ಕಾರ್ತಿಕ ಶುಕ್ಲ ದ್ವಿತೀಯ ಇದನ್ನು ಭಾತೃ ಬಿದಿಗೆ ಯಾ ಯಮ ದ್ವಿತೀಯಾ ಎಂದು ಕರೆಯುತ್ತಾರೆ, ಸನಾತನ ಧರ್ಮದಲ್ಲಿ ಮಾತ್ರ ಹಬ್ಬಗಳೊಂದಿಗೆ ಕುಟುಂಬಗಳನ್ನು ಜೋಡಿಸಿದ್ದು ಹಾಗೂ ಸಂಬಂಧಗಳನ್ನು ಜೀವಂತವಾಗಿ ಇಟ್ಟಿರುವುದು, ಹಿಂದೂ ಧರ್ಮದಲ್ಲಿ ಮನುಷ್ಯರನ್ನು ಮಾತ್ರವಲ್ಲ ಬದಲು ಪ್ರಕೃತಿಯನ್ನು ಜೋಡಿಸಿ ಪ್ರಕೃತಿಗೂ ಪೂಜಿಸುವ ಒಂದು ಸಂಪ್ರದಾಯವನ್ನು ಹಾಕಿ ಕೊಟ್ಟಿದ್ದಾರೆ, ಹಿರಣ್ಯ ಕಶ್ಯಪನ ಅಂದರೆ ಅಸುರ ಸಂತಾನದಲ್ಲಿ ಪರಮ ದೈವಭಕ್ತ ಪ್ರಹ್ಲಾದ ಹುಟ್ಟುತ್ತಾನೆ, ಪ್ರಹ್ಲಾದನ ಮೊಮ್ಮಗ ಬಲಿ, ಕಾರ್ತಿಕ ಶುಕ್ಲ ಪಕ್ಷದ ಪಾಡ್ಯವನ್ನು ಬಲಿ ಪಾಡ್ಯ ಅನ್ನುತ್ತಾರೆ, ಬಲಿ ಚಕ್ರವರ್ತಿಯಷ್ಟು ದೊಡ್ಡ ದಾನಿ ಇನ್ನೊಬ್ಬನಿಲ್ಲ, ಆದರೂ ಬಲಿ ಚಕ್ರವರ್ತಿಯಲ್ಲಿ ಅಸುರ ಮನೋಭಾವ ಆಗೊಮ್ಮೆ ಈಗೊಮ್ಮೆ ಬಂದು ದೇವತೆಗಳ ಮೇಲೆ ಯುದ್ಧ ಮಾಡುತ್ತಿದ್ದ, ವಿಷ್ಣು ವಾಮನಾವತಾರಿಯಾಗಿ ಬಂದು ಬಲಿಯು ಮಾಡುತ್ತಿದ್ದ 100 ನೇ ಅಶ್ವಮೇಧಯಾಗದಲ್ಲಿ ದಾನವಾಗಿ ಮೂರು ಹೆಜ್ಜೆ ಭೂಮಿಯನ್ನು ಕೇಳುತ್ತಾನೆ, ಹರಿಯ/ವಾಮನನ ಮೂರನೇ ಹೆಜ್ಜೆ ಬಲಿಯ ತಲೆ ಇಡಬೇಕಾಗುತ್ತದೆ, ವಾಮನಾವತಾರಿ ವಿಷ್ಣು ಬಲಿಯನ್ನು ಸುತಲ ಲೋಕಕ್ಕೆ ತಳ್ಳಿ ಅಲ್ಲಿ ಬಲಿಯ ಅರಮನೆಯ ಕಾವಲು ಗಾರನಾಗಿ ಉಪೇಂದ್ರನ ರೂಪದಲ್ಲಿ ಹರಿ ನೆಲೆಸುತ್ತಾನೆ, ದೀಪಾವಳಿಯ ಪಾಡ್ಯ ಬಲೀಂದ್ರ ಪೂಜೆ, ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಇಂದು ಬಲಿ ಭೂಲೋಕಕ್ಕೆ ಬರುತ್ತಾನೆ, ಇದು ಪಾಡ್ಯದ ಕಥೆ ಆದರೆ ದ್ವಿತೀಯಾ ಇದರ ಕಥೆ ಬೇರೆ ಇದೆ, ಯಮದ್ವಿತೀಯಾ ಅಂದರೆ ಯಮಧರ್ಮ ತನ್ನ ಸಹೋದರಿಯ ಮನೆಗೆ ಹೋಗುವ ದಿನ, ಸೂರ್ಯದೇವ ಮತ್ತು ಛಾಯಾ ದೇವಿಗೆ ಜನಿಸಿದ ಇಬ್ಬರು ಮಕ್ಕಳು ಯಮಧರ್ಮ ಮತ್ತು ಯಮುನಾ. ಪುರಾಣದ ಕಥೆಯ ಪ್ರಕಾರ ಯಮನ ತಂಗಿ ಯಮುನಾ ಅಣ್ಣನನ್ನು ಅನೇಕಬಾರಿ ತನ್ನ ಮನೆಗೆ ಆಹ್ವಾನಿಸುತ್ತಾಳೆ, ಆದರೆ ಯಮಲೋಕದಲ್ಲಿ ಕೆಲಸದ ಒತ್ತಡದಲ್ಲಿ ಇದ್ದ ಯಮನಿಗೆ ತಂಗಿಯ ಮನೆಗೆ ಹೋಗಲು ಸಮಯ ಸಿಗುವುದಿಲ್ಲ, ದೀಪಾವಳಿಯಂದು ಅಣ್ಣನನ್ನು ಕರೆಯುತ್ತಾಳೆ, ಯಮನು ತಂಗಿಯ ಪ್ರೀತಿಗೆ ಬೆಲೆಕೊಟ್ಟು ನರಕದಲ್ಲಿದ್ದ ಎಲ್ಲರನ್ನು ನರಕ ಬಂಧನದಿಂದ ಮುಕ್ತಗೊಳಿಸಿ, ಚಿತ್ರಗುಪ್ತನೊಂದಿಗೆ ಯಮನೆಯ ಮನೆಗೆ ಹೋಗುತ್ತಾನೆ, ತಂಗಿ ಯಮುನೆ ಪ್ರೀತಿಯಿಂದ ಅಣ್ಣನನ್ನು ಬರಮಾಡಿಕೊಂಡು ಅಣ್ಣನಿಗೆ ವಿವಿಧ ರೀತಿಯಲ್ಲಿ ಸೇವೆಯನ್ನು ಮಾಡುತ್ತಾಳೆ, ಇದರಿಂದ ಸಂತೃಪ್ತಿಗೊಂಡ ಯಮ ತಂಗಿಗೆ ವರ ಕೇಳೆಂದು ಹೇಳುತ್ತಾನೆ, ತಂಗಿಯು ಯಾರು ಈ ದಿನ ಸಹೋದರನ್ನು ಉಪಚರಿಸಿ ಸತ್ಕರಿಸುತ್ತಾಳೆ ಅಂತಹ ಸಹೋದರನಿಗೆ ಅಕಾಲ ಮೃತ್ಯುಬಾರದಿರಲಿ ಮತ್ತು ಅವನಿಗೆ ಶಿಕ್ಷೆಯಾಗದಿರಲಿ ಎಂದು ಕೇಳುತ್ತಾಳೆ, ಯಮನು ತಥಾಸ್ತು ಎಂದು ವರವನ್ನು ನೀಡುತ್ತಾನೆ. ಕಾರ್ತಿಕ ಶುದ್ಧ ದ್ವೀತಿಯಾ ಭಾಯ್ ದುಜ್ ಎಂದು ಭಾರತದ ಉತ್ತರಭಾಗದಲ್ಲಿ ಪ್ರಖ್ಯಾತಿ, ಕರ್ನಾಟಕದಲ್ಲಿ ಭಾತೃಬಿದಿಗೆ ಎಂದು ಕರೆಯುತ್ತಾರೆ.
ಇಂದು ಸಹೋದರ ಸಹೋದರಿಯ ಮನೆಗೆ ಹೋಗಿ ಅವಳಿಗೆ ಉಡುಗೊರೆಯನ್ನು ಕೊಟ್ಟುಬರುವುದು ಸಂಪ್ರದಾಯ, ಇಂತಹ ಆಚರಣೆಯನ್ನು ನಾವು ಆಚರಿಸುವ ಮೂಲಕ ಸನಾತನ ಸಂಸ್ಕೃತಿಯನ್ನು ಜೀವಂತವಾಗಿಡಬೇಕು ಮತ್ತು ಮುಂದಿನ ಪೀಳಿಗೆಗೆ ಕಲಿಸಬೇಕು, ಈಗಾಗಲೆ ರಂಗೋಲಿ, ತೋರಣ, ಬಿಂದಿ ಮಾಯವಾಗಿದೆ, ಇವೆಲ್ಲವನ್ನು ಪುನಃ ಆಚರಣೆಗೆ ತರುವ ಅಗತ್ಯವಿದೆ, ಹಿಂದೂ ಧರ್ಮದ ಸನಾತನ ಧರ್ಮದ ಉಳಿವು ಆಚರಣೆಯಿಂದ ಮಾತ್ರ ಸಾಧ್ಯ. ಸನಾತನ ಸಂಸ್ಕೃತಿಯೊಂದೆ ಜಗತ್ತನ್ನು ವಿಪತ್ತಿನಿಂದ ರಕ್ಷಿಸ್ಪಡಲು ಸಾಧ್ಯ.
#ಬಲಿಪಾಡ್ಯಮಿ.
ತನ್ನಿಮಿತ್ತ ಬಲಿ ಮತ್ತು
ವಾಮನಾವತಾರದ ಕತೆ " ಬಲಿ ಚಕ್ರವರ್ತಿ "
ಬಲಿಯು ಪ್ರಹ್ಲಾದನ ಮೊಮ್ಮಗ.
ವಿರೋಚನನ ಮಗ.
ಸಪ್ತ ಚಿರಂಜೀವಿಗಳಲ್ಲಿ ಬಲಿಯೂ ಒಬ್ಬನು.
ಬಲಿಗೆ ಇಂದ್ರಸೇನನೆಂಬ ಹೆಸರೂ ಇದೆ.ಇವನ ಪತ್ನಿ ವಿಂಧ್ಯಾವಲಿ.
ಬಾಣಾಸುರ ಮತ್ತು ಧೃತರಾಷ್ಟ್ರ ಎಂಬಿಬ್ಬರು ಮಕ್ಕಳು.
ಒಮ್ಮೆ ಬಲಿಯು ಪ್ರಹ್ಲಾದನ ಮುಂದೆ ವಿಷ್ಣುವನ್ನು ನಿಂದಿಸಿ ಅವನಿಂದ
“ನೀನು ರಾಜ್ಯಭ್ರಷ್ಟನಾಗಿ ಅಧಃಪತನ ಹೊಂದು” ಎಂದು ಶಾಪವನ್ನು ಪಡೆದನು.
ಅನೇಕ ಅಶ್ವಮೇಧ ಯಾಗಗಳನ್ನು ಮಾಡಿ ಇಂದ್ರ ಪದವಿಯನ್ನು ಪಡೆಯುವ ಹುನ್ನಾರದಲ್ಲಿದ್ದನು.
ನರ್ಮದೆಯ ಉತ್ತರತೀರದ “ಭೃಗುಕಚ್ಛ”ದಲ್ಲಿ ಯಜ್ಞ ಮಾಡಿದನು.
ಆಗ ಅಲ್ಲಿಗೆ ಆಗಮಿಸಿದ ವಾಮನಾವತಾರಿ ವಿಷ್ಣುವಿನ ಅಪೇಕ್ಷೆಯಂತೆ
“ಮೂರು ಹೆಜ್ಜೆ”ಯಷ್ಟು ಭೂಮಿಯನ್ನು ದಾನವಾಗಿ ಕೊಟ್ಟನು.
ವಾಮನನು ತ್ರಿವಿಕ್ರಮನಾಗಿ,
ಒಂದು ಹೆಜ್ಜೆಯಿಂದ ಭೂಮಂಡಲವನ್ನು,
ಎರಡನೆ ಹೆಜ್ಜೆಯಿಂದ ನಭೋಮಂಡಲವನ್ನು ಅಳೆದು ಮೂರನೆಯ ಹೆಜ್ಜೆಯನ್ನು ಬಲಿಯು ಹೇಳಿದಂತೆ ಅವನ ತಲೆಯ ಮೇಲಿಟ್ಟು ರಸಾತಳಕ್ಕೆ ತಳ್ಳಿದನು.
ಅವನ ಭಕ್ತಿಗೆ ಮೆಚ್ಚಿದ ವಿಷ್ಣುವು ಇನ್ನು ಮುಂದೆ ಮನುಷ್ಯರು ಮಾಡುವ “ಶ್ರೋತ್ರಿಯನಿಲ್ಲದ ಶ್ರಾದ್ಧ ,
ಶ್ರದ್ಧೆ ಇಲ್ಲದ ದಾನ,
ವಿಧಿಹೀನವಾದ ಯಜ್ಞ,
ಗುರುಭಕ್ತಿ ಇಲ್ಲದೆ ಮಾಡಿದ ಕರ್ಮ,
ಅಶುಚಿಯಾಗಿ ಮಾಡುವ ಪೂಜಾವ್ರತಗಳು,
ಇವೆಲ್ಲದರ ಪುಣ್ಯಫಲಗಳು ನಿನಗೆ ಸೇರಲಿ” ಎಂದು ಹೇಳಿ “ಚಿರಂಜೀವತ್ವ” ಮತ್ತು ಸಾವರ್ಣಿಕ ಮನ್ವಂತರದಲ್ಲಿ ಇಂದ್ರಪದವಿಯ ವರವನ್ನಿತ್ತು,
ದಾರಿ ತಪ್ಪಿ ನಡೆದರೆ ವರುಣಪಾಶಬಂಧಿತನಾಗಿ ಅಧೋಗತಿ ಹೊಂದುವೆ ಎಂದು ಎಚ್ಚರಿಸಿ ಅದೃಶ್ಯನಾದನು.
ಮೊದಲೊಮ್ಮೆ ಬಲಿಯು ಇಂದ್ರನಿಂದ ಹತನಾಗಿ,
ಶುಕ್ರಾಚಾರ್ಯರಿಂದ ಬದುಕಿಸಲ್ಪಟ್ಟು, “ವಿಶ್ವಜಿತ್”ಯಾಗಮಾಡಿ ಅಗ್ನಿಯಿಂದ ದಿವ್ಯರಥಾಶ್ವಗಳನ್ನು, ಪ್ರಹ್ಲಾದನಿಂದ ಮಹಾಧನುಸ್ಸು,
ಅಕ್ಷಯ ಬತ್ತಳಿಕೆಯನ್ನು ಪಡೆದು
ಬಹು ಪರಾಕ್ರಮಿಯಾಗಿ ದೇವತೆಗಳನ್ನು ಸೋಲಿಸಿ ಇಂದ್ರ ಪದವಿಗೇರಿದಾಗ ದೇವತೆಗಳ ಮೊರೆಯಂತೆ ವಿಷ್ಣುವು ಅದಿತಿ ಕಶ್ಯಪರ ಪುತ್ರ ವಾಮನನಾಗಿ ಜನಿಸಿ ಬಲಿಯನ್ನು ನಿಗ್ರಹಿಸಿದನು.
ಈ ಬಲಿಯ ಇಂದ್ರ ಪದವಿಯ ಮಹತ್ವಾಕಾಂಕ್ಷೆಯನ್ನು ತಡೆಯಲು ವಿಷ್ಣುವು ವಾಮನಾವತಾರ ಎತ್ತಬೇಕಾಯಿತು.ವಾಮನ ಬಲಿಯನ್ನು ನಿಗ್ರಹಿಸಿದ ದಿನವೇ “ಬಲಿ ಪಾಡ್ಯಮಿ”,
ದೀಪಾವಳಿ ಎಂದು ನಾವು ಹಬ್ಬ ಆಚರಿಸುತ್ತೇವೆ.
” ವಾಮನ – ತ್ರಿವಿಕ್ರಮಾವತಾರ “
ಬಲಿ ಚಕ್ರವರ್ತಿಯನ್ನು ನಿಗ್ರಹಿಸಲು ವಿಷ್ಣುವಿನ ಐದನೆಯ ಅವತಾರವಿದು.
ಅದಿತಿ-ಕಶ್ಯಪರು ವಿಷ್ಣುವಿನಿಂದ ಈ ಮೊದಲೇ ತಮ್ಮ ಮಗನಾಗಿ
ಜನಿಸುವಂತೆ ವರ ಪಡೆದಿದ್ದರು.
ಹಿಂದೆ ಕಶ್ಯಪ ಋಷಿಯು ವರುಣನಿಂದ ಎರವಲಾಗಿ ಪಡೆದಿದ್ದ ಹಸುಗಳನ್ನು ಅವಧಿ ಮುಗಿದ ಬಳಿಕವೂ ಪತ್ನಿಯರ ಮಾತನ್ನು ಕೇಳಿ ಹಿಂದಿರುಗಿಸದೆ “ಭೂಲೋಕದಲ್ಲಿ ನೀವು ಮೂವರೂ ಜನಿಸಿರಿ. ಹಸುಗಳನ್ನು ನಿರ್ಬಂಧಿಸಿದಕ್ಕಾಗಿ ನಿಮಗೆ ದೀರ್ಘ ಕಾರಾಗೃಹ ವಾಸ ಪ್ರಾಪ್ತವಾಗಲಿ” ಎಂದು ವರುಣನ ಶಾಪಕ್ಕೆ ಈಡಾಗಿ ಮುಂದೆ ಇವರೇ ಕೃಷ್ಣನ ತಂದೆ ತಾಯಿಯರಾದ
“ವಸುದೇವ-ದೇವಕಿ-ರೋಹಿಣಿ” ಯರಾಗಿ ಜನ್ಮವೆತ್ತಿದರು.
ಬಲಿಯು ವಿಶ್ವಜಿತ್ ಯಾಗದ ಫಲದಿಂದ ದೇವತಗಳನ್ನು ಸೋಲಿಸಿ ಇಂದ್ರನಾದನು.
ಅದಿತಿಯು ತನ್ನ ಮಕ್ಕಳಾದ ದೇವತೆಗಳ ಹೀನಸ್ಥಿತಿಗೆ ಮರುಗಿ ಕಠಿಣವಾದ “ಪಯೋವ್ರತ” ವನ್ನಾಚರಿಸಿ,ಹಿಂದೆ ಪಡೆದ ವರದಂತೆ ವಿಷ್ಣುವನ್ನು ಮಗ “ವಾಮನ”ನಾಗಿ ಪಡೆದಳು.
ಮುಂದೆ ವಾಮನನ ಉಪನಯನದಲ್ಲಿ ಕಶ್ಯಪರು ಉಡಿದಾರ,ಅದಿತಿಯು ಕೌಪೀನ ಕಟ್ಟಿದರೆ,ಬ್ರಹ್ಮನು ಜನಿವಾರ ಹಾಕಿ,
ಸೂರ್ಯನಿಂದ ಗಾಯತ್ರಿ ಉಪದೇಶವಾಯಿತು.
ಸಪ್ತರ್ಷಿಗಳು ಕುಶಾಜಿನವನ್ನು,
ಸರಸ್ವತಿಯು ಅಕ್ಷಮಾಲೆಯನ್ನಿತ್ತರೆ,
ಪಾರ್ವತಿಯು ಮಾತೃಭಿಕ್ಷೆ ನೀಡಿದಳು.
ಆಗ ಬಲಿಯು ನರ್ಮದಾ ತೀರದಲ್ಲಿ ಯಜ್ಞದೀಕ್ಷಿತನಾಗಿದ್ದನು.
ಅಲ್ಲಿಗೆ ಬಂದ ವಾಮನನು ಅವನಿಂದ ಮೂರು “ಹೆಜ್ಜೆಯಷ್ಟು” ಭೂಮಿಯನ್ನು ದಾನವಾಗಿ ಪಡೆದು,ಮೊದಲ ಹೆಜ್ಜೆಯಿಂದ ಸಮಸ್ತ ಭೂಮಂಡಲ,ಎರಡನೆಯದರಿಂದ ನಭೋಮಂಡಲವನ್ನು ಅಳೆದು
ಮೂರನೆಯ ಹೆಜ್ಜೆಗೆ ಜಾಗವಿಲ್ಲದೆ ಬಲಿಯ ಅಪೇಕ್ಷೆಯಂತೆ ಅವನ ತಲೆಯ ಮೇಲೆ ಪಾದವಿಟ್ಟು ರಸಾತಲಕ್ಕೆ ತಳ್ಳಿ ಅಲ್ಲಿ ರಾಜ್ಯಭಾರ ಮಾಡಿಕೊಂಡಿರುವಂತೆ ತಿಳಿಸಿ,ಮುಂದಿನ ಕಲ್ಪದಲ್ಲಿ “ಇಂದ್ರ”ನಾಗುವಂತೆ ವರವನ್ನಿತ್ತನು.
ನಾವಿಂದು ಆಚರಿಸುವ #ದೀಪಾವಳಿ_ಬಲಿಪಾಡ್ಯಮಿ”
ಹಬ್ಬವು ಬಲಿ ಮತ್ತು ವಾಮನನ ನೆನಪಿನಲ್ಲಿ..
ಅಂದು ರಾತ್ರಿ ಬಲಿ ಚಕ್ರವರ್ತಿ ಭೂಮಿಗೆ ಬಂದು ತನ್ನ ಪ್ರಜೆಗಳು ಸುಖ ಶಾಂತಿಯಿಂದ ಇದ್ದಾರೆಯೇ ಎಂದು ನೋಡುತ್ತಾನೆ ಎಂಬ ನಂಬಿಕೆ ಇದೆ.
ಅದಕ್ಕಾಗಿ ಅಂದು ದೀಪಗಳ ಸಾಲು ಹಚ್ಚಿ ಹೊಲ ಗದ್ದೆ ತೋಟಗಳಲ್ಲಿಯೂ ದೀಪ-ಕಾಕಡ ಹಚ್ಚುತ್ತೇವೆ.
ವಿರಾಟ್ ಸ್ವರೂಪದ ವಿಷ್ಣುವು ಬಲಿಯನ್ನು ಮೂರು ಹೆಜ್ಜೆಯಷ್ಟು ಭೂಮಿಯನ್ನು “ಬೇಡು” ವಾಗ ಮೂರಡಿ ಎತ್ತರದ
“ವಾಮನ”ನಾದನು.
ಅಂದಿನಿಂದ ಬೇಡುವವರು “ಸಣ್ಣವರಾಗುತ್ತಾರೆ,ಕೊಡುವವರು ದೊಡ್ಡವರಾಗುತ್ತಾರೆಂಬ” “ನಾಣ್ನುಡಿ” ಬಂದಿರಬೇಕು.
ತ್ರಿವಿಕ್ರಮನಾಗಿ ಮೇಲೆತ್ತಿದ ಎಡಕಾಲಿನ ಉಂಗುಷ್ಠ ತಾಗಿ ನಭೋಮಂಡಲದಿಂದ ಸುರಿಯ ತೊಡಗಿದ ಜಲವೇ “ಗಂಗೆ”. ಅದು ನಮಗೆ ಪವಿತ್ರ ಜಲ.
ಇದರಿಂದಾಗಿಯೇ ಗಂಗೆ “ವಿಷ್ಣುಪಾದಾಬ್ಜ ಸಂಜಾತೆ” ಎನಿಸಿ ಕೊಂಡಿದ್ದಾಳೆ.