ನನ್ನ ಪತ್ನಿಯು ತೀರಿಕೊಂಡು ಇಂದಿಗೆ ಮೂರು ದಿನಗಳಾಗಿದೆ…..
ಆಕೆಯ ಅಂತ್ಯ ಸಂಸ್ಕಾರಕ್ಕೆ ಬಂದಂತಹಾ ಬಂಧು ಮಿತ್ರಾದಿಗಳೆಲ್ಲರೂ, ಒಬ್ಬೊಬ್ಬರಾಗಿ ಮರಳಿದರು….
ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರ ಉಳಿದೆವು…..
ಆಕೆ ಮನೆಯಲ್ಲಿಲ್ಲ ಅಂತ ನಂಬೋದಕ್ಕೇ ನನ್ನಿಂದ ಆಗುತ್ತಿಲ್ಲ…..
ರೀ… ಇಲ್ಲಿ ನೋಡಿ ಅಂತ ನನ್ನ ಹತ್ತಿರ ಓಡೋಡಿ ಬರುವ ದೃಶ್ಯವು ನಿನ್ನೆಯ ಹಾಗೆ ನನಗನಿಸಿತು…
ಒಬ್ಬಳು ಪಾಪ ಹೆಣ್ಣಾಗಿದ್ದಳು ಆಕೆ…. ನನ್ನನ್ನು ಮತ್ತು ಮಕ್ಕಳನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ ಸೋತ ಒಬ್ಬಳು ಪೆದ್ದಿಯಾಗಿದ್ದಳು ಆಕೆ….
ನಮ್ಮ ಮೇಲಿನ ಪ್ರೀತಿಯಿಂದಲೇ ಇರಬಹುದು, ಯಾವತ್ತೂ ನಮ್ಮನ್ನು ಅಗಲಿ ಇದ್ದಿರಲಿಲ್ಲ…. ತನ್ನ ಮನೆಗೆ ಹೋಗುವಾಗಲೂ, ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಆತಂಕದಿಂದ ಓಡೋಡಿ ಮನೆಗೆ ವಾಪಸು ಬರುತ್ತಿದ್ದಳು…
ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗಿಷ್ಟವಿರಲಿಲ್ಲ… ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ ಬದಲಾಗಿ ಆಕೆ ಹೋದರೆ, ನಮಗೆ ಊಟ ತಿಂಡಿ ಮಾಡಿಕೊಡುವವರು ಯಾರು ಎಂಬ ಸ್ವಾರ್ಥತೆಯೇ ಕಾರಣವಾಗಿತ್ತು…
ನಾನು ಮತ್ತು ಮಕ್ಕಳು ರಜಾ ದಿನಗಳಲ್ಲಿ ಟಿ ವಿ ಯ ಮುಂದೆ ಕುಳಿತು ಒಂದೊಂದು ಕಾರ್ಯಕ್ರಮಗಳನ್ನು ನೋಡುತ್ತಾ ಖುಷಿಪಡುವಾಗ, ಆಕೆ ಅಡುಗೆ ಮನೆಯಲ್ಲಿ ಊಟ, ತಿಂಡಿ ಮಾಡುವ ಕಾರ್ಯದಲ್ಲಿ ನಿರತಳಾಗಿರುತ್ತಿದ್ದಳು….
ಈ ಮಧ್ಯೆ ಸ್ವಲ್ಪ ಟಿ ವಿ ನೋಡಲು ಬಂದು ಕುಳಿತರೆ, ಅಮ್ಮಾ ನೀರು… ಲೇ… ಟೀ ಮಾಡಿಕೊಡು ಅಂತ ಹೇಳುತ್ತಾ ನಾವು ಮತ್ತೆ ಆಕೆಯನ್ನು ಅಡುಗೆ ಕೋಣೆಯೊಳಗೇ ಕಳುಹಿಸುತ್ತಿದ್ದೆವು…
ಈಗ ಒಂದು ಕಪ್ ಟೀ ಮಾಡಿಕೊಡುವುದಕ್ಕೋ, ಒಂದು ಗ್ಲಾಸ್ ನೀರು ಕೊಡುವುದಕ್ಕೋ ಆಕೆ ಇಲ್ಲ ಎಂಬ ಕಟು ಸತ್ಯವನ್ನು ನೋವಿನಿಂದ ನಾನು ಅರ್ಥ ಮಾಡಿಕೊಳ್ಳುತ್ತಿದ್ದೇನೆ…
ಯಾವುದಕ್ಕೂ ಆಕೆ ಯಾವತ್ತೂ ದೂರಿರಲಿಲ್ಲ… ಒಂದು ಒಳ್ಳೆಯ ಸೀರೆಯನ್ನು ಕೂಡಾ ನಾನು ಮನಸಾರೆ ಆಕೆಗೆ ಖರೀದಿಸಿ ಕೊಟ್ಟಿರಲಿಲ್ಲ… ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಕರೆದೊಯ್ದಿರಲಿಲ್ಲ… ಕ್ಲಬ್ಬು, ಪಾರ್ಟಿ ಅಂತೆಲ್ಲಾ ತಿರುಗಾಡಿ ತಡರಾತ್ರಿ ಬರುವಾಗ ಯಾಕೆ ತಡವಾಯ್ತು ರೀ ಅಂತ ಕೇಳುತ್ತಿದ್ದ ಆಕೆಯನ್ನು ನಾನು ಲೆಕ್ಕಿಸುತ್ತಿರಲಿಲ್ಲ….
ರೀ… ಕರೆಂಟ್ ಬಿಲ್ ಬಂತು…
ನೋಡಿ ಹಾಲಿನವನ ದುಡ್ಡು ಕೊಡಬೇಕು…
ನೋಡಿ ಪೇಪರಿನವನ ದುಡ್ಡು ಕೊಡುವ ತಾರೀಖು ಮೀರಿದೆ…
ಮಕ್ಕಳ ಫೀಸ್ ನಾಳೆನೇ ಕಟ್ಟಬೇಕು. ಮರೆಯಬೇಡಿ…
ನೋಡಿ… ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗುತ್ತಾ ಬಂತು… ಹಾಗೇ… ಆಕೆಯ ಯಾವುದೇ ಬೇಡಿಕೆಗಳನ್ನು ಹೇಳದೆ, ಉಳಿದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ನೆನಪಿಸುತ್ತಿದ್ದಳು….
ಇನ್ನು ಅಂತಹಾ ನೆನಪಿಸುವಿಕೆ ಯಾವುದೂ ಇರುವುದಿಲ್ಲ…
ತಡರಾತ್ರಿ ಕೆಲಸವನ್ನೆಲ್ಲಾ ಮುಗಿಸಿ ನನ್ನ ಪಕ್ಕ ಬಂದು ಮಲಗುವ ಆಕೆ- ಕಾಲು ನೋಯುತ್ತೆ… ಸೊಂಟ ನೋಯುತ್ತೆ… ಅಂತ ಹೇಳುವಾಗ ನಾನು ಆಕೆಯ ಮಾತುಗಳನ್ನು ಕಡೆಗಣಿಸಿ – ನಿನಗೆ ಮನೆಯಲ್ಲಿ ಕೆಲಸವೇನೂ ಇಲ್ಲವಲ್ಲಾ… ಅದಕ್ಕೆ ಹಾಗೆ ಆಗುತ್ತಿದೆ. ಸುಮ್ನೆ ಮಲಕ್ಕೋ…
ಅಂತ ಹೇಳುವಾಗ ಆಕೆ ಶಬ್ದ ಬಾರದ ಹಾಗೆ ಅಳೋದನ್ನು ಕೇಳಿಸಿದ್ದೆ…
ಕೊನೆಗೊಂದು ದಿನ ಆ ಎದೆ ನೋವು ಹಾರ್ಟ್ ಎಟ್ಯಾಕ್ ನ ರೂಪದಲ್ಲಿ ಆಕೆಯನ್ನು ಮರಳಿಬಾರದ ಲೋಕಕ್ಕೆ ಕರಕ್ಕೊಂಡು ಹೋಗುವಾಗ ಸಮಯವು ತುಂಬಾ ಮೀರಿ ಹೋಯಿತು…
ಆಕೆಯ ನೆನಪುಗಳೊಂದಿಗೆ ಒಂದುವಾರ ದೂಡಿದೆ… ಮನೆಯ ಕೆಲಸ ಅಷ್ಟೊಂದು ಸುಲಭವಲ್ಲಾ ಎಂಬ ಸತ್ಯವನ್ನು ನಾನು ಅರಿಯತೊಡಗಿದೆ… ಸಾರಿಗೆ ಉಪ್ಪಿಲ್ಲ, ಹುಳಿಯಿಲ್ಲ, ಅನ್ನ ಬೆಂದಿಲ್ಲ, ಟೀಗೆ ಸಕ್ಕರೆ ಕಡಿಮೆಯಾಯಿತು… ಅಂತೆಲ್ಲಾ ಆಕೆಯನ್ನು ದೂರಿದ ಕ್ಷಣಗಳನ್ನು ನೆನೆದು ಮರುಗತೊಡಗಿದೆ….
ಸ್ವಲ್ಪ ದಿನಗಳ ನಂತರ ನಾನು ಕೆಲಸಕ್ಕೆ ಹೊರಟೆ….
ಕಪಾಟಿನೊಳಗೆ ಒಗೆದು ಇಸ್ತ್ರಿ ಹಾಕಿ ನೀಟಾಗಿ ಮಡಿಚಿಟ್ಟ ಶರ್ಟ್ ಗಾಗಿ ಹುಡುಕಾಡಿದೆ…
ರೀ… ಇವತ್ತು ಈ ಕಂದು ಬಣ್ಣದ ಶರ್ಟ್ ಧರಿಸಿ ನಿಮಗೆ ತುಂಬಾ ಚೆನ್ನಾಗಿ ಕಾಣಿಸುತ್ತೆ ಅಂತ ಬಾಗಿಲ ಬಳಿ ಬಂದು ಹೇಳುವ ಹಾಗೆ ನನಗನಿಸಿತು….
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನನಗಾಗಿ ಯಾರೂ ಬಾಗಿಲನ್ನು ತೆರೆಯಲಿಲ್ಲ…. ನನ್ನ ಬರುವಿಕೆಗಾಗಿ ಯಾರೂ ನನ್ನನ್ನು ಕಾಯುತ್ತಾ ನಿಂತಿರಲಿಲ್ಲ….
ಯಾಕೆ ಇಷ್ಟು ತಡವಾಗಿ ಬಂದದ್ದು ಅಂತ ಯಾರೂ ಆತಂಕ ವ್ಯಕ್ತಪಡಿಸಲಿಲ್ಲ…..
ಕೊನೆಗೆ ಬಾಗಿಲು ತೆರೆದು ನಾನೇ ಒಳ ಹೋದಾಗ ನಾನು ಬಂದದ್ದು ಕೂಡಾ ಅರಿಯದೆ ಮಕ್ಕಳು ಮೊಬೈಲ್ ನಲ್ಲಿ ಆಟವಾಡುತ್ತಿದ್ದರು… ಅವರ ಪಕ್ಕ ಅಲ್ಲಲ್ಲಿ ಬಿದ್ದಿರುವ ಪುಸ್ತಕಗಳು ಮತ್ತು ಆಟಿಕೆಗಳನ್ನು ದುಃಖದಿಂದ ನಾನು ನೋಡಿದೆ… ಸ್ವಚ್ಚವಾಗಿ , ಶಿಸ್ತಾಗಿ ಆಕೆ ಇಡುತ್ತಿದ್ದ ಮನೆಯು ಅಲ್ಲೋಲಕಲ್ಲೋಲವಾಗಿರುವುದನ್ನು ಕಂಡು ನನ್ನ ಎದೆ ಒಡೆಯಿತು…
ಸ್ನಾನ ಮುಗಿದ ನಂತರ ಒಂದು ಗ್ಲಾಸ್ ಟೀ ಗಾಗಿ ನಾನು ಅಡುಗೆ ಮನೆಯತ್ತ ಹೋದೆ…..
ಊಟಮಾಡಿದ ತಟ್ಟೆಗಳು ಮತ್ತು ಇನ್ನಿತರ ಪಾತ್ರೆಗಳಲ್ಲದೆ ಬೇರೇನೂ ನನಗೆ ಕಾಣಿಸಲಿಲ್ಲ…
ಅವನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಜ್ ನಲ್ಲಿದ್ದ ಎರಡು ಬಾಳೆ ಹಣ್ಣನ್ನು ತಿಂದು ಬೆಡ್ ರೂಮಿಗೆ ಬಂದು ಮಲಕ್ಕೊಂಡೆ….
ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯಲ್ಲಿ ಮುಗುಳ್ನಗುತ್ತಿರುವ ನನ್ನಾಕೆಯ ಭಾವಚಿತ್ರವನ್ನೊಮ್ಮೆ ಭಾವುಕನಾಗಿ ನೋಡಿದೆ…