ಪಠ್ಯಪುಸ್ತಕದಲ್ಲಿ ಈ ಪಾಠ ಬೇಕು ಆ ಪಾಠ ಇರಬಾರದಿತ್ತು ಎನ್ನುವ ವಿವಾದಗಳ ನಡುವೆ ಇಂತಹದ್ದೊಂದು ಪಾಠವಿದ್ದರೆ ಹೇಗಿರುತ್ತದೆ?
ನೀವೇ ಓದಿನೋಡಿ. ಇದು ನಮ್ಮ ಪುಸ್ತಕ “ ಯೋyOಧ ನಮನ” ಒಂದು ಅಧ್ಯಾಯ
ಧೀರ ದೀಪೆಂದ್ರ ಸೆನಗರ್
ಸಣಕಲ ಮೈಕಟ್ಟಿನ ಸುಮಾರು ಐದೂವರೆ ಅಡಿ ಎತ್ತರದ ಬಾಲಕನೊಬ್ಬ ಚಿಕ್ಕಂದಿನಿಂದಲೇ ಸೈನ್ಯಕ್ಕೆ ಸೇರಲೇ ಬೇಕೆಂಬ ಮಹತ್ತರ ಕನಸು ಕಾಣುತ್ತಾನೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗುತ್ತಾನೆ ಆದರೆ ದೈಹಿಕ ಅರ್ಹತೆಗಳ ಮಾಪನದಲ್ಲಿ ಪಾಸಾಗುವುದಿಲ್ಲ. ವಯಸ್ಸು ಇನ್ನು ಹದಿನೇಳು ಅಷ್ಟೇ, ಸೈನ್ಯದಲ್ಲಿ ಆಯ್ಕೆ ಆಗದಿದ್ದರೆ ಏನಂತೆ ಮುಂದೆ ಎಂಜಿನಿಯರಿಂಗೋ, ವೈದ್ಯಕೀಯವೋ ಮಾಡುತ್ತೇನೆ ಎನ್ನುವುದು ಸಾಮಾನ್ಯ ಯುವಕರಿಗೆ ಇರುವ ಆಶಾವಾದ, ಆದರೆ ,ಇಲ್ಲಾ …ನನ್ನ ಜೀವನ ಸೈನ್ಯದಲ್ಲೇ ಮುಂದುವರೆಯ ಬೇಕು ಅದರ ಪರ್ಯಾಯ ವೃತ್ತಿಯ ಬಗ್ಗೆ ನಾನು ಯೋಚಿಸುವುದೇ ಇಲ್ಲ.
‘There is no plan B’
ಎನ್ನುವುದು ಛಲವೇ ಅಥವಾ ಉಧ್ಧಟತನವೇ?
ಹೆಸರು ದೀಪೆಂದ್ರ ಸಿಂಗ್ ಸೆನಗರ್. ರಾಜಾಸ್ಥಾನದ ರಾಜಪೂತ ವಂಶದವರು. ಈ ವಂಶದಲ್ಲಿ ಸೇನೆಗೆ ಸೇರುವುದೇ ದೊಡ್ಡ ಹೆಮ್ಮೆಯ ವಿಷಯ. ಅದಕ್ಕೆಂದೇ ಏಳನೇ ತರಗತಿಯಿಂದ ಸೈನಿಕ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟ್ರೀಯ ರಕ್ಷಣಾ ಅಕ್ಯಾಡೆಮಿಗೆ (NDA) ಸೇರುವ ಹಗಲುಗನಸಿನಲ್ಲೇ ಜೀವಿಸುತ್ತಿದ್ದ ವ್ಯಕ್ತಿಗೆ, ಮೊದಲ ಪ್ರಯತ್ನದಲ್ಲೇ…
‘ ನೀನು ಗಿಡ್ಡ, ಸಣಕಲು, ತೂಕ ತುಂಬಾ ಕಡಿಮೆ ಇದೆ’
ಎನ್ನುವ ಕಾರಣಕ್ಕೆ ಅನರ್ಹನನ್ನಾಗಿ ಮಾಡಿದರೆ?' ಸರಿ ಮತ್ತೆ ವಾಪಾಸ್ ಬರುತ್ತೇನೆ '
ಎಂದು ಅವಡುಗಚ್ಚಿಕೊಂಡು ಹೊರಬಂದರು. ಮುಂದಿನ ಕೆಲವು ತಿಂಗಳುಗಳು ಹಗಲು ರಾತ್ರಿ ಒಂದು ಮಾಡಿ ನೈಸರ್ಗಿಕವಾಗಿ ಏನೆಲ್ಲಾ ಸಾಧ್ಯವೊ ಎಲ್ಲಾ ಮಾಡಿ ಎರಡನೆ ಪ್ರಯತ್ನದಲ್ಲಿ ಅಂತೂ ಪಾಸಾದರು. ಮುಂದೇನು… ಅವರ ಕನಸನ್ನು ನನಸಾಗಿಸುವ ಸಮಯ. ಅಸಾಧ್ಯ ಎನ್ನುವ ಪದ ಅವರಿಗೆ ಅಪರಿಚಿತ.
ತರಬೇತಿಯ ಹಂತದಲ್ಲೆ ಸಿಬ್ಬಂದಿಯವರಿಗೆ ಅನಿಸಿತು ಇವರು ಸೈನ್ಯಕ್ಕೆಂದೇ ಹುಟ್ಟಿರುವವರು ಎಂದು. ಬರೊಬ್ಬರಿ ಹತ್ತು ಕೇಜಿ ತೂಕದ ಚೀಲವೊಂದನ್ನು ಬೆನ್ನಿಗೆ ಕಟ್ಟಿಕೊಂಡು ಹತ್ತು ಕಿಮೀಗಳ ಓಟದಲ್ಲಿ ಹೇಗೆ ಓಡುತ್ತಿದ್ದರೆಂದರೆ, ಎಲ್ಲರ ಜೊತೆಗೆ ಓಟ ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಯಾರ ಕಣ್ಣಿಗೂ ಕಾಣಿಸದಂತೆ ಓಡಿ, ಕೊನೆಯ ಗೆರೆಯನ್ನು ತಲುಪಿ, ಒಂದು ಸಣ್ಣ ನಿದ್ದೆ ತೆಗೆದ ಎಷ್ಟೋಹೊತ್ತಿನ ಮೇಲೆ ಇತರರು ಉಸ್ಸಪ್ಪಾ..ಎನ್ನುತ್ತಾ ಬರುತ್ತಿದ್ದರಂತೆ! ಹಾಗಾಗಿ ಇವರಿಗೆ ‘ರಾಕೆಟ್ ದಿಪಿಂದರ್’ ಎನ್ನುವ ಅಡ್ಡಹೆಸರು ಅಂಟಿಕೊಂಡುಬಿಟ್ಟಿತು. ಇವರ ಗುಂಡು ಹಾರಿಸುವ ಚಾಕಚಕ್ಯತೆ ತರಬೇತಿ ಕೇಂದ್ರದಲ್ಲಿ ಅಚ್ಚರಿಯ ವಿಷಯವಾಗಿತ್ತು. ಇದೇ ಕುಶಲತೆಯ ಆಧಾರದ ಮೇಲೆ ಮುಂದೆ ಸೈನ್ಯದ ಕಮಾಂಡೊ ಆಗಿ ನಂತರ ಪ್ಯಾರಾ ಕಮಾಂಡೊದ ವಿಷೇಶ ಪಡೆಗೆ ಸೇರಿಸಲ್ಪಟ್ಟರು.
ಯಾರಿವರು ಈ ವಿಶೇಷ ಪಡೆಯವರು, ಏನವರಲ್ಲಿ ಅಂತಹ ವಿಶೇಷತೆ?
ಇವರು ಹಾರುತ್ತಿರುವ ವಿಮಾನದಿಂದ ಜಿಗಿಯುವವರು, ಯಾವ ಶಸ್ತಾಸ್ತ್ರಗಳ ಸಹಾಯವಿಲ್ಲದೇ ವೈರಿಯ ಕತ್ತು ಮುರಿಯುವುವರು, ಅನ್ನ ನೀರಿಲ್ಲದೆ ಹಲವಾರು ದಿನಗಳು ಕಾಡಿನಲ್ಲಿ ಜೀವಿಸಬಲ್ಲರು, ಮೈಲುಗಟ್ಟಲೆ ಈಜುವವರು… ಎಲ್ಲದಕ್ಕೂ ಮೇಲಾಗಿ ಜೀವದ ಹಂಗೇ ಇಲ್ಲದೆ ಎಲ್ಲಾ ತರಹದ ತ್ಯಾಗಕ್ಕಾಗಿ ಸಿಧ್ಧರಾಗಿರುವವರು. ಇಂತಹ ವಿಶೇಷ ಪಡೆಗೆ ಹೇಳಿಮಾಡಿಸಿದಂತಹ ವ್ಯಕ್ತಿ ಮೇಜರ್ ದಿಪಿಂದರ್ ಸೆನೆಗರ್. ಎಲ್ಲೆಲ್ಲಿ ಭಯಾತ್ಪಾದಕರ ಚಟುವಟಿಕೆಗಳು ನಡೆಯುತ್ತಿದ್ದವೋ ಅಲ್ಲಿಗೆ ಮೇಜರ್ ಸೆನೆಗರ್ ತಲುಪಿಬಿಡುತ್ತಿದ್ದರು. ಅವರು ಬಂದರೆಂದರೆ ಸಾಕು, ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಂತೆ, ಕ್ಷಣಾರ್ಧದಲ್ಲಿ ಅವರನ್ನು ಪರಲೋಕಕ್ಕೆ ಪಾರ್ಸಲ್ ಮಾಡುತ್ತಿದ್ದರು. ಹಲವಾರು ಸಲ ಶತ್ರುಗಳ ಬುಲೆಟ್ ಸುಯ್ಯನೆ ಕಿವಿಯ ಹತ್ತಿರವೇ ಶಬ್ದಮಾಡಿಕೊಂಡು ಬಂದಾಗ ಪಾದರಸದಂತೆ ತಮ್ಮ ದೇಹವನ್ನು ತಿರುಗಿಸಿ ತಪ್ಪಿಸಿಕೊಳ್ಳುವುದು ಅವರಿಗೆ ಒಂಥರಾ ಅಭ್ಯಾಸವಾಗಿಬಿಟ್ಟಿತ್ತು. ಆದರೆ ಕೆಲವೊಮ್ಮೆ ಮೋಸದಿಂದ ಬಂದ ಈ ಬುಲೆಟ್ಟುಗಳು ಅವರ ಶರೀರವನ್ನು ಹೊಕ್ಕು ಹೊರಬಂದ ಸನ್ನಿವೇಶಗಳೂ ಇವೆ.
ಹಾಗಾಗಿದ್ದು ಒಂದು ಸಲ ಅಲ್ಲ…
ಆಗ ಅಸ್ಸಾಮಿನಲ್ಲಿ ಭಯೋತ್ಪಾದಕರ ಹಾವಳಿ ತಾರಕಕ್ಕೇರಿತ್ತು, ಹಾಗಾಗಿ ಇವರಿದ್ದ ವಿಷೇಶ ಪಡೆಯನ್ನು ಗೌಹಾಟಿಗೆ ಸ್ಥಳಾಂತರಸಲಾಗಿತ್ತು. 15 ಫೆಬ್ರವರಿ 1998 ಮೇಜರ್ ದೀಪಿಂದರ್ ಸೆನಗಲ್ ಗೌಹಾಟಿಯ ಏರ್ಪೋರ್ಟಿಗೆ ಬಂದಿಳಿದರು. ಇವರನ್ನು ಬರಮಾಡಿಕೊಳ್ಳಲು ಶಸಸ್ತ್ರಸಜ್ಜಿತ ವಾಹನವೊಂದನ್ನು ಕಳುಹಿಸಲಾಗಿತ್ತು. ಇನ್ನೂ ಐದು ನಿಮಿಷವಾಗಿತ್ತು ಏರ್ಪೋರ್ಟಿನಿಂದ ಹೊರಟು, ದಾರಿಯಲ್ಲಿ ಒಂದು ವೈರ್ಲೆಸ್ ಸಂದೇಶವನ್ನು ಇವರು ಕೇಳಿಸಿಕೊಂಡರು, ಅದೇನೆಂದರೆ, ಐದು ಜನ ಭಯೋತ್ಪಾದಕರ ಮುಖಂಡರು ಒಂದು ದಾಳಿಯ ಬಗ್ಗೆ ಮೀಟಿಂಗ್ ಮುಗಿಸಿ ಇನ್ನೇನು ಅರ್ಧ ಗಂಟೆಯಲ್ಲಿ ಅಲ್ಲಿಂದ ಹೊರಡುತ್ತಿದ್ದಾರೆ, ಆದರೆ ನಮ್ಮ ಟೀಮು ಇರುವುದು ಸುಮಾರು ನಲವತ್ತು ಕಿಮೀ ದೂರ, ಬೇಟೆ ಕೈ ತಪ್ಪಿ ಹೋಗುತ್ತಿದೆ…ತಕ್ಷಣ ಮೇಜರ್ ಸೆನೆಗರ್ ಕಾರ್ಯಗತರಾಗಿ ಸಿಬ್ಬಂದಿಯಿಂದ ವಿವರಗಳನ್ನು ತಿಳಿದುಕೊಂಡರು, ಇಪ್ಪತ್ತೇ ನಿಮಿಷಗಳಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಭಯೋತ್ಪಾದಕರ ಸಭೆಯಲ್ಲಿ
ಪ್ರತ್ಯಕ್ಷರಾಗಿಬಿಟ್ಟರು, ಕ್ಷಣಾರ್ಧದಲ್ಲಿ ಇಬ್ಬರು ಭಯೋತ್ಪಾದಕರನ್ನು ಮುಗಿಸೇಬಿಟ್ಟರು. ಇವರೆಡೆಗೆ ಗುಂಡುಹಾರಿಸುತ್ತಲೇ ಇನ್ನು ಮೂವರು ಅಲ್ಲಿಂದ ಓಡಿಹೋದರು…ಆದರೆ ಆ ಭಯೋತ್ಪಾದಕರು ಹಾರಿಸಿದ ಎರಡು ಗುಂಡುಗಳು ಇವರ ಹೊಟ್ಟೆಯನ್ನು ಭೇಧಿಸಿಕೊಂಡು ಹೊರಬಂದವು. ಅತೀವ ರಕ್ತಸ್ರಾವದಿಂದ ಬಸವಳಿದ ಇವರನ್ನು ಕೆಲವೇ ಗಂಟೆಗಳಲ್ಲಿ ನಾರಂಗಿಯ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. ಛಿದ್ರ ಛಿದ್ರವಾಗಿದ್ದ ಇವರ ಮೂತ್ರಕೋಶ ಮತ್ತು ಕರುಳುಗಳನ್ನು ಕತ್ತರಿಸಿ ಹೊಲೆದು ಅಂತೂ ಇವರ ಪ್ರಾಣ ಉಳಿಸಿದರು ಡಾಕ್ಟರುಗಳು.
ಎರಡು ದಿನಗಳ ನಂತರ ಪ್ರಜ್ಞೆ ಬಂದಾಗ, ಏನಾಗಿತ್ತು ನನಗೆ ಎಂದು ಕೇಳಿದಾಗ,
‘you had lot of guts, we had to cut some of it ‘
ಎಂದು ಹಾಸ್ಯ ಮಾಡಿದರು ಡಾಕ್ಟರುಗಳು, ಹಾಗೆಯೇ, ಇನ್ನು ಕನಿಷ್ಟ ಮೂರು ತಿಂಗಳು ಹಾಸಿಗೆಯಿಂದ ಏಳುವ ಹಾಗೇ ಇಲ್ಲ ಎಂಬ ಕಟ್ಟುನಿಟ್ಟಿನ ಆದೇಶವನ್ನೂ ಕೊಟ್ಟರು. ಆಸ್ಪತ್ರೆಯ ವರಾಂಡದಲ್ಲಿ ನಿಧಾನವಾಗಿ ಓಡಾಡಲು ಒಂದು ತಿಂಗಳೇ ಹಿಡಿಯಿತು. ಕಮಾಂಡೋಗಳ ಕಠಿಣ ಮಾನಸಿಕ ತರಬೇತಿ ಇಂತಹ ಸಮಯಗಳಲ್ಲಿ ಕೆಲಸಕ್ಕೆ ಬರುತ್ತದೆ, ಇವರು ಏನನ್ನೂ ಸೀರಿಯಸ್ಸಾಗೇ ತೆಗೆದು ಕೊಳ್ಳುವುದೇ ಇಲ್ಲ. ಈ ಸ್ಥಿತಿಯಲ್ಲೇ ರಾತ್ರಿಯಾದ ಕೂಡಲೇ ಸಿನೇಮಾ ನೋಡಲು ಆಸ್ಪತ್ರೆಯ ಸಿಬ್ಬಂದಿಯ ಕಣ್ತಪ್ಪಿಸಿ ನುಸುಳಿಕೊಂಡು ಹೋಗುತ್ತಿದ್ದರು. ಮಧ್ಯ ಎರಡು ದಿನಗಳು ಆಸ್ಪತ್ರೆಯಲ್ಲಿ ಕಾಣಿಸಲೇ ಇಲ್ಲ, ಸ್ನೇಹಿತನ ಮದುವೆ ಮಿಸ್ ಮಾಡಿಕೊಳ್ಳುವುದುಂಟೇ!
ಆಸ್ಪತ್ರೆಯ ಸಿಬ್ಬಂದಿ ಇವರ ಕಮ್ಯಾಂಡಿಗ್ ಆಫೀಸರಿಗೆ ದೂರಿಟ್ಟರು. ಇವರ ಕರುಳು, ಮೂತ್ರಕೋಶಗಳಿನ್ನೂ ರಿಪೇರಿಯೇ ಆಗಿಲ್ಲ,ಇವರು ಮನಸಿಗೆ ಬಂದಂತೆ ಮಾಡ್ತಾ ಇರ್ತಾರೆ..ಎಂದು. ಇವರ ಕಮ್ಯಾಂಡಿಂಗ್ ಆಫೀಸರ್ ಹೆಸರು ಕರ್ನಲ್ ಇವಾನ್ ಕ್ರಾಸ್ಟೊ. ಒಬ್ಬ ಕಮಾಂಡೋಗೆ ಇನ್ನೊಬ್ಬ ಕಮಾಂಡೊನ ಮನಸ್ಥಿತಿ ಅರ್ಥವಾಗುತ್ತದೆ. ಇವರುಗಳು, ಪುಂಡ, ಅಧಿಕಪ್ರಸಂಗಿ, ಉಧ್ಧಟ ಆಂತೆಲ್ಲಾ ಅನಿಸಿಕೊಳ್ಳಲು ರೆಡಿ ಇರುತ್ತಾರೆ, ಆದರೆ ಯಾರಾದರೂ ಕನಿಕರ, ಸಂತಾಪ ಸೂಚಿಸಲು ಬಂದರೆ….ಉಹುಂ ಆಗುವುದೇ ಇಲ್ಲ.
ಕರ್ನಲ್ ಇವಾನ್ ಕ್ರಾಸ್ಟೊ ರವರು ಸಹಾ ಹಿಂದೊಮ್ಮೆ ದೇಶಕ್ಕೆ ದೇಶವೇ ನಿಬ್ಬೆರಗಾಗುವಂತಹ ಸಾಹಸಿ ಕಾರ್ಯ ಮಾಡಿದವರು. ಅದು ಶತ್ರುಗಳ ಸಂಹಾರವೇ ಕಮಾಂಡೋಗಳ ಕೆಲಸವಲ್ಲಾ, ದೇಶದ ನಾಗರೀಕರ ಜೀವ ಉಳಿಸಃವ ಕಾರ್ಯಗಳಲ್ಲೂ ಅಷ್ಟೇ ನಿಸ್ಸೀಮರು. ಆ ಘಟನೆ ಏನು ಅಂದರೆ…
14 ಅಕ್ಟೊಬರ್ 1992, ಚಂಡೀಗಢದ ಸಮೀಪದಲ್ಲಿ ಟಿಂಬರ್ ಟ್ರೈಲ್ ಎನ್ನುವ ಪ್ರವಾಸಿತಾಣವೊಂದರಲ್ಲಿ ಕೇಬಲ್ ಕಾರಿನ ತಂತಿ ಹರಿದು ಅಪಘಾತಕ್ಕೀಡಾಯೀತು. ತಂತಿಗೆ ಸಿಕ್ಕಿಹಾಕಿಕೊಂಡಿದ್ದ ಕೇಬಲ್ ಕಾರು ಈಗಲೋ ಆಗಲೋ ಕಳಚಿಕೊಂಡು ಪ್ರಪಾತದಲ್ಲಿ ಬೀಳುವುದರಲ್ಲಿತ್ತು. ಅದರಲ್ಲಿದ್ದ ಹತ್ತು ಜನ ಪ್ರವಾಸಿಗರು ಸಾವಿನ ದವಡೆಯಲ್ಲೇ ಇಪ್ಪತ್ತೆರಡು ಗಂಟೆಗಳ ಕಾಲ ಯಮಯಾತನೆ ಅನುಭವಿಸುವಂತಾಗಿತ್ತು. ಏರ್ಫೋರ್ಸಿನ ಹೆಲಿಕಾಪ್ಟರುಗಳ ಸಹಾಯದಿಂದ ಕಮಾಂಡೊ ಇವಾನ್, ಹಗ್ಗ ಕಟ್ಟಿಕೊಂಡು ಸುಮಾರು ನೂರು ಅಡಿ ಕೆಳಗಿಳಿದು ಕೇಬಲ್ ಕಾರನ್ನು ತಲುಪಿದರು. ಬದುಕುಳಿಯುವ ಆಸೆಯನ್ನೇ ಕಳೆದುಕೊಂಡಿದ್ದ ಅಲ್ಲಿದ್ದವರಂತೂ ದೇವಲೋಕದಿಂದ ದೇವರೇ ಬಂದರೇನೊ ಎನ್ನುವಷ್ಟು ಸಂತೋಷಿಸಿದರು. ಒಬ್ಬೊಬ್ಬೊರನ್ನೇ ಹಗ್ಗಕ್ಕೆ ಕಟ್ಟಿದ ಕುರ್ಚಿಗೆ ಕಟ್ಟಿ ಹೆಲಿಕಾಪ್ಟರಿಗೆ ರವಾನಿಸಲಾಯಿತು. ಆದರೆ ಇನ್ನೂ ನಾಲ್ಕು ಜನ ಇರುವಾಗಲೇ ಕತ್ತಲಾಯಿತು, ಹೆಲಿಕಾಪ್ಟರುಗಳ ಹಾರಾಟವನ್ನು ನಿಲ್ಲಿಸಬೇಕಾಯಿತು.
ಪುನಃ ಅಧೀರರಾದ ಪ್ರವಾಸಿಗರಿಗೆ ಧೈರ್ಯ ತುಂಬಲು ಕಮಾಂಡೊ ಇವಾನ್ ಆ ರಾತ್ರಿಯನ್ನು ಅವರ ಜೊತೆ ಕೇಬಲ್ ಕಾರಿನಲ್ಲೇ ಕಳೆದರು! ಮರುದಿನ ಬೆಳಗ್ಗೆ ಉಳಿದವರನ್ನು ರಕ್ಷಿಸಲಾಯಿತು.
ಇಂತಹ ಸಾಹಸಿಗಳ ತವರು ಮನೆ 1 para special force.
ಇತ್ತ ಸೇನಾವೈದ್ಯರುಗಳು ನಿಬ್ಬೆರಗಾಗುವಂತೆ ಮೇಜರ್ ದೀಪಿಂದರ್ ಗುಣಮುಖರಾದರು ಆದರೆ ಅವರ ಫಟಕದ ಅಧಿಕಾರಿಗಳು ಕೂಡಲೇ ಮಿಲಿಟರಿ ಕಾರ್ಯಾಚರಣೆಗೆ ನೀವು ರೆಡಿ ಇಲ್ಲ ಎಂದು ಕೆಲವು ಆಫೀಸಿನ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಮೇಜರ್ ಸೆನಗರ್ ಹಾಗೆ ಕೂತು ಕೆಲಸ ಮಾಡಿದ ಅಭ್ಯಾಸವೇ ಇಲ್ಲದವರು. ಏನೇನೊ ನಾಟಕ ಮಾಡಿದರು, ಜಗಳಾಡಿದರು, ಬೇಡಿಕೊಂಡರು, ನಾನು ‘ಫೀಲ್ಡಿಗೆ’ ಹೋಗಬೇಕು ಎಂದು. ಇವರ ಬೇಡಿಕೆ ಈಡೇರಿಸಲೆಂದೇ ಕಾರ್ಗಿಲ್ ಸಂಘರ್ಷವಾಯಿತೇನೋ,
ಬಂತು ಮತ್ತೊಮ್ಮೆ ಯುಧ್ಧದ ಕರೆ.
ಕಾರ್ಗಿಲ್ಲಿನಲ್ಲಿ ಕಸರತ್ತು
1998 ರ ಮೇ ತಿಂಗಳಿಗೆ ಮೇಜರ್ ದೀಪಿಂದರ್ ಸೇನಗರ್ ತಮ್ಮ ತಂಡದೊಂದಿಗೆ ಗೌಹಾಟಿಯಿಂದ ಕಾರ್ಗಿಲ್ಲಿಗೆ ಬಂದಿಳಿದರು. ಆಗಾಗಲೇ ನೀಲಮ್ ಪೋಸ್ಟ್ ಎನ್ನುವ ಮಂಚೂಣಿಯನ್ನು ಪಾಕಿಸ್ತಾನಿಗಳಿಂದ ಮುಕ್ತಮಾಡಿ ತಿರಂಗ ಝಂಡಾವನ್ನು ಮರು ಸ್ಥಾಪಿಸಿದರು. ಆಗಸ್ಟ್ ತಿಂಗಳಿನಷ್ಟೊತ್ತು ಹೊತ್ತಿಗೆ ಕಾರ್ಗಿಲ್ ಯುದ್ಧ ಇನ್ನೇನು ಮುಗಿದಹಾಗೇ ಎನ್ನುವ ಮಟ್ಟಕ್ಕೆ ಬಂದಿತ್ತು. ಈ ಯುದ್ಧದಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಪಾಕೀಸ್ತಾನ ಗಾಯಗೊಂಡ ಹಾವಿನಂತೆ ಬಿಲದಲ್ಲೇ ಬುಸುಗುಡುತ್ತಿತ್ತು. ಭಯೋತ್ಪಾದಕರ ಆತ್ಮಾಹುತಿ ತಂಡಗಳನ್ನು ಬಳಸಿಕೊಂಡು ಅಲ್ಲಲ್ಲಿ ಸಣ್ಣಪುಟ್ಟ ದಾಳಿಗಳನ್ನು ಭಾರತೀಯ ಸೈನ್ಯದ ಮೇಲೆ ನಡೆಸುತ್ತಲೇ ಇದ್ದರು ಪಾಪಿ ಪಾಕಿಸ್ತಾನೀಯರು.
1 ಸೆಪ್ಟಂಬರ್ 1998 ರಂದು ಆಚಾನಕ್ಕಾಗಿ ನೀಲಂ ಪೋಸ್ಟ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ಸೇನಗರ್ ಇಬ್ಬರು ಉಗ್ರರನ್ನು ಕ್ಷಣಾರ್ಧದಲ್ಲೇ ಮುಗಿಸಿದರು. ಆದರೆ ಉಗ್ರರು AK 47 ರೈಫಲ್ಲಿನಿಂದ ಇವರೆಡೆಗೆ ಹಾರಿಸಿದ ಗುಂಡಿನ ದಾಳಿಯಲ್ಲಿ ಇವರ ತೊಡೆ ಮತ್ತು ಸೊಂಟಕ್ಕೆ ತಗುಲಿದ ಗುಂಡೇಟಿನಿಂದ ಗಂಭೀರ ಗಾಯಗಳಾದವು. ವೈರ್ಲೆಸ್ ಸಂದೇಶಗಳ ನಡುವೆ ಹರಿದಾಡುತ್ತಿದ್ದ ಈ ಸುದ್ದಿಯನ್ನು ಕೇಳಿದ ಹೆಲಿಕಾಪ್ಟರ್ ಪೈಲಟ್ಟೊಬ್ಬರು ಕೂಡಲೇ ಇವರಿದ್ದ ಸ್ಥಳಕ್ಕೆ ತಲುಪಿದರು. ಆದರೆ ಅಲ್ಲಿ ಹೆಲಿಪ್ಯಾಡೇ ಇರಲಿಲ್ಲ. ಹೇಗೋ ಹತ್ತಿರದ ಒಂದು ಬಯಲಿನಲ್ಲಿ ಹೆಲಿಕಾಪ್ಟರನ್ನು ಇಳಿಸಿ ಇವರನ್ನು ಹೊತ್ತು ತಂದು ಕೆಲವೇ ನಿಮೀಷಗಳಲ್ಲಿ ಇವರನ್ನು ಮಿಲಿಟರಿ ಆಸ್ಪತ್ರೆಗೆ ತಲುಪಿಸಿದರು. ಏನಾದರಾಗಲಿ ಇಂತಹ ಯೋಧರು ಬದುಕುಳಿಯಲೇ ಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವಾಪಾಸ್ ಹೆಲಿಕಾಪ್ಟರನ್ನು ತಮ್ಮ ನೆಲೆಗೆ ತಿರುಗಿಸಿದರು. ಇಡೀ ವೈದ್ಯಕೀಯ ತಂಡ ತಕ್ಷಣ ಕಾರ್ಯನಿರತವಾಯಿತು. ತೊಡೆಯಲ್ಲಿದ್ದ ಗುಂಡನ್ನು ಹೊರ ತೆಗೆದರು, ರಕ್ತಸ್ರಾವವನ್ನು ನಿಲ್ಲಿಸಿದರು, ಕ್ಷೀಣಿಸುತ್ತಿದ್ದ ಹೃದಯ ಬಡಿತ ಒಂದು ಹದಕ್ಕೆ ಬಂತು. ಇನ್ನು ಜೀವಕ್ಕೆ ಭಯವಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಇವರಿಗೆ ಪ್ರಜ್ಞೆ ಬಂತು. ಎದ್ದವರೇ…
‘ನಾನು ಕೆಲವೇ ದಿನಗಳಲ್ಲಿ ವಾಪಾಸಾಗಿ ಆ ಪಾಕೀಸ್ತಾನಿಯರನ್ನು ಮುಗಿಸುತ್ತೇನೆ, ನನ್ನ ಜಾಗಕ್ಕೆ ಬೇರೆ ಯಾರನ್ನೂ ನಿಯಮಿಸ ಬೇಡಿ’ ಎನ್ನಬೇಕೆ!
ಇದು ಅಧಿಕ ಪ್ರಸಂಗಿತನವಲ್ಲದೆ ಮತ್ತೇನು…ಎಂದುಕೊಂಡರು ಅಲ್ಲಿದ್ದ ವೈದ್ಯರು.
ಅಲ್ಲಿಂದ ಅವರನ್ನು ದೆಹಲಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಎರಡು ತಿಂಗಳಲ್ಲಿ ಏನು ವೈದ್ಯಕೀಯದ ಪರಿಮಿತಿಯಲ್ಲಿ ಮಾಡಲು ಸಾಧ್ಯವೋ ಅದೆಲ್ಲದನ್ನೂ ಮಾಡಿದ ನಂತರವೇ ಆ ವೈದ್ಯಕೀಯ ತಂಡ ವಸ್ತುನಿಷ್ಟ ಭಾವದಿಂದ ಅವರಿಗೆ ಹೇಳಿದ್ದಿದು…
‘ಇನ್ನು ಮುಂದೆಂದೂ ನೀವು ನಡೆದಾಡಲು ಸಾಧ್ಯವಿಲ್ಲ’
ಆ ರಾತ್ರಿ ಮೇಜರ್ ದೀಪಿಂದರ್ ಸೆನೆಗರ್ ಒಂದು ಕ್ಷಣವೂ ನಿದ್ರೆ ಮಾಡಲಿಲ್ಲ. ದೈಹಿಕ ನೋವನ್ನು ನುಂಗಿ ಬದುಕುವುದು ಅವರಿಗೆ ಉಸಿರಾಟದಷ್ಟೇ ಸಹಜ ಕ್ರಿಯೆ. ಆದರೆ ಸೇನೆಯ ವೈದ್ಯಾಧಿಕಾರಿಗಳ ತಂಡ, ಬಹಳ ಶಾಂತವಾಗಿ, ನಿರ್ಭಾವುಕತೆಯಿಂದ, ಹೇಳಿದ್ದು ಅವರ ನಿದ್ದೆಗೆಡಿಸಿದ ವಿಷಯ…
You can NEVER EVER walk in your life.
ವೈದ್ಯಾಧಿಕಾರಿಗಳ ಈ ನಿರ್ಣಯ ಅವರು ಓದಿದ ವೈದ್ಯಕೀಯ ಪುಸ್ತಕಗಳ, ಅವರ ಅನುಭವದ ಆಧಾರದ ಮೇಲೆ ಹೇಳಿದ್ದು, ಸರಿಯಾಗಿಯೇ ಇತ್ತು. ಎರಡು ತಿಂಗಳುಗಳ ಕಾಲ ಈ ವೈದ್ಯಕೀಯ ತಂಡ ಇವರನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿತ್ತು. ಪೀಸು ಪೀಸಾಗಿದ್ದ ಸೊಂಟದ ಮೂಳೆಗಳನ್ನು ಜೋಡಿಸಲು ವರ್ಕಷಾಪಿನ ಮೆಕ್ಯಾನಿಕ್ಕುಗಳಂತೆ ತಂತಿ, ಮೊಳೆಗಳಿಂದ ಜೋಡಿಸಿದ್ದರು, ಹಲವಾರು ಸಲ ಸರಣಿ ‘ಕತ್ತರಿಸು- ಹೊಲಿ’ ಆಪರೇಷನ್ನುಗಳನ್ನು ಮಾಡಿ ಇನ್ನು ನಮ್ಮ ಕೈಲಾದುದ್ದನ್ನು ಮಾಡಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಾ ಹೇಳಿದ ನಿರ್ಣಯವದು.
ಬೆಳಗಾಗುವಷ್ಟು ಹೊತ್ತಿಗೆ ಸೇನಗರ್ ಒಂದು ನಿರ್ಧಾರಕ್ಕೆ ಬಂದರು. ಅಸಲಿಗೆ, ಒಂದಲ್ಲ, ಎರಡು ನಿರ್ಧಾರಗಳನ್ನು ತೆಗೆದುಕೊಂಡರು. ಮೊದಲನೆಯದು, ಈ ಸ್ಥಿತಿಯಲ್ಲಿ ಸೈನ್ಯದಲ್ಲಿ ತಾನು ಮಾಡುವುದಾದರೂ ಏನಿದೆ? ಆದ್ದರಿಂದ ಸೈನ್ಯದಿಂದ ಹೊರಬರುವುದೇ ಒಳ್ಳೆಯದು. ಇದು ಅವರ ಒಮ್ಮತದ ನಿರ್ಧಾರ ಆದರೆ ಎರಡನೇ ನಿರ್ಧಾರಕ್ಕೆ ಇನ್ನೊಬ್ಬ ವ್ಯಕ್ತಿಯ ಸಮ್ಮತಿ ಬೇಕಿತ್ತು. ಇತ್ತೀಚೆಗಷ್ಟೆ ಜಯಾ ಅವರೊಂದಿಗೆ ಅವರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಈ ನಿಶ್ಚಿತಾರ್ಥದಿಂದ ಹೇಗಾದರೂ ಮಾಡಿ ಬಿಡುಗಡೆ ಪಡೆಯುವುದು. ಇನ್ನು ಮುಂದೆ ನಡೆದಾಡುವುದೇ ಆಸಾಧ್ಯ ಎಂದು ಗೊತ್ತಾದ ಮೇಲೂ ಇನ್ನು ಯಾವ ಪುರುಷಾರ್ತಕ್ಕೆ ಮದುವೆಯಾಗಲಿ? ಆದರೆ ಇವರ ಎರಡನೇ ನಿರ್ಧಾರ ಅತಂತ್ರಕ್ಕೆ ಸಿಕ್ಕಿಹಾಕಿ ಕೊಂಡಿತು, ಏಕೆಂದರೆ ಜಯಾ ಅವರು ಕಡ್ಡಿ ತುಂಡರಿಸಿದಂತೆ ಹೇಳೇ ಬಿಟ್ಟರು…
‘ ನೀವು ಯಾವ ಸ್ಥಿತಿಯಲ್ಲಿದ್ದರೂ ನಮ್ಮಿಬ್ಬರ ಮದುವೇ ನಡೆದೇ ತೀರುತ್ತೆ…
ಛಲಗಾರನೊಬ್ಬನಿಗೆ ಛಲಗಾತಿ ಜೊತೆಯಾದಳು!
‘ಏನಾದರಾಗಲೀ ಮುಂದೆ ನಾವು ಮದುವೆಯಾಗುತ್ತೇವೆ’ ಎನ್ನುವ ಧೃಢ ನಿರ್ಧಾರ ತೆಗೆದುಕೊಂಡ ಇವರ ಭಾವಿ ಪತ್ನಿ ಜಯಾ ಮತ್ತು ಅವರ ಜೊತೆ ಕೆಲವು ಜೀವಕ್ಕೆ ಜೀವ ಕೊಡುವ ಮಿತ್ರರೂ ಸೇರಿ ಮುಂದಿನ ಕೆಲವು ತಿಂಗಳುಗಳ ರಣನೀತಿಯನ್ನು ರಚಿಸಿಯೇ ಬಿಟ್ಟರು. ಆಗಿನ್ನು ಸೈನ್ಯದಲ್ಲಿದ್ದವರಿಗೆ ಕಂಪ್ಯೂಟರಿನ ಬಳಕೆ ಅಷ್ಟು ಪ್ರಚಲಿತವಾಗಿರಲಿಲ್ಲ. ಇನ್ನು ಪಿಸ್ತೋಲನ್ನು ಮರೆತು PC ಯ ಕಡೆ ಗಮನ ಹರಿಸುವುದು ಒಳ್ಳೆಯದು ಎಂದು ತೀರ್ಮಾನಿಸಿದರು ದೀಪೆಂದರ್. ಅದರಂತೆ ಒಂದು task force ನಿಯಮಿತಗೊಂಡಿತು. ‘A’ ಟೀಮು ಇವರನ್ನು ಆಸ್ಪತ್ರೆಯ ಬೆಡ್ಡಿನಿಂದ ಕಾರಿಗೆ ಸಾಗಿಸಿ ಅಲ್ಲಿಂದ ಇವರನ್ನು ಕಂಪ್ಯೂಟರ್ ಕೇಂದ್ರಕ್ಕೆ ಕೊಂಡೊಯ್ದ ಕ್ಲಾಸಿನ ಒಂದು ಮೂಲೆಯ ಬೆಂಚಿನ ಮೇಲೆ ಇವರನ್ನು ಮಲಗಿಸುವುದು. ಮೂರು ಗಂಟೆಯ ಕ್ಲಾಸ್ ಮುಗಿದ ನಂತರ, ವಾಪಾಸು ಇವರನ್ನು ಆಸ್ಪತ್ರೆಯ ಬೆಡ್ಡಿಗೆ ಸೇರಿಸುವುದು. ಮೂರು ನಾಲ್ಕು ತಿಂಗಳುಗಳಲ್ಲಿ ಸ್ಟ್ರೆಚರಿನಿಂದ ಗಾಲಿಖುರ್ಚಿಯ ಹಂತಕ್ಕೆ ಸುಧಾರಣೆಯಾಯಿತು.
ಇನ್ನೊಂದು ಟೀಮ್ ‘B’ ಯ ಕೆಲಸವೇನೆಂದರೆ ಇವರನ್ನು CAT ಪರೀಕ್ಷೆಗೆ ತಯಾರಿಸುವುದು. ಈ ಟೀಮಿನಲ್ಲಿ ಸೈನಿಕನೊಬ್ಬನ ಮಗನೂ ಸೇರಿದ್ದ ಇವರಿಗೆ ಆರನೇ ಕ್ಲಾಸಿನಿಂದ ಹಿಡಿದು ಗಣಿತದ ಪಾಠ ಹೇಳಿಕೊಡಲು!. ಈ ತಯಾರಿ ನಡೆಯುತ್ತಿರುವಾಗಲೇ ಗಾಲಿಖುರ್ಚಿಯಿಂದ ಎಬ್ಬಿಸಿ, ಅಕ್ಕ ಪಕ್ಕ ಇಬ್ಬರು ಹೆಗಲು ಕೊಟ್ಟು ಮೆಲ್ಲಗೆ ನಡೆಸಲು ಸಹಾಯ ಮಾಡಿದರು. ಕೆಲತಿಂಗಳ ನಂತರ ಎರಡೂ ಪಕ್ಕೆಗಳಿಗೆ ಊರುಗೋಲುಗಳು ಅಂಟಿಕೊಂಡವು. ಆಗ ದೇಶದಲ್ಲಿ IIM(A),IIM( B)IIM( C),IIM( L) ಸೇರಿದಂತೆ ಒಟ್ಟು ಹದಿನಾರು ಪ್ರತಿಷ್ಠಿಟಿತ ಮ್ಯಾನೇಜ್ಮೆಂಟಿನ ವಿದ್ಯಾಸಂಸ್ಥೆಗಳಿದ್ದವು. 2000 ರ CAT ಫಲಿತಾಂಶ ಹೊರಬಂದಾಗ ಹದಿನಾರರಲ್ಲಿ ಹದಿನೈದು IIM ಗಳು ದೀಪಿಂದರಿಗೆ ಪ್ರವೇಶದ ಆಹ್ವಾನ ಕೊಟ್ಟವು!
Combat ನಿಂದ ನಿರ್ಗಮಿಸಿದ ಈ ಅಧಿಕ ಪ್ರಸಂಗಿ Corporate ಪ್ರಪಂಚಕ್ಕೆ ಆಗಮಿಸಿದರು.
ಅಲ್ಲಿವರೆಗೂ ಇವರಿಗೆ ಅಕ್ಷರಶಹಃ ಹೆಗಲುಕೊಟ್ಟು ನಡೆಸಿದ ಮಿತ್ರರು, ದೀಪಿಂದರರು ಆರಿಸಿಕೊಂಡ IIM ಅಹಮದಾಬಾದಿಗೆ ತೆರಳುವ ಮುನ್ನ ಇನ್ನೊಂದು ಜವಾಬ್ದಾರಿಯನ್ನೂ ನಿಭಾಯಿಸಿ ಬಿಡೋಣವೆಂದು ತೀರ್ಮಾನಿಸಿದರು. ಗ್ವಾಲಿಯರಿನಲ್ಲಿ ದೀಪೀಂದರ್ ಮತ್ತು ಜಯಾರವರ ಸರಳ ಮದುವೆಯ ಸಮಾರಂಭವೂ ನಡೆಯಿತು.
IIM ಇವರನ್ನು ಅಪರಿಚಿತ ಪ್ರಪಂಚಕ್ಕೆ ಕೊಂಡೊಯ್ಯಿತು. ಹೊಸ ಆಟಿಕೆಗಳನ್ನು ಕಂಡ ಮಗುವಿನಂತೆ ಎಲ್ಲವೂ ಕೌತುಕ..ಹೀಗೂ ಉಂಟೆ ಎನ್ನುವ ಆಶ್ಚರ್ಯ ಆದರೆ ಹೃದಯದಲ್ಲಿ ಸೈನಿಕ ಮಾತ್ರ ಭಧ್ರವಾಗಿ ನೆಲೆಸಿದ್ದ. ಎರಡು ಊರುಗೋಲುಗಳ ಬದಲು ಒಂದು ಊರುಗೋಲಿಗೆ ಬಂದರು. ಕೆಲವು ತಿಂಗಳಲ್ಲಿ ಅದನ್ನೂ ಬದಿಗಿಟ್ಟು ಜಯಾರವರ ಹೆಗಲುಗಳ ಸಹಾಯದಿಂದ ನಡೆಯಲಾರಂಬಿಸಿದರು. ಸ್ವಲ್ಪ ನಾಚಿಕೆಕೊಂಡಿರಬೇಕು, ನಂತರ ಅವರೇ ಸ್ವತಂತ್ರವಾಗಿ ಓಡಾಡಲು ಶುರುಮಾಡಿಕೊಂಡರು. ಹಾಗಾದರೆ ಅಷ್ಟೊಂದು ಜನ ಡಾಕ್ಟರುಗಳ ಅಭಿಪ್ರಾಯ ಸುಳ್ಳೇ?
ಹಾಗೇನಿಲ್ಲ , ಡಾಕ್ಟರುಗಳು ಓದಿದ ಪುಸ್ತಕವನ್ನು ದೀಪೆಂದ್ರ ಸಿಂಗ್ ಸೆನಗರ್ ಓದಿರಲಿಲ್ಲ ಮತ್ತು ಇವರಿಗೆ ಜೀವನ ಕಲಿಸಿದ ಪಾಠಗಳು ಡಾಕ್ಟರುಗಳ ಪಠ್ಯ ಪುಸ್ತಕದಲ್ಲಿರಲಿಲ್ಲ…ಅಷ್ಟೆ.
ಡಾಕ್ಟರ್ ರೆಡ್ಡೀಸ್ ಲ್ಯಾಬರೋಟರೀಸ್ ಎನ್ನುವ ಪ್ರಸಿಧ್ಧ ಔಷದದ ಸಂಸ್ಥೆಯಿಂದ ಇವರ ಎರಡನೇ ಇನ್ನಿಂಗ್ಸ್ ಶುರುವಾಯಿತು. ಎಲೆಕ್ಟ್ರಾನುಗಳು ವರ್ತುಲದಿಂದ ವರ್ತುಲಕ್ಕೆ ಜಿಗಿಯುವಂತೆ ಇವರೂ ಛಲ್ಲಾಂಗ ಹಾಕುತ್ತಾ ಹೋದರು. ಫಿಲಿಪೀನ್ಸ್, ಸಿಂಗಾಪೂರ್ ಮತ್ತು ಜಪಾನಿನ ಸುತ್ತಾಟವೆಲ್ಲಾ ಆದ ಮೇಲೆ ಈಗ ಚೆನೈನಲ್ಲಿ ಮೈಕ್ರೊಸಾಫ್ಟ್ ಕಂಪನಿಯಲ್ಲಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಮೊನ್ನೆ ಹೀಗೆ ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ ಎಂದು ಹೆೇಳಿದ್ದಕ್ಕೆ ವಿನಯದಿಂದ thank you sir ಎಂದರು.
ದೇವರು ಇಂತಹ ಅಧಿಕ ಪ್ರಸಂಗಿಗಳನ್ನು ಇನ್ನೂ ಅಧಿಕವಾಗಿ ಸೃಷ್ಟಿಸಲಿ ಎಂಬ ಪ್ರಾರ್ಥನೆಯೊಂದಿಗೆ…..
✍️..…ವಿಂಗ್ ಕಮಾಂಡರ್ ಸುದರ್ಶನ