ಲಿರುವ ಇಂತಹ ಜೀವರಕ್ಷಕ ಯುವಕರ ತಂಡಕಟ್ಟಿ, ಅವರ ಜೀವನಕ್ಕೆ ಭದ್ರತೆಯನ್ನು ಒದಗಿಸಿ, ಸರಿಯಾದ ಮಾರ್ಗದರ್ಶನ ನೀಡಿ, ಜೀವರಕ್ಷಣಾ ಸಾಧನಗಳನ್ನು ಪೂರೈಸಬೇಕು. ಹಾಗೆ ಮಾಡಿದರೆ ನೀರಿನಲ್ಲಿ ಮುಳುಗುವವರ, ಸಾಯುವವರ ಸಂಖ್ಯೆಯೂ ಕಡಿಮೆಯಾಗಬಹುದು; ಮಡಿದರೂ ಅಂತವರ ಹೆಣಗಳನ್ನು ಸಕಾಲಕ್ಕೆ ಸಂಬAಧಪಟ್ಟವರಿಗೆ ಹಸ್ತಾಂತರಿಸಬಹುದು.