ಸಾಲಿಗ್ರಾಮ ಶ್ರೀ ಚಕ್ರ ಮಹಿಮೆ.

ರಾಜ ಚಂದ್ರಹಾಸ

ದೇವರ ಪೂಜೆಯಲ್ಲಿ
ವ್ರತ ನಿಯಮ ಅನುಷ್ಠಾನ ಆಚರಣೆಗಳಲ್ಲಿ ಭಯವೇಕೆ ?
ಸಾಲಿಗ್ರಾಮ ಶ್ರೀಚಕ್ರ ಅಥವಾ ಇನ್ಯಾವುದೇ ವಿಶೇಷ ಸಾನಿಧ್ಯವಿರುವ ದೇವರ ಪ್ರತೀಕಗಳನ್ನು ಪೂಜೆ ಮಾಡಲು ಕೆಲವರು ನಾನಾ ರೀತಿಯಲ್ಲಿ ಯೋಚಿಸುತ್ತಾರೆ? ಪ್ರಶ್ನಿಸುತ್ತಾರೆ…. ಅವರಿಗೆ ಈ ಕಥೆಯ ಮೂಲಕ ಉತ್ತರ ಹೇಳಲು ಬಯಸುತ್ತೇನೆ……

ಅನಾಥ ಮಗುವೊಂದನ್ನು ದಾದಿಯೊಬ್ಬಳು ಪೋಷಿಸುತ್ತಿದ್ದಳು. ಅವರಿವರ ಮನೆಗಳಲ್ಲಿ ಹಾಲು-ಬೆಣ್ಣೆಯನ್ನು ತಂದು ಮಗುವನ್ನು ಸಂರಕ್ಷಿಸುತ್ತಿದ್ದಳು.
ಮಗು ಮೂರು, ನಾಲ್ಕು ವಯಸ್ಸಿದ್ದಾಗ ಆ ದಾದಿಯು
ದುರಾದೃಷ್ಟ ವಶಾತ್ ತೀರಿಕೊಂಡಳು. ಮುದ್ದು ಹುಡುಗನಿಗೆ ಯಾರು ದಿಕ್ಕಿಲ್ಲದಂತಾಯಿತು. ಪುರದ ನಾರಿಯರೇ ಆ ಅನಾಥ ಹುಡುಗನನ್ನು ಸಾಕುತ್ತಿದ್ದರು.
ಒಬ್ಬರ ಮನೆಯಲ್ಲಿ ಊಟ…. ಒಬ್ಬರ ಮನೆಯಲ್ಲಿ ತಿಂಡಿ… ಎಲ್ಲೋ ಒಂದು ಕಡೆ ನಿದ್ದೆ ಹೋದರೆ ಆಯಿತು.
ದಿನ ಕಳೆಯಿತು.
ಊರಿನ ಇತರ ಮಕ್ಕಳೊಂದಿಗೆ ಆಟ-ಪಾಠ ಇಷ್ಟೇ ಆ ಮಗುವಿನ ಬೆಳವಣಿಗೆ.

ಒಂದು ದಿನ ಮಕ್ಕಳೆಲ್ಲರೂ ಸೇರಿ ಗೋಲಿ ಆಡುತ್ತಿದ್ದರು.
ಈ ಮಗುವಿನಲ್ಲಿ ಗೋಲಿಗಳಿಲ್ಲ. ಮಣ್ಣಿನಿಂದ ಗೋಲಿಗಳನ್ನು ಮಾಡಿ ಅದನ್ನೆ ತಂದು ಇತರ ಮಕ್ಕಳೊಂದಿಗೆ ಗೋಲಿ ಆಡುತ್ತಿರಲು ಪ್ರತಿಬಾರಿಯೂ ಆ ಮಣ್ಣಿನ ಗೋಲಿ ಒಡೆದು ಹೋಗುತ್ತಿತ್ತು.
ಸೋತ ಮಗುವಿಗೆ ಮಕ್ಕಳೆಲ್ಲರೂ ನಿಜದ ಗೋಲಿಯನ್ನು ಕೊಡುವಂತೆ ಹೊಡೆಯಲು ಮುಂದಾದರು. ಭಯದಿಂದ ಮಗು ಓಡುತ್ತ ಓಡುತ್ತ ಪಾಳುಬಿದ್ದ ಒಂದು ದೇವಾಲಯದ ಒಳಗೆ ಓಡಿತು. ಅದು “ನರಸಿಂಹ ದೇವಾಲಯ”ವಾಗಿದ್ದರಿಂದ ಮಕ್ಕಳು ಭಯಪಟ್ಟು ಒಳಗೆ ಹೋಗದೇ ಹಿಂತಿರುಗಿ ಹೋದರು.
ಆರೇಳು ವರ್ಷದ ಮಗು ಹಸಿವೆಯಿಂದ ಭಯದಿಂದ ಬಹುವಾಗಿ ಅಳುತ್ತಾ ಪಾಡು ದೇವಾಲಯದ ನರಸಿಂಹಸ್ವಾಮಿ ವಿಗ್ರಹವನ್ನು ಹಿಡಿದುಕೊಂಡು ತನ್ನ ತಾಯಿಯೋ ಎಂಬಂತೆ ಬಹುವಾಗಿ ಅತ್ತಿತ್ತು.
ಅಳುತ್ತಾ ಅಳುತ್ತಾ ಅದರ ಕಣ್ಣೀರು ಕೆಳಗಡೆ ಇರುವ ಲಕ್ಷ್ಮಿನರಸಿಂಹ ಸಾಲಿಗ್ರಾಮದ ಮೇಲೆ ಅಭಿಷೇಕವಾಯಿತು. ಪರಮಾತ್ಮ ಹಾಗೆ ತನಗೆ ಬೇಕಾದವರನ್ನು ತನ್ನ ಬಳಿ ಕರೆಸಿಕೊಂಡು ಅಥವಾ ತಾನೇ ಅವರಿದ್ದಲ್ಲಿಗೆ ಹೋಗಿ ಅವರನ್ನು ರಕ್ಷಿಸುತ್ತಾನೆ “ಅನಾಥಬಂಧು”( ಶ್ರೀರಾಮನೇ ಶಬರಿ ಇದ್ದಲ್ಲಿಗೆ ಹೋಗುವಂದದಿ)
ಮಗುವಿನ ಕಣ್ಣೀರಿನ ಒಂದು ಬಿಂದು ಸಾಲಿಗ್ರಾಮಕ್ಕೆ ತಾಕಿದ ಒಡನೆಯೇ ಕ್ಷೀರಸಾಗರದಲ್ಲಿ ಕ್ಷೀರವೇ ಉಕ್ಕೇರಿ ಬಂತು. ಸಾನುರಾಗದಿಂದ ಪರಮಾತ್ಮನ ಸೇವೆ ಮಾಡುವ ಲಕುಮಿದೇವಿಯು ಒಡನೆಯೇ ಜಗತ್ತಿಗೆ ಒಡೆಯನಾದ ರಮಾಪತಿ ಗೆ ಇಂತು ನಿವೇದಿಸಿದಳು..
“ಮಗುವನ್ನು ಕಾಪಾಡಿ”
ಲಕ್ಷ್ಮಿಯ ಅನುಕಂಪ ಬ್ರಹ್ಮನ ಬರಹವನ್ನೇ ಬದಲಾಯಿಸಬಲ್ಲದು… ಜಗತ್ತಿಗೆ ತಾಯಿಯಲ್ಲವೇ…
ಪ್ರಕೃತಿಯಲ್ಲವೇ ,
ಮಾಹಾಮಾಯೆ ಆದಿಶಕ್ತಿ….
ಪುರಂದರದಾಸರು ಹೇಳಿದಂತೆ
“ಒಂದು ಬಿಂದು ಗಂಗೋದಕ ಸಾಕು ಮಾಧವ”ನನ್ನು ಒಲಿಸಲು. ಹೌದು ಸಾವಿರಾರು ಕಲಶ ಗಂಗೆಯನ್ನು ಸುರಿದರು ಒಲಿಯದಿರಬಹುದು ಗಂಗಾಜನಕ. (ಗಂಗೆಯಲ್ಲಿ ಸಾವಿರಾರು ಜೀವಜಂತುಗಳಿರುವಂತೆ.)
ಆದರೆ ಮನದೊಳಗೆ ಭಾವನಾತ್ಮಕವಾಗಿ ಕಣ್ಣಿಂದ ಹೊರಗೆ ಬರುವ ಒಂದು ಬಿಂದು ಗಂಗೋದಕ ಸಾಕು. ಮನದೊಳಗೆ ಇದೆ ಮಾಧವನನ್ನು ಮೆಚ್ಚಿಸುವ ಗಂಗೆ.
ಅನಂತ ಕಲ್ಯಾಣ ಗುಣಪರಿಪೂರ್ಣ ಕ್ಷೀರಾಬ್ಧಿಶಾಹಿ
ಪರಮಾತ್ಮ ಒಡನೆಯೇ ನಕ್ಕ. ಬೀಸಿದಳು ಮಾಯೆ ಹರಿಯ ಕರುಣೆಯಲಿ ಅವನ ಮನದರಸಿ.

ಬೆಳಗಾಯಿತು ಮಗುವಿಗೆ ಎಚ್ಚರವಾಯಿತು.( ನಮಗೂ ಆಗಬೇಕು ಈ ಎಚ್ಚರ)
ಕೈಯ ಬಳಿಯಲ್ಲಿ ಏನೋ ಒಂದು ಗುಂಡಗಿನ ಕಪ್ಪಗಿನ
ಗೋಲಿಯಂತೆ ಇದ್ದ ಲಕ್ಷ್ಮಿ ನರಸಿಂಹ ಸಾಲಿಗ್ರಾಮ
ಮಗುವಿಗೆ ಸಿಕ್ಕಿತು. ಖುಷಿಯಿಂದ ಮಗುವು ನಕ್ಕು ನಲಿದು ನನಗೆ ಆಡಲು ಗೋಲಿ ಸಿಕ್ಕಿತು. ಎಂದು ಅದನ್ನು ಹಿಡಿದುಕೊಂಡು ಮತ್ತೆ ಮಗು ಪುರಕೆ ಮರಳಿತು.
ಕಪಟ ನಾಟಕ ಸೂತ್ರಧಾರಿಯ ಆಟ ಆರಂಭವಾದ ಮೇಲೆ ಇನ್ನೆಲ್ಲಾ ಆಟದಲ್ಲೂ ಗೆಲುವು. ಸಹಜವಾಗಿಯೇ ಮಗು ನಿತ್ಯವೂ ಎಲ್ಲ ಆಟದಲ್ಲಿ ಗೆಲ್ಲಲು ಆರಂಭಿಸಿತು.
ನಮ್ಮ ಬದುಕಿನ ಆಟವು ಹಾಗೆಯೇ ಅವನಿದ್ದರೆ; ಒಲಿದರೆ ಗೆಲುವು.
ಸಂಧ್ಯಾಕಾಲ ಮಕ್ಕಳೆಲ್ಲ ಸಂಜೆ ಗೋಲಿಯಾಟ ಆಡುತ್ತಿರಲು ಈ ಮಗುವಿನ ಕೈಯಲ್ಲಿರುವ ಕಪ್ಪಗಿನ ಹೊಳೆಯುವ ಗೋಲಿಯನ್ನು ದಾರಿಯಲ್ಲಿ ನಡೆದು ಸಾಗುತ್ತಿದ್ದ ಅರ್ಚಕರೊಬ್ಬರು ನೋಡಿ ಅದು ಸಾಲಿಗ್ರಾಮ ಶಿಲೆ ಮತ್ತು ಅದರ ಮಹತ್ತನ್ನು ಮಗುವಿಗೆ ಹೇಳುವ ಪ್ರಯತ್ನ ಮಾಡಿದರು. ನಿತ್ಯ ಪೂಜೆ ,ಅಭಿಷೇಕ, ನೈವೇದ್ಯ……ಹೀಗೆ
ಆರೇಳು ವರ್ಷದ ಮಗುವಿಗೆ ಶಾಸ್ತ್ರದ ಚೌಕಟ್ಟು ಹೇಗೆ ಅರ್ಥವಾಗಲು ಸಾಧ್ಯ.( ಒಂದರ್ಥದಲ್ಲಿ ನಾವು ಕೂಡ ಮಗುವಿನ ಹಾಗೆ ) ಆದರೂ ತನಗೆ ದೇವರು ಕೊಟ್ಟದ್ದು ಎನ್ನುವ ಒಂದೇ ಒಂದು ಶ್ರದ್ಧೆ ಮಗುವಿನಲ್ಲಿ ಪೂರ್ಣತೆಯ ಜ್ಞಾನ ಪ್ರತಿಧ್ವನಿಸಿತು.
ಎಲ್ಲವೂ ಮರೆಯಿತು ಆದರೆ ನಿತ್ಯ ಅಭಿಷೇಕ ನೆನಪಿನಲ್ಲಿತ್ತು. ಹೇಗೆ ಮಾಡಲಿ ???

ಎಲ್ಲರಿಗೂ ಈ ರೀತಿ ಪ್ರಶ್ನೆ ಮೂಡುವುದು ಸಹಜ.
ಮನದೊಳಗೆ ಮಾಧವನು ಇರುವನು
ಮಾರ್ಗದರ್ಶನ ನೀಡುವ…
ಮನಸ್ಸಿನಲ್ಲಿ ಪೂಜೆ ಮಾಡಬೇಕೆಂಬ ಹಂಬಲ; ದೃಢವಾದ ಭಕ್ತಿ ;ನಿಷ್ಠೆ ಇದ್ದರೆ ಪರಮಾತ್ಮನೇ ಅನುಗ್ರಹ ನೀಡಲಿಕ್ಕಾಗಿ ಯಾರಿಂದ-ಯಾವ ಸಮಯದಲ್ಲಿ ಪೂಜೆ ಪಡೆಯಬೇಕು ಎಂಬ ನಿರ್ಧಾರವನ್ನು ಮಾಡುತ್ತಾನೆ
ನಾವೆಲ್ಲರೂ ಇಲ್ಲಿ ನಿಮಿತ್ತ ಮಾತ್ರ
ನ ಋತೇ ತ್ವತ್ ಕ್ರಿಯತೇ | ಕಿಞ್ಚನಾರೇ ಮಹಾಮರ್ಕಂ ಮಘವಞ್ಚಿತ್ರಮರ್ಚ || (ಋಗ್ವೇದ)

“ಶ್ರದ್ಧಾವಾನ್ ಲಭತೇ ಜ್ಞಾನಂ”
ಎನ್ನುವ ಉಕ್ತಿ ಯಂತೆ ಶ್ರದ್ದೆ ಇದ್ದರೆ ಪರಮಾತ್ಮನೇ ನಮಗೆ ಹೇಗೆ ಮುಂದೆ ಪೂಜೆ ಮಾಡಬೇಕು ಎಂಬ ಜ್ಞಾನವನ್ನು ಪ್ರಚೋದಿಸುತ್ತಾನೆ.
ಶ್ರದ್ಧೆಯಿಂದ ಮಾಡಿದ ಎಲ್ಲಾ ಕಾರ್ಯಗಳು ಕೂಡಾ ದೇವರ ಪೂಜೆಗೆ ಸಮಾನ.
ಕ್ರಮೇಣ ಈ ಶ್ರದ್ಧೆಯೇ ನಮಗೆ ಜ್ಞಾನವನ್ನು ತಂದುಕೊಡುತ್ತದೆ.
ಭಕ್ತಿಯಿಂದ ಜ್ಞಾನ ಜ್ಞಾನದಿಂದ ಮತ್ತಷ್ಟು ಭಕ್ತಿ
ಭಕ್ತಿ ಜ್ಞಾನಗಳೆರಡೂ ಸತ್ಕರ್ಮಗಳನ್ನು ನಮ್ಮಿಂದ ಮಾಡಿಸುತ್ತವೆ.

ಕೆಲವೊಮ್ಮೆ ನಮ್ಮ ಒಳಗಿನಿಂದಲೇ ಮೂಡಬಹುದಾದ ಸಚ್ಚಿಂತನೆಗಳೇ ನಮ್ಮ ಜೀವನದ ಮಾರ್ಗದರ್ಶಕ ಗಳಾಗಬಹುದು
ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುಗಳು ಕೂಡ ಒಮ್ಮೊಮ್ಮೆ ನಮಗೆ ಕೆಲವು ಸೂಚನೆಗಳನ್ನು ನೀಡುತ್ತಲೇ ಇರುತ್ತವೆ.ಎಚ್ಚರದಿಂದ ಗಮನಿಸಿದರೆ ಪ್ರತಿಯೊಂದು ಕೂಡ ಪರಮಾತ್ಮನ ಮಾತುಗಳೇ ಆಗಿವೆ. ಗಮನಿಸುವ ಕಣ್ಣುಗಳನ್ನು ಮಾತ್ರ ನಾವು ತೆರೆಯಬೇಕಾಗಿದೆ. (ಒಂದರ್ಥದಲ್ಲಿ ಇದು ಉಪ-ನಯನ) ಸುಮ್ಮ ಸುಮ್ಮನೆ ಯಾವುದೇ ವಸ್ತು -ವಿಷಯ- ಜೀವಿಗಳು ಕೂಡ ನಮ್ಮೊಡನೆ ಇರಲು ಸಾಧ್ಯವಿಲ್ಲ (ಅದಕ್ಕೆ ಹಿರಿಯರು ಹೇಳಿದ್ದು ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ)

ಆ ಮಗುವಿಗೆ ಯೋಚನೆಯೊಂದು ಹೊಳೆಯಿತು ಸಾಲಿಗ್ರಾಮದ ಅಭಿಷೇಕಕ್ಕಾಗಿ ನಿರಂತರ ನೀರು ಸಿಗುವ ಜಾಗ ಒಂದೇ ಅದು ತನ್ನ ಬಾಯಿ.
(ಮುಗ್ಧ ಮನಸ್ಸು ಪರಮಾತ್ಮನ ಪ್ರಚೋದನೆ)
ಹೌದು ಮಗು ಸಾಲಿಗ್ರಾಮವನ್ನು ತನ್ನ ಬಾಯೊಳಗೆ ಇಟ್ಟುಕೊಂಡು ನಿರಂತರ ಅವನ ಬಗ್ಗೆ ಚಿಂತಿಸಲು ಆರಂಭಿಸಿತು. ಅದನ್ನೇ ಪೂಜೆಯೆಂದು ಆರಾಧಿಸತೊಡಗಿತು.

ಮಲಗಿ ಪರಮಾದರದಿ ಪಾಡಲು|
ಕುಳಿತು ಕೇಳುವ…|
ಕುಳಿತು ಪಾಡಲು ನಿಲುವ,
ನಿಂತರೆ ನಲಿವ.. ನಲಿದರೆ ಒಲಿವೆ
ನಾ ನಿಮಗೆಂಬಾ….||
ಸುಲಭನೋ ಹರಿ ತನ್ನವರನು
ಅರೆಗಳಿಗೆ ಬಿಟ್ಟಗಲನೋ…|
ರಮಾಧವನ ಒಲಿಸಲರಿಯದೆ
ಪಾಮರರು ಬಳಲುವರು
ಭವದೊಳಗೆ…||

ಪುರಂದರದಾಸರು ಹೇಳಿದಂತೆ
ಪರಮಾತ್ಮನು ನಮ್ಮ ಭಕ್ತಿಯನ್ನು ನೋಡಿ ಪ್ರೀತನಾಗುತ್ತಾನೆಯೇ ಹೊರತು ಶೈಲಿಯನ್ನಲ್ಲ. ಆಡಂಬರಗಳನ್ನಲ್ಲ. ಆದರೆ ಇದು ಅನ್ವಯವಾಗುವುದು ಅವರ ಅವಸ್ಥೆಯ ಅನುಸಾರವಾಗಿ. ಕಾಯಿಲೆಯಿಂದ ಹಾಸಿಗೆ ಹಿಡಿದವ ಮಲಗಿ ಕೃಷ್ಣನ ಸ್ಮರಿಸಿದರೂ ಒಲಿವನು. ಭೀಷ್ಮರು ಶರಶಯ್ಯೆಯಲ್ಲಿ ಇದ್ದಾಗಲೇ ವಿಷ್ಣು ಸಹಸ್ರನಾಮದಲ್ಲಿ ಪರಮಾತ್ಮನನ್ನು ಸ್ತುತಿಸಿದರು. ಭೀಷ್ಮರ ಸ್ತುತಿಯನ್ನು ಕುಳಿತು ಆಲಿಸಿದ ಶ್ರೀಕೃಷ್ಣ ಅದನ್ನು ಲೋಕವಿಖ್ಯಾತಗೊಳಿಸಿದ. ಪುಂಡಲೀಕನು ಕುಳಿತು ಹೆತ್ತವರ ಸೇವೆ ಮಾಡುತ್ತಾ ಸ್ತುತಿಗೈಯಲು ಪಾಂಡುರಂಗನು ಅವನು ನೀಡಿದ ಇಟ್ಟಿಗೆಯ ಮೇಲೆ ನಿಂತು ಕೇಳಿದ.ವಿಠ್ಠಲನಾದ.
ನಿಂತು ಸ್ತುತಿ ಮಾಡಿದ ಪ್ರಹ್ಲಾದನ ಭಕುತಿಗೆ ಮೆಚ್ಚಿ ಕಂಬದಿ ಬಂದು ಅನುಗ್ರಹಿಸಿದ. (ಕುಲವಾವುದು ಪೂಜೆಗೆ )ಅಂತಹ ಅತಿ ಸುಲಭವಾದ ರಮಾಪತಿಯನ್ನು ಒಲಿಸುವ ಪ್ರಯತ್ನ ಮಾಡದೆ ಪಾಮರರು ಬಳಲುತಿಹರು.
ಹೌದು ನಾವು ಒಂದು ಹೆಜ್ಜೆ ಇಟ್ಟರೆ ಪರಮಾತ್ಮ ಹತ್ತು ಹೆಜ್ಜೆ ಮುಂದೆ ಇಟ್ಟು ನಮಗಾಗಿ ಬರುತ್ತಾನೆ.
ನಾವು ನಮ್ಮ ಕೈಗಳಿಂದ ಅವನಿಗೆ ಅರ್ಪಿಸಿದರೆ ಅವನು ಅವನ ಕೈಗಳಿಂದ ನಮಗೆ ಸಕಲ ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಾನೆ. ವೇದ -ಉಪನಿಷತ್ ಗಳು ಪುರಾಣ ಧರ್ಮಶಾಸ್ತ್ರಗಳು ರಾಮಾಯಣ -ಮಹಾಭಾರತ ಭಗವದ್ಗೀತೆ ಗಳು
ಎಲ್ಲಾ ಧರ್ಮದ ಧರ್ಮಗ್ರಂಥಗಳು
ನಾನಾ ರೀತಿಯ ಪೂಜೆ- ಧಾರ್ಮಿಕ ಆಚರಣೆಗಳ ಚೌಕಟ್ಟು ಭಗವಂತನನ್ನು ಅರ್ಥಮಾಡಿಕೊಳ್ಳಲು ಮತ್ತು ಭಕ್ತಿ- ಜ್ಞಾನ-ವೈರಾಗ್ಯ ಕ್ಕೆ
ನಮ್ಮನ್ನು ಪರಿಪಕ್ವಗೊಳಿಸುವ ಬಹುದೊಡ್ಡ ಮಾರ್ಗದರ್ಶಕಗಳು. ಋಷಿಮುನಿಗಳ ಹಿರಿಯರ ಅನುಭವಗಳು ಇಲ್ಲಿ ವ್ಯಕ್ತವಾಗುತ್ತವೆ. ನಮ್ಮ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಉತ್ತರಗಳಿವೆ. ಆದರೆ ಕೆಲವೊಮ್ಮೆ ಪರಮಾತ್ಮನು ನೇರವಾಗಿಯೇ ನಮ್ಮನ್ನು ಹತ್ತಿರಗೊಳಿಸಲು ತಾನಾಗಿಯೇ ಅವನು ಓಡೋಡಿ ನಮ್ಮ ಬಳಿಗೆ ಬರುತ್ತಾನೆ. ಮಗುವಿನ ವಿಷಯದಲ್ಲೂ ಪರಮಾತ್ಮ ಇದನ್ನೇ ಮಾಡಿದ. ಆ ಮಗುವಿನ ಜೀವನವನ್ನು ಉದ್ಧಾರ ಮಾಡಿದ.
ಆ ಮಗುವೇ ಮುಂದೆ ಇಡೀ ಸಾಮ್ರಾಜ್ಯಕ್ಕೆ ಅರಸನಾಗುತ್ತಾನೆ ಅವನೇ ಕುಂತಳ ದೇಶದ ಮಹಾರಾಜನ ಮಗ ಚಂದ್ರಹಾಸ.
ಚಂದ್ರಹಾಸನ ಚರಿತ್ರೆಯನ್ನು ಕೇಳದವರಿಲ್ಲ.
ಪರಮಾತ್ಮನಾದ ಶ್ರೀ ಕೃಷ್ಣನೇ ಅರ್ಜುನನಿಗೆ ಚಂದ್ರಹಾಸನ ಕಥೆಯನ್ನು ಹೇಳುವುದನ್ನು ನಾವು ಮುಂದಿನ ಭಾಗದಲ್ಲಿ ನೋಡೋಣ.(ಇದನ್ನು ವಿವರಿಸಲು ಹೋದರೆ ಈ ಭಾಗವೇ ದೀರ್ಘವಾಗುತ್ತದೆ ಅದಕ್ಕಾಗಿ ಮುಂದಿನ ಭಾಗದಲ್ಲಿ ಇದನ್ನು ವಿವರಿಸುತ್ತೇನೆ)
ನಮ್ಮ ಕಾಲದ ನಂತರ ಪೂಜೆ ಆರಾಧನೆ-ತಲತಲಾಂತರ ವಾಗಿ ನಡೆಸಿಕೊಂಡು ಬಂದ ಕ್ರಮಗಳನ್ನು ಹೇಗೆ ಮುಂದೆ ನಡೆಸಿಕೊಂಡು ಹೋಗುವುದು ಎಂಬ ಚಿಂತೆಯಲ್ಲಿ ಬಹುತೇಕರು ಪ್ರಶ್ನೆಯನ್ನು ಕೇಳಿದ್ದಾರೆ ಇದನ್ನು ಕೂಡ ನೈಜ ದೃಷ್ಟಾಂತದ ಮೂಲಕ ಮುಂದಿನ ಭಾಗದಲ್ಲಿ ವಿವರಣೆಯನ್ನು ನೀಡುತ್ತೇನೆ.
🕉️ಜೈ ಶ್ರೀ ವೆಂಕಟೇಶ್ ಜ್ಯೋತಿಷಿ 📱9482655011//7975508110📲🙏🙏🙏

Related Posts